ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಇನ್ನೆರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಇನ್ನೆರಡು ವರ್ಷದಲ್ಲಿ ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ನಗರದಲ್ಲಿ ಜಿಲ್ಲಾ ಇಲಾಖೆಯಿಂದ ನೂತನವಾಗಿ ನಿರ್ಮಿಸಲಾಗಿರುವ ಪೊಲೀಸ್ ವಸತಿ ಸಮುಚ್ಛಯ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಸಹ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದರು.
undefined
ಪ್ರತಿ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಹಾಗಾಗಿ, ಖಾಲಿ ಹುದ್ದೆ ಭರ್ತಿ ಮಾಡುವುದು ಅಗತ್ಯವಿದೆ ಎಂದು ಹೇಳಿದರು.
545 ಜನ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿ ಮಾಡುವ ವೇಳೆ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. 1 ಸಾವಿರಕ್ಕೂ ಅಧಿಕ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳು ಖಾಲಿ ಉಳಿದಿವೆ. ಇಲಾಖೆಯಲ್ಲಿ ಈ ಹುದ್ದೆಗಳಿಗೆ ಬಡ್ತಿ ಕೊಡಲು ಅವಕಾಶವಿದ್ದು, 600 ಜನ ಸಹಾಯಕ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಇನ್‌ಸ್ಪೆಕ್ಟರ್‌ಗಳಾಗಿ ಬಡ್ತಿ ನೀಡಲಾಗಿದೆ. ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದರು.
ಕಳೆದ ಬಾರಿ 12ಸಾವಿರ ಪೊಲೀಸರಿಗೆ ಬಡ್ತಿ ಕೊಟ್ಟಿದ್ದೇವೆ. ಈ ಬಾರಿಯೂ ಎಎಸ್‌ಐ ಹುದ್ದೆಯಿಂದ ಪಿಎಸ್‌ಐ ಹುದ್ದೆಗೆ ಮೊದಲನೇ ಹಂತದಲ್ಲಿ ಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ ಇಬ್ಬರು ಎಎಸ್ಪಿ
ರಾಜ್ಯದಲ್ಲಿ 30 ಅಡಿಷನಲ್ ಎಸ್ಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಇಬ್ಬರು ಅಡಿಷನಲ್ ಎಸ್ಪಿ ನೇಮಿಸಲು ತೀರ್ಮಾನಿಸಲಾಗಿದೆ. ಅಪರಾಧ ವಿಭಾಗಕ್ಕೆ ಒಬ್ಬರು, ಕಾನೂನು ಸುವ್ಯವಸ್ಥೆ ವಿಭಾಗಕ್ಕೆ ಒಬ್ಬರು ಸೇರಿ ಒಂದು ಜಿಲ್ಲೆಗೆ ಇಬ್ಬರು ಅಡಿಷನಲ್ ಎಸ್ಪಿ ನೇಮಕ ಮಾಡುವ ಸಂಬಂಧ ಈಗಾಗಲೇ ಆದೇಶ ಮಾಡಲಾಗಿದೆ ಎಂದರು.
ಸಾಮಾನ್ಯವಾಗಿ ಜಿಲ್ಲೆಗಳಲ್ಲಿ ಓರ್ವ ಎಸ್ಪಿ ಹಾಗೂ ಓರ್ವ ಎಎಸ್ಪಿ ಇರುತ್ತಾರೆ. ಅಪರಾಧ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗ ಎರಡನ್ನೂ ಒಬ್ಬ ಎಎಸ್ಪಿಯೇ ನೋಡಿಕೊಳ್ಳುತ್ತಾರೆ. ಇನ್ನು ಮುಂದೆ ಜಿಲ್ಲೆಗಳಲ್ಲಿ ಇಬ್ಬರು ಅಡಿಷನಲ್ ಎಸ್ಪಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಕಳೆದ ಬಾರಿ ನಾನು, ಗೃಹ ಸಚಿವನಾಗಿದ್ದಾಗ 21ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ೪ ವರ್ಷದಿಂದ ಸರ್ಕಾರ ಪೊಲೀಸರ ನೇಮಕಾತಿ ಪ್ರಕ್ರಿಯೆ ಕೈಗೆತ್ತಿಕೊಂಡಿಲ್ಲ. ಈ ಪರಿಣಾಮ ರಾಜ್ಯದಲ್ಲಿ ೨೦ ಸಾವಿರ ಹುದ್ದೆಗಳು ಖಾಲಿ ಇವೆ. ವರ್ಷಕ್ಕೆ ೪ ಸಾವಿರ ಮಂದಿ ಪೊಲೀಸರು ನಿವೃತ್ತರಾಗುತ್ತಾರೆ. ಈ ಹುದ್ದೆಗಳನ್ನಾದರೂ ತುಂಬುವ ಅವಶ್ಯಕತೆ ಇದೆ ಎಂದರು.
ವಸತಿ ಸಮುಚ್ಚಯ ಸಹಕಾರಿ
ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ಪೊಲೀಸರಿಗೆ ಅನೇಕ ಸವಾಲು ಎದುರಾಗುತ್ತಿದ್ದು, ನೆಮ್ಮದಿ ಬದುಕು ಕಟ್ಟಿಕೊಳ್ಳುವುದಕ್ಕೆ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳುವಲ್ಲಿ ವಸತಿ ಸಮುಚ್ಚಯ ಸಹಕಾರಿಯಾಗಿವೆ ಎಂದು ಹೇಳಿದರು.
ದಿನೇ ದಿನೇ ಪೊಲೀಸ್ ಇಲಾಖೆಯ ಸವಾಲು ಹೆಚ್ಚುತ್ತಿವೆ. ಆರ್ ಟಿ ಐ ಸೇರಿದಂತೆ ಇತರೆ ಕಾಯ್ದೆಗಳನ್ನು ಒಳ್ಳೆಯ ಹಿತದೃಷ್ಟಿಯಿಂದ ಬಂದ ಕಾನೂನುಗಳು ಪೊಲೀಸ್ ವ್ಯವಸ್ಥೆ ಹದಗೆಡಿಸುವಷ್ಟು ಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದರು.
ಪೊಲೀಸ್ ಇಲಾಖೆಗೆ ಸೈಬರ್ ಕ್ರೈಮ್ ಸವಾಲಾಗಿ ಪರಿಣಮಿಸಿದೆ. ಟೆಕ್ನಾಲಜಿ ಬೆಳೆದಷ್ಟು ಅತಿ ಬುದ್ದಿವಂತರು ಕಳ್ಳತನಕ್ಕೆ ಇಳಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಟ್ ಕಾಯಿನ್ ಎಲ್ಲೆಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ. ಈ ಪ್ರಕರಣ ಬಯಲಿಗೆ ಬಂದರೆ ಯಾರ್ಯಾರು ಹೊರ ಬರುತ್ತಾರೋ ಗೊತ್ತಿಲ್ಲ. ರಾಜಕಾರಣಿಗಳು ಹೊರಬರುವ ಸಾಧ್ಯತೆಯಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನ ಬೆಳೆಸಿಕೊಂಡು ಸೈಬರ್ ಕ್ರೈಮ್ ತಡೆಯಲು ಮುಂದಾಗಬೇಕು ಎಂದ ಅವರು, ನಮಗೂ ಪೊಲೀಸರಿಗೂ ಅವಿನಾಭಾವ ಸಂಬಂಧವಿದೆ. ನಾವಿದ್ದ ಪರಿಸ್ಥಿತಿಯೆ ಬೇರೆ ನನ್ನನ್ನೇ ತಿದ್ದಿದ್ದಾರೆ ಎಂದು ತಮ್ಮ ಜೀವನದ ಅನುಭವದ ಕ್ಷಣ ಬಿಚ್ಚಿಟ್ಟರು.
ಕೊರಟಗೆರೆ ಪೊಲೀಸ್ ಬೆಟಾಲಿಯನ್ ಮಾಡಿದಂತೆ ನಮ್ಮ ಕ್ಷೇತ್ರಕ್ಕೂ ಬೆಟಾಲಿಯನ್ ಮಾಡಿಕೊಡಿ ಎಂದು ಗೃಹ ಸಚಿವ ಪರಮೇಶ್ವರ್ ಅವರಿಗೆ ಮನವಿ ಮಾಡಿದ ಸಚಿವ ರಾಜಣ್ಣ ಅವರು, ಕ್ಷೇತ್ರದ ಕೊಡಿಗೇನಗಳ್ಳಿ ಪೊಲೀಸ್ ಠಾಣೆ ದುರಸ್ತಿ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಪೊಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪೊಲೀಸ್ ಇಲಾಖೆ ಘನತೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿ ಡಾ. ಕೆ. ರಾಮಚಂದ್ರರಾವ್ ಮಾತನಾಡಿ, ನಗರದಲ್ಲಿ ೭೨ ವಸತಿ ಸಮುಚ್ಚಯ ಉದ್ಘಾಟನೆ ಮಾಡಲಾಗಿದೆ. ಇದರ ಅಂದಾಜು ವೆಚ್ಚ ೨೦ಕೋಟಿಯಾಗಿದೆ. ಒಂದೊಂದು ವಸತಿಗೂ 22 ಲಕ್ಷ ಖರ್ಚಾಗಿದ್ದು, 12 ಬ್ಲಾಕ್ ಕಟ್ಟಿದ್ದೇವೆ ಎಂದರು.
ಪರಮೇಶ್ವರ್ ಅವರು ಗೃಹ ಸಚಿವರಾಗಿರುವುದು ಪೊಲೀಸ್ ಇಲಾಖೆಗೆ ಸುವರ್ಣಯುಗ ಎಂದೇ ಹೇಳಬಹುದು. ಇಲಾಖೆಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದಾರೆ. ರಾಜ್ಯದಲ್ಲಿ ೬೦೦ ಕಡೆ ಪ್ರಾಜೆಕ್ಟ್ ನಡೆಯುತ್ತಿದೆ ಎಂದು ಹೇಳಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್, ಕರ್ನಾಟಕ ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿ ಡಾ. ಕೆ. ರಾಮಚಂದ್ರರಾವ್, ಕೇಂದ್ರ ವಲಯದ ಐಜಿಪಿ ಡಾ. ರವಿಕಾಂತೇಗೌಡ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ, ಎಸ್ಪಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.