ಬೆಂಗಳೂರು ಮೆಟ್ರೋ ಸಂಸ್ಥೆಯ ಕೆಂಪಾಪುರ-ಜೆಪಿ ನಗರ ನಾಲ್ಕನೇ ಹಂತ ಮತ್ತು ಹೊಸಹಳ್ಳಿ-ಕಡಬಗೆರೆ ನಡುವಿನ ಒಟ್ಟು 44.65 ಕಿ.ಮೀ.ಗಳ ಫೇಸ್ 3ಎ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.
ಬೆಂಗಳೂರು (ನ.19): ಬೆಂಗಳೂರು ಮೆಟ್ರೋ ಸಂಸ್ಥೆಯ ಕೆಂಪಾಪುರ-ಜೆಪಿ ನಗರ ನಾಲ್ಕನೇ ಹಂತ ಮತ್ತು ಹೊಸಹಳ್ಳಿ-ಕಡಬಗೆರೆ ನಡುವಿನ ಒಟ್ಟು 44.65 ಕಿ.ಮೀ.ಗಳ ಫೇಸ್ 3ಎ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆ ಇನ್ನಷ್ಟೆ ಸಿಗಬೇಕಿದ್ದು, 2028ರೊಳಗೆ ಯೋಜನೆ ಪೂರ್ಣಗೊಳಿಸುವ ಗುರಿಯನ್ನು ಮೆಟ್ರೊ ನಿಗಮ ಇಟ್ಟುಕೊಂಡಿದೆ. ಯೋಜನೆಯ ವೆಚ್ಚವನ್ನು 16,328 ಕೋಟಿ ಎಂದು ಅಂದಾಜಿಸಲಾಗಿದೆ. ಕೆಂಪಾಪುರದಿಂದ ಜೆಪಿ ನಗರ ನಾಲ್ಕನೇ ಹಂತದವರೆಗಿನ 32.15 ಕಿಮೀಗಳ ಮೊದಲ ಕಾರಿಡಾರ್‌ನಲ್ಲಿ 22 ನಿಲ್ದಾಣಗಳು ಬರಲಿವೆ. ಹೊಸಹಳ್ಳಿ-ಕಡಬಗೆರೆ ನಡುವಿನ 12.50 ಕಿಮೀ ಉದ್ದದ ಎರಡನೇ ಕಾರಿಡಾರ್‌ನಲ್ಲಿ 9 ನಿಲ್ದಾಣಗಳು ನಿರ್ಮಾಣವಾಗಲಿವೆ.
ಈ ಎರಡು ಕಾರಿಡಾರ್‌ಗಳು ಸುಮನಹಳ್ಳಿ ಕ್ರಾಸ್‌ನಲ್ಲಿ ಸಂಧಿಸಲಿವೆ. ಮೊದಲ ಕಾರಿಡಾರ್‌ನಲ್ಲಿ ಕೆಂಪಾಪುರ, ಹೆಬ್ಬಾಳ ರೈಲ್ವೇ ನಿಲ್ದಾಣ, ನಾಗಶೆಟ್ಟಿಹಳ್ಳಿ, ಬಿಇಎಲ್ ವೃತ್ತ, ಮುತ್ಯಾಲ ನಗರ, ಪೀಣ್ಯ, ಕಂಠೀರವ ನಗರ, ಸ್ವಾತಂತ್ರ ಹೋರಾಟಗಾರರ ಕಾಲೋನಿ, ಚೌಡೇಶ್ವರಿ ನಗರ, ಸುಮನಹಳ್ಳಿ ಕ್ರಾಸ್, ಬಿಡಿಎ ಕಾಂಪ್ಲೆಕ್ಸ್ ನಾಗರಬಾವಿ, ಪಾಪರೆಡ್ಡಿ ಪಾಳ್ಯ, ವಿನಾಯಕ ಬಡಾವಣೆ, ನಾಗರಬಾವಿ ವೃತ್ತ, ಮೈಸೂರು ರೋಡ್, ದ್ವಾರಕ ನಗರ, ಹೊಸಕೆರೆಹಳ್ಳಿ, ಕಾಮಾಖ್ಯ ಜಂಕ್ಷನ್, ಕದಿರೆನಹಳ್ಳಿ, ಜೆಪಿ ನಗರ, ಜೆಪಿನಗರ 5ನೇ ಹಂತ ಮತ್ತು ಜೆಪಿ ನಗರ ನಾಲ್ಕನೇ ಹಂತ ನಿಲ್ದಾಣಗಳು ಬರಲಿವೆ. ಎರಡನೇ ಕಾರಿಡಾರ್‌ನಲ್ಲಿ ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಕ್ರಾಸ್, ಸುಂಕದಕಟ್ಟೆ, ಹೆರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಬಡಾವಣೆ ಮತ್ತು ಕಡಬಗೆರೆ ನಿಲ್ದಾಣಗಳು ಬರಲಿವೆ. ಫೇಸ್ 3ಎ ಕಾರಿಡಾರ್ ಒಂದರಲ್ಲಿ ಒಟ್ಟು 9 ಇಂಟರ್ ಜೆಂಜ್ ನಿಲ್ದಾಣಗಳು ಬರಲಿವೆ.
ಬೆಂಗ್ಳೂರಿನ 3ನೇ ಹಂತದ ಮೆಟ್ರೋಗೆ 16 ಸಾವಿರ ಕೋಟಿ ವೆಚ್ಚ..!
ಜೆಪಿ ನಗರ ನಾಲ್ಕನೇ ಹಂತದಲ್ಲಿ ಫೇಸ್ 2ರ ನಿರ್ಮಾಣ ಹಂತದಲ್ಲಿರುವ ನಾಗವಾರ-ಕಾಳೇನ ಅಗ್ರಹಾರ ಮಾರ್ಗ, ಜೆಪಿ ನಗರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ನಾಗಸಂದ್ರ-ಯಲಚೇನಹಳ್ಳಿ ಮಾರ್ಗ, ಕಾಮಾಕ್ಯ ಜಂಕ್ಷನ್‌ನಲ್ಲಿ ಬಿಎಂಟಿಸಿ ಬಸ್ ಟರ್ಮಿನಲ್ ಜೊತೆಗೆ, ಮೈಸೂರು ರೋಡ್‌ನಲ್ಲಿ ಚಾಲ್ತಿಯಲ್ಲಿರುವ ಬೈಯ್ಯಪ್ಪನಹಳ್ಳಿ-ಕೆಂಗೇರಿ ಮಾರ್ಗ, ಪೀಣ್ಯದಲ್ಲಿ ಯಲಚೇನಹಳ್ಳಿ-ನಾಗಸಂದ್ರ ಮಾರ್ಗ, ಬಿಇಎಲ್ ವೃತ್ತ ಮತ್ತು ಹೆಬ್ಬಾಳ ರೈಲ್ವೇ ನಿಲ್ದಾಣದಲ್ಲಿ ಸಬ್ ಅರ್ಬನ್ ರೈಲು ಜೊತೆಗೆ ಹಾಗೆಯೇ ಕೆಂಪಾಪುರದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕೆ. ಆರ್.ಪುರ-ವಿಮಾನ ನಿಲ್ದಾಣ ಮೆಟ್ರೋ ಮಾರ್ಗದ ಜೊತೆ ಸಂಧಿಸಲಿದೆ. ಕಾರಿಡಾರ್ ಎರಡರಲ್ಲಿ ಹೊಸಹಳ್ಳಿಯಲ್ಲಿ ಬೈಯ್ಯಪ್ಪನಹಳ್ಳಿ-ಕೆಂಗೇರಿ ಮತ್ತು ಸುಮನಹಳ್ಳಿ ಕ್ರಾಸ್‌ನಲ್ಲಿ ಕೆಂಪಾಪುರ-ಜೆಪಿ ನಗರ ಕಾರಿಡಾರನ್ನು ಸಂಧಿಸಲಿದೆ. ಸುಂಕದಕಟ್ಟೆಯಲ್ಲಿ ಡಿಪೋ ನಿರ್ಮಾಣದ ಯೋಜನೆ ರೂಪಿಸಲಾಗಿದೆ.
ವಿಶೇಷ ಯೋಜನೆ ಮಾದರಿಯಲ್ಲಿ ಹಣಕಾಸು ಒದಗಿಸುವ ತೀರ್ಮಾನಕ್ಕೆ ಬರಲಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.20ರಷ್ಟುವೆಚ್ಚ ಭರಿಸಲಿದೆ. ಉಳಿದ ಶೇ.60ರಷ್ಟುಹಣಕ್ಕೆ ಅನ್ಯ ಹಣಕಾಸು ಸಂಸ್ಥೆಗಳು, ಖಾಸಗಿ ಸಹಭಾಗಿತ್ವದ ಮೊರೆ ಹೋಗಬೇಕಿದೆ. ಭೂ ಸ್ವಾಧೀನ ಮತ್ತು ಪುನರುಜ್ಜೀವನ ಹಾಗೂ ಪುನಶ್ವೇತನ ವೆಚ್ಚವನ್ನು ರಾಜ್ಯ ಸರ್ಕಾರವೇ ಪ್ರತ್ಯೇಕವಾಗಿ ಭರಿಸಬೇಕಿದೆ. ಆದರೆ ಮೆಟ್ರೋ ಯೋಜನೆಯು ಕೇಂದ್ರದ ಗತಿ ಶಕ್ತಿ ಯೋಜನೆಯ ವ್ಯಾಪ್ತಿಯಲ್ಲಿ ಬರುವುದರಿಂದ ಕೇಂದ್ರ ಸರ್ಕಾರ ತನ್ನ ನೆರವಿನ ಪಾಲನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಡಿಪೋ ಸೇರಿದಂತೆ ಯೋಜನೆಗೆ ಒಟ್ಟು 110 ಎಕರೆ ಭೂ ಸ್ವಾಧೀನಗೊಳಿಸಬೇಕಿದೆ. ಇದರಲ್ಲಿ ಶೇ.85 ಭಾಗ ಸರ್ಕಾರಿ ಜಮೀನಿದ್ದು ಉಳಿದ ಶೇ.15 ಭಾಗ ಖಾಸಗಿಯವರಿಗೆ ಸೇರಿದೆ.
ಹಣ ಸಂಗ್ರಹಕ್ಕೆ ವಿನೂತನ ಮಾರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಧಿಗಳನ್ನು, ಹಣಕಾಸು ಸಂಸ್ಥೆಗಳ ಸಾಲವನ್ನು ನೆಚ್ಚಿಕೊಂಡು ಯೋಜನೆ ಮಾಡುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಲು ಮೆಟ್ರೋ ನಿಗಮಕ್ಕೆ ಸೂಚಿಸಲಾಗಿದೆ. ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡುವುದು, ಕಟ್ಟಡ ಅಭಿವೃದ್ಧಿಯ ಮೂಲಕ ಆದಾಯ, ನಿಲ್ದಾಣಗಳ ಹೆಸರು ಮಾರಾಟ ಮಾಡುವ ಮೂಲಕ, ಜಾಹೀರಾತುಗಳಿಗೆ ಸ್ಥಳಾವಕಾಶ ಕಲ್ಪಿಸುವುದು ಸೇರಿದಂತೆ ವಿನೂತನ ಮಾರ್ಗಗಳ ಮೂಲಕ .550 ಕೋಟಿ ಗಳಿಸುವಂತೆ ಹೇಳಲಾಗಿದೆ. ಜಾಹೀರಾತು ಮತ್ತು ಕಾರ್ಪೋರೇಟ್ ನಿಧಿ ಸಂಗ್ರಹಕ್ಕೆ ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರು: ನಮ್ಮ ಮೆಟ್ರೋ ಆನ್‌ಲೈನ್ ಟಿಕೆಟ್‌ಗೆ ಭರ್ಜರಿ ರೆಸ್ಪಾನ್ಸ್..!
ಪ್ರಯಾಣಿಕರ ಲೆಕ್ಕಾಚಾರ
*ಲಕ್ಷದಲ್ಲಿ ಪ್ರತಿ ದಿನದ ಪ್ರಯಾಣಿಕರ ಸಂಖ್ಯೆ
ಕಾರಿಡಾರ್ 2028 2031 2041 2051
ಕಾರಿಡಾರ್1 4.63 4.89 5.91 6.66
ಕಾರಿಡಾರ್2 1.72 1.81 2.18 2.46
ಒಟ್ಟು 6.35 6.70 8.10 9.12