
ಚಿಕ್ಕೋಡಿ (ಫೆ.02): ಅವರೆಲ್ಲ ಅಲ್ಲಿ ವಾಸಿಸೋಕೆ ಶುರು ಮಾಡಿ ಬರೊಬ್ಬರಿ 40 ವರ್ಷಗಳಾಗಿವೆ. ಜಲಾಶಯದ ಹಿನ್ನೀರಿನ ಜಾಗದಲ್ಲಿ ವಾಸವಿದ್ದ ಆ ಊರಿಗೆ ಸರ್ಕಾರ ಎಲ್ಲ ಮೂಲ ಸೌಕರ್ಯಗಳನ್ನು ಕೂಡ ಕಲ್ಪಿಸಿಕೊಟ್ಟಿದೆ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು, ರಸ್ತೆ, ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳೂ ಸಹ ಅಲ್ಲಿ ಅನುಷ್ಠಾನ ಆಗಿದ್ದವು. ಆದರೆ ಇತ್ತಿಚಿಗೆ ಆ ಜನಕ್ಕೆ ಒಂದು ನೋಟಿಸ್ ಬಂದಿದ್ದು ಜನಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೈಯಲ್ಲಿ ದಾಖಲಾತಿ ಹಿಡಿದು ನಿಂತಿರುವ ಜನ, ಸುಸಜ್ಜಿತ, ಸಿಸಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ.. ವಿದ್ಯುತ್ ಸಂಪರ್ಕ, ಇದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಂಚಿನಾಳ ಗ್ರಾಮ ಪಂಚಾಯತ ವ್ಯಾಪ್ತಿಯ ಜಿನರಾಳ ಗ್ರಾಮವಾಗಿದೆ. ಇಲ್ಲಿ ಕಳೆದ 40 ವರ್ಷಗಳಿಂದ 100ಕ್ಕೂ ಹೆಚ್ಚು ಕುಟುಂಬಗಳು ವಾಸಿವಿದೆ. 40 ವರ್ಷಗಳಿಂದ ವಾಸವಿರುವ ಇವರಿಗೆ ಕರ್ನಾಟಕ ನೀರಾವರಿ ನಿಗಮದಿಂದ ನೋಟಿಸ್ ಜಾರಿ ಮಾಡಲಾಗಿದೆ. ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಒತ್ತುವರಿಯಾದ ಪ್ರದೇಶಗಳ ತೆರವಿಗೆ ಕೋರ್ಟ್ ನಿರ್ದೇಶನ ನೀಡಿದೆ. ಅದರಂತೆ ಅಧಿಕಾರಿಗಳು ಇಲ್ಲಿ ವಾಸಿಸೋ ಜನರಿಗೆ ನೋಟಿಸ್ ನೀಡಿದ್ದು ಜನ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವ ಅಧಿಕಾರ ಡೀಸಿಗೆ ಮಾತ್ರ: ಹೈಕೋರ್ಟ್
ಜಾಗ ಖಾಲಿ ಮಾಡಿಸದಂತೆ ಸಿಎಂಗೆ ಶಾಸಕರ ಮನವಿ: ಸರ್ಕಾರದಿಂದ ಗ್ರಾಮದಲ್ಲಿ ಎಲ್ಲಾ ರೀತಿಯ ಅಭಿವೃದ್ದಿ ಕೆಲಸ ಆಗಿದೆ. ಜೆಜೆಎಮ್, ವಸತಿ ಯೋಜನೆ ಸೇರಿದಂತೆ ಒತ್ತುವರಿ ಮಾಡಲಾಗಿದ ಜಾಗದಲ್ಲಿಯೇ ಸರ್ಕಾರವೇ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿದೆ. ಈಗ ಏಕಾಏಕಿ ನೋಟಿಸ್ ನೀಡಿ ಜಾಗ ಖಾಲಿ ಮಾಡಿ ಎಂದರೆ ನಾವು ಎಲ್ಲಿಗೆ ಹೋಗಬೇಕು ಅಂತ ಜನ ಪ್ರಶ್ನೆ ಕೇಳ್ತಿದ್ದಾರೆ. ಕೇವಲ ಜಿನರಾಳ ಗ್ರಾಮ ಅಷ್ಟೆ ಅಲ್ಲದೆ ಪಕ್ಕದ ಬೇಡರಹಟ್ಟಿ ಗ್ರಾಮದಲ್ಲೂ ಸಹ ನೀರಾವರಿ ನಿಗಮದ ಜಾಗ ಒತ್ತುವರಿ ಆಗಿದೆ. ಅದನ್ನ ತೆರವು ಮಾಡಬೇಕು ಅಂತ ನಿಮಗದಿಂದ ನೋಟಿಸ್ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲಿನ ಜನರನ್ನ ತೆರವು ಗೊಳಿಸಲದಿರಲು ಕಾರಣಗಳನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿ ಮುಖ್ಯಮಂತ್ರಿಗಳು ಇದರ ಮಧ್ಯಸ್ಥಿಕೆ ವಹಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.
Kodagu :26 ಕೆರೆಗಳಲ್ಲಿ ಮನೆ, ತೋಟ ನಿರ್ಮಾಣ: ಒತ್ತುವರಿ ತೆರವು ಮಾಡದ ಅಧಿಕಾರಿಗಳು
ಜಾಗ ಖಾಲಿ ಮಾಡುವುದಿಲ್ಲವೆಂದು ಪಟ್ಟು: ಒಟ್ಟಿನಲ್ಲಿ ಸರ್ಕಾರಿ ಜಾಗ ಒತ್ತುವರಿ ಆಗಿದೆ ಅಂತ ಗೊತ್ತಿದ್ದರೂ ಸಹ ಆ ಜಾಗದಲ್ಲಿ ಜನರಿಗೆ ವಾಸ ಮಾಡೋಕೆ ಅವಕಾಶ ನೀಡಿದ್ದು ಅಲ್ಲದೆ ಅಲ್ಲಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನ ಮಾಡಿದೆ. ಈಗ ಜಾಗ ಖಾಲಿ ಮಾಡಿ ಅಂತಿರೋ ಅಧಿಕಾರಿಗಳ ವಿರುದ್ದ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಜಾಗ ಖಾಲಿ ಮಾಡಲ್ಲ ಅಂತ ಜನ ಪಟ್ಟು ಹಿಡಿದಿದ್ದು, ಇದೆಲ್ಲವೂ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವದನ್ನು ಕಾದು ನೋಡಬೇಕಿದೆ.