ಡಿಸೆಂಬರ್‌ ವೇಳೆಗೆ ನಗರದಲ್ಲಿ 46 ಸಾವಿರ ಮನೆ ನಿರ್ಮಾಣ

By Kannadaprabha NewsFirst Published Jan 15, 2020, 10:02 AM IST
Highlights

ಡಿಸೆಂಬರ್  ವೇಳೆಗೆ ಬೆಂಗಳೂರಿನಲ್ಲಿ 46 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ. 

ಬೆಂಗಳೂರು (ಜ.15): ಮುಖ್ಯಮಂತ್ರಿಯವರ ವಸತಿ ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ ವರ್ಷಾಂತ್ಯದ ವೇಳೆಗೆ 46 ಸಾವಿರ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳ ನಿರ್ಮಾಣ ಯೋಜನೆಯನ್ನು ಪ್ರಕಟಿಸಿದ್ದರು. ಯೋಜನೆಯನ್ನು ಕೇವಲ ಘೋಷಣೆ ಮಾಡಲಾಯಿತೇ ಹೊರತು ಒಂದೇ ಒಂದು ಮನೆಯನ್ನೂ ಸಹ ನಿರ್ಮಾಣ ಮಾಡಿಲ್ಲ. ಕಾರ್ಯಾದೇಶವನ್ನು ನೀಡಲಾಗಿದ್ದರೂ ಒಂದಿಂಚೂ ಭೂಮಿ ಗುರುತಿಸಿ ಕೊಟ್ಟಿರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಆರೇಳು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಾಗ ಗುರುತಿಸಿಕೊಟ್ಟಿದ್ದು, ಆರು ಪ್ಯಾಕೇಜ್‌ಗಳಲ್ಲಿ ಮನೆಗಳ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಮುಂದಿನ ಡಿಸೆಂಬರ್‌ ವೇಳೆಗೆ 46 ಸಾವಿರ ಮನೆಗಳನ್ನು ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.

ಇನ್ಮುಂದೆ ಬಹುಮಹಡಿ ಕಟ್ಟಡ ಕಟ್ಟಲ್ಲ:

ಇನ್ನು ಮುಂದೆ ಬೆಂಗಳೂರು ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ. ನಗರ ವ್ಯಾಪ್ತಿಯಲ್ಲಿ ಎಕರೆಗಟ್ಟಲೆ ಜಮೀನು ಸಿಗುತ್ತಿಲ್ಲ. ಹಾಗಾಗಿ 46 ಸಾವಿರ ಮನೆಗಳನ್ನು ಹೊರತುಪಡಿಸಿ ನಂತರದ ಮನೆಗಳನ್ನು ಜಿ+3 ಮಟ್ಟಕ್ಕೆ ಮಾತ್ರ ಕಟ್ಟಲಾಗುವುದು. 14 ಮಹಡಿಯಂತಹ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡುವುದಿಲ್ಲ. ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಗಳಲ್ಲಿ ಜಿ+3, ಜಿ+4, ಜಿ+5 ಕಟ್ಟಡಗಳ ನಿರ್ಮಾಣ ಮುಂದುವರೆಯಲಿದೆ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

2023ರೊಳಗೆ ಬೆಂಗಳೂರು ಮಹಾ ನಗರದಲ್ಲಿರುವ ಕೊಳಗೇರಿ ಪ್ರದೇಶಗಳನ್ನು ಕೊಳಗೇರಿ ಮುಕ್ತ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲೇ 300ಕ್ಕೂ ಹೆಚ್ಚು ಕೊಳಗೇರಿ ಪ್ರದೇಶಗಳಿದ್ದು, ಕನಿಷ್ಠ ಪಕ್ಷ ಶೇ.70ರಷ್ಟನ್ನಾದರೂ ಕೊಳಗೇರಿ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೇಳಬೇಕು. ಯಾರಿಗೆ ಯಾವ ಖಾತೆ ಸೇರಿದಂತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಬೇಕು. ದೇವರಾಣೆ ನನಗೆ ಗೊತ್ತಿಲ್ಲ.

-ವಿ.ಸೋಮಣ್ಣ, ಸಚಿವ.

click me!