ರಾಜ್ಯದ ಪಾಲಿಗೆ ಅಭಿವೃದ್ಧಿಯಲ್ಲಿ ಸುವರ್ಣಯುಗ ಪ್ರಾರಂಭವಾಗಿದ್ದು, ಬಿಜೆಪಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳು ಕರ್ನಾಟಕದ ಚಿತ್ರಣ ಬದಲಿಸಲಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ಚಾಮರಾಜನಗರ : ರಾಜ್ಯದ ಪಾಲಿಗೆ ಅಭಿವೃದ್ಧಿಯಲ್ಲಿ ಸುವರ್ಣಯುಗ ಪ್ರಾರಂಭವಾಗಿದ್ದು, ಬಿಜೆಪಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳು ಕರ್ನಾಟಕದ ಚಿತ್ರಣ ಬದಲಿಸಲಿದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.
ನಗರದ ಡಾ.ಬಿ.ಆರ್. ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಗುರುವಾರ ಆಯೋಜಿಸಿದ್ದ 74ನೇ ಭಾರತ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಶುಭಾಶಯಗಳನ್ನು ತಿಳಿಸಿ ಮಾತನಾಡಿದರು.
undefined
ಮುಖ್ಯಮಂತ್ರಿ ಜಿಲ್ಲೆಗೆ ಭೇಟಿ ನೀಡಿದ್ದು, 1099 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಜಿಲ್ಲೆಯಲ್ಲಿ 15 ಗ್ರಾಪಂ ಶಾಲೆಗಳಿಗೆ ಹಾಗೂ ಅಂಗನವಾಡಿಗಳಿಗೆ ಅಗತ್ಯವಿರುವ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, 150 ಕೆರೆಗಳನನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ 130 ಕೆರೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. 2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಯಾದ 1750 ಮನೆಗಳಿಗೆ 12.78 ಕೋಟಿ ರು. ಪರಿಹಾರ ಮಂಜುರು ಮಾಡಲಾಗಿದ್ದು, ಪ್ರವಾಹದಿಂದ ಹಾನಿಯಾದ 8052 ಹೆಕ್ಟೆರ್ ವಿಸ್ತೀರ್ಣದ 14,949 ರೈತ ಫಲಾನುಭವಿಗಳಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಪರಿಹಾರವಾಗಿ 15 ಕೋಟಿಗಳನ್ನು ವಿತರಿಸಲಾಗಿದೆ ಎಂದರು.
ವಿವಿಧ ವಸತಿ ಯೋಜನೆಯಡಿ 4920 ಫಲಾನುಭವಿಗಳ ಆಯ್ಕೆ ಗುರಿ ನಿಗದಿಪಡಿಸಿ 4663 ಫಲಾನುಭವಿಗಳಿಗೆ ಮನೆ ಮಂಜೂರಾತಿ ಕಾಮಗಾರಿ ನೀಡಲಾಗಿದ್ದು, ಪ್ರಗತಿಯಲ್ಲಿದ್ದ 11,667 ಮನೆಗಳ ಪೈಕಿ 3135 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸ್ತುತ 60 ಎಕರೆ ಜಮೀನು ಲಭ್ಯವಿದ್ದು, ಸದರಿ ಜಮೀನಿನಲ್ಲಿ ಅರ್ಹ ನಿವೇಶನ ರಹಿತರಿಗೆ 1200 ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದ್ದು, 174 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಒನ್ ಯೋಜನೆಯು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ 121 ಕೇಂದ್ರಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2.64 ಲಕ್ಷ ಸೇವೆಗಳನ್ನು ಒದಗಿಸಲಾಗಿದೆ. ಸುತ್ತು ನಿಧಿ ಯೋಜನೆಯಡಿ ಪ್ರತಿ ಸ್ವ ಸಹಾಯ ಸಂಘಕ್ಕೆ ರು. 15 ಸಾವಿರಗಳಂತೆ 138 ಸ್ವ ಸಹಾಯ ಗುಂಪುಗಳಿಗೆ ರು. 20 ಲಕ್ಷಗಳ ಸುತ್ತು ನಿಧಿಯನ್ನು ಹಾಗೂ ಸಮುದಾಯ ಬಂಡವಾಳ ನಿದಿಯಡಿ 2349 ಸ್ವ ಸಹಾಯ ಸಂಘಗಳಿಂದ 9015 ಫಲಾನುಭವಿಗಳಿಗೆ ರು. 33 ಕೋಟಿ ಸಮುದಾಯ ಬಂಡವಾಳ ನಿಧಿಯನ್ನು ನೀಡಲಾಗಿದೆ. ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳನ್ನು ಒಗ್ಗೂಡಿಸಿ, ಆರ್ಥಿಕ ಹಾಗೂ ಸಾಮಾಜಿಕ ಸದೃಢತೆಯನ್ನು ಸರ್ವರಿಗೂ ನೀಡಿ, ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ. ಬಲಿಷ್ಠ ಭಾರತ ನಿರ್ಮಾಣದ ಸಂಕಲ್ಪತೊಟ್ಟು ದಿನದ 24 ಗಂಟೆ ಪ್ರಜಾಸೇವಕರಂತೆ ದುಡಿಯುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ಕೈ ಬಲಪಡಿಸುವದರ ಜೊತೆಗೆ ಶಕ್ತಿಶಾಲಿ ಕರ್ನಾಟಕದ ನಿರ್ಮಾಣಕ್ಕೆ ನಾವೆಲ್ಲರೂ ಪ್ರತಿಜ್ಞೆ ಮಾಡೋಣ ಎಂದರು.
ಸಮಾರಂಭದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡ ಅಧ್ಯಕ್ಷ ಜಿ. ನಿಜಗುಣ ರಾಜು, ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಸಿಇಓ ಗಾಯಿತ್ರಿ,ಎಸ್ಪಿ ಶಿವಕುಮಾರ್ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಡಿಸಿಎಫ್ ದೀಪಾ ಕಂಟ್ರಾಕ್ಟರ್ ಇತರರು ಇದ್ದರು.
ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು: ಸಚಿವ
ಜಗತ್ತಿನಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು, ಕರ್ನಾಟಕಕ್ಕೆ ಇದರಲ್ಲಿ ವಿಶೇಷ ಸ್ಥಾನಮಾನವಿದೆ. ಬಹು ಸಂಸ್ಕೃತಿ-ಬಹು ಭಾಷೆ ನಮ್ಮ ವಿಶೇಷತೆ. ಸಂಕುಚಿತ ಭಾವನೆ, ಪ್ರಾದೇಶಿಕ ಅಸಮಾನತೆ ಇತ್ಯಾದಿ ವಿಷಯಗಳನ್ನು ಬದಿಗೊತ್ತಿ ದೇಶದ ಸಮಗ್ರತೆ ಮತ್ತು ಅಖಂಡತೆಯ ನೆರಳಿನಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ನಿರ್ಮೂಲನೆಗೊಳಿಸುವಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಆರೋಗ್ಯ, ಶಿಕ್ಷಣ, ವಸತಿ, ಕೈಗಾರಿಕೆ , ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ಮೂಲಸೌಕರ್ಯ, ಪ್ರವಾಸೋದ್ಯಮ ವಲಯಗಳು ಪ್ರಗತಿಯತ್ತ ಸಾಗಿದ್ದು, ರಾಜ್ಜದ ಜನತೆಯ ಆಶಯ ಸಾಕಾರಗೊಳಿಸಲು ಬಿಜೆಪಿ ಸರ್ಕಾರ ಕಟಿಬದ್ದವಾಗಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.