
ಬೆಂಗಳೂರು (ಫೆ.25): ‘ನವ ಬೆಂಗಳೂರಿನಿಂದ ನವ ಕರ್ನಾಟಕ- ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ’ ಸರ್ಕಾರದ ಸಂಕಲ್ಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಎಂದು ಹೇಳಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ಅಂತಾರಾಷ್ಟ್ರೀಯ ಖ್ಯಾತಿಯನ್ನು ಉಳಿಸಿ ಬೆಳೆಸಲು ಅಗತ್ಯವಿರುವ ಎಲ್ಲಾ ಕಾರ್ಯವನ್ನು ತೆಗೆದುಕೊಂಡಿದ್ದೇವೆ.
ಇಲ್ಲಿನ ಜೀವನ ಶೈಲಿ, ಅರ್ಥಿಕ ಸ್ಥಿತಿ, ಪರಿಸರಕ್ಕೆ ಪೂರಕವಾಗಿ ನಗರವನ್ನು ಕಟ್ಟಬೇಕು. ಈ ದೃಷ್ಟಿಯಿಂದ ನಗರದ ಎಲ್ಲ ಪ್ರದೇಶಗಳ ಸಮಾನ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದು ತಿಳಿಸಿದರು. ಭಾರತವೆಂದರೆ ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅಂದರೆ ಬೆಂಗಳೂರು ಎಂದು ಕೇಳುಷ್ಟರ ಮಟ್ಟಿಗೆ ಬೆಂಗಳೂರು ಖ್ಯಾತಿ ಪಡೆದಿದೆ. ನವ ಉದ್ಯಮಗಳು, ವಿಶೇಷವಾಗಿ ಐಟಿ-ಬಿಟಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು (ಆರ್ ಅಂಡ್ ಡಿ ಸೆಂಟರ್) ಇದಕ್ಕೆ ಕಾರಣವಾಗಿದೆ. ಅದೇ ನಮ್ಮ ಶಕ್ತಿಯಾಗಿದೆ. ಈ ಗೌರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಗರವನ್ನು ಕಟ್ಟಬೇಕಿದೆ ಎಂದರು.
Karnataka Politics: ಕಾಂಗ್ರೆಸ್‌ಗೆ ಭವಿಷ್ಯವೇ ಇಲ್ಲ: ಸಿಎಂ ಬೊಮ್ಮಾಯಿ
ಮಹದೇವಪುರಕ್ಕೆ ಹೆಚ್ಚಿನ ಒತ್ತು: ಅತಿ ಹೆಚ್ಚು ಐಟಿ ಕಂಪನಿಗಳಿರುವ ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕಿದೆ. ಕಾವೇರಿ 4ನೇ ಹಂತದ ಕಾಮಗಾರಿ, ಯುಜಿಡಿ ಕಾಮಗಾರಿ ಸೇರಿದಂತೆ ಜನೋಪಯೋಗಿ ಕೆಲಸಗಳು ಈ ಕ್ಷೇತ್ರದಲ್ಲಿ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಮಹದೇವಪುರ ಬೆಂಗಳೂರಿನಲ್ಲಿ ಅತ್ಯುತ್ತಮ ಪ್ರದೇಶವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಗರದ ವಿಕ್ಟೋರಿಯಾ, ಬೌರಿಂಗ್, ಕೆ.ಸಿ.ಜನರಲ್ ಆಸ್ಪತ್ರೆಗಳ ಮಾದರಿಯಲ್ಲಿ ನಗರದ ಈಶಾನ್ಯ ಭಾಗದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಾರಂಭಿಸಲಾಗಿದೆ.
ನಗರೋತ್ಥಾನ ಯೋಜನೆಯಡಿ ಬೆಂಗಳೂರಿಗೆ 6 ಸಾವಿರ ಕೋಟಿ ರು. ಒದಗಿಸಲಾಗಿದೆ. 1,500 ಕೋಟಿ ರು. ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿಗೊಳಿಸಲಾಗುವುದು. ಸಂಸ್ಕರಿಸಿದ ನೀರನ್ನು ರಾಜಕಾಲುವೆಗೆ ಹರಿಸಲು ನಿರ್ದೇಶಿಸಲಾಗಿದೆ. ಬೆಂಗಳೂರಿನ 12 ಕಾರಿಡಾರ್‌ಗಳಲ್ಲಿ ಸಿಗ್ನಲ್ ರಹಿತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಅರವಿಂದ ಲಿಂಬಾವಳಿ, ಗೋವಿನಾಥ ರೆಡ್ಡಿ, ರಮೇಶ ಗೌಡ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಉಪಸ್ಥಿತರಿದ್ದರು.
Anganwadi Workers: ಅಂಗನವಾಡಿ ಸಿಬ್ಬಂದಿಗೆ ಬಜೆಟ್‌ನಲ್ಲಿ ಬಂಪರ್ ಸುದ್ದಿ
2024ಕ್ಕೆ ಮೆಟ್ರೋ 2ನೇ ಹಂತ ಪೂರ್ಣ: 2ನೇ ಹಂತದ ಮೆಟ್ರೋ ವಿಸ್ತರಣೆ ಕಾಮಗಾರಿಯನ್ನು 2025ರ ಬದಲು 2024ರೊಳಗೆ ಮುಗಿಸಲು ಸೂಚಿಸಿದ್ದು, ಮುಂದಿನ ಹಂತಕ್ಕೂ ಈಗಲೇ ಸಿದ್ಧತೆ ಮಾಡಿಕೊಳ್ಳಲು ತಿಳಿಸಲಾಗಿದೆ. ಕಾವೇರಿ 4 ನೇ ಹಂತವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಹೆಬ್ಬಾಳದಿಂದ ರಿಂಗ್ ರೋಡ್‌ನಿಂದ ಮಹದೇವಪುರದವರೆಗೆ ಫ್ಲೈಓವರ್ ಹಾಗೂ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು. ಗೊರಗುಂಟೆಪಾಳ್ಯ ಜಂಕ್ಷನ್‌ನ್ನು ಕೂಡ ಸುಗಮಗೊಳಿಸಿ ಎತ್ತರಿಸಿದ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಚಾಲನೆ ನೀಡಿದ ಕಾಮಗಾರಿ ವಿವರ
* ದೊಡ್ಡಮೆಕ್ಕುಂದಿ ವಾರ್ಡ್‌ನಲ್ಲಿ 250 ಹಾಸಿಗೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆ
* ವರ್ತೂರು ವಾರ್ಡ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ
* 20 ಕೋಟಿ ರು. ವೆಚ್ಚದಲ್ಲಿ 5.5 ಕಿ.ಮೀ ಉದ್ದದ 150 ಅಡಿಗಳ ಸಿಡಿಪಿ ರಸ್ತೆ ಕಾಮಗಾರಿ ಭೂಮಿ ಪೂಜೆ
* 6.19 ಕೋಟಿ ರು. ವೆಚ್ಚದಲ್ಲಿ ಮಾರತ್ತಹಳ್ಳಿ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ
* ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ