ಉಡುಪಿಯಲ್ಲಿ ಶುರುವಾಯ್ತು 'ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್' ಅಭಿಯಾನ

By Sathish Kumar KH  |  First Published Jun 5, 2024, 7:03 PM IST

ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದಲೂ ನಾಪತ್ತೆಯಾಗಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ ಆರಂಭಿಸಲಾಗಿದೆ.


ಉಡುಪಿ (ಜೂ.05): ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಗ್ಯಾರೆಂಟಿ ಯೋಜನೆಗಳ ಹೊರತಾಗಿಯೂ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿಗೆ ದೊಡ್ಡ ಅಂತರದ ಗೆಲುವು ತಂದುಕೊಟ್ಟಿದ್ದಾರೆ. ಸೋಲಿನ ವಿಮರ್ಶೆ ನಡೆಯುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಾಪತ್ತೆಯಾದ ಸಂಗತಿ ಮುನ್ನೆಲೆಗೆ ಬಂದಿದೆ. ಇದೀಗ ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್ ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ.

ಉಡುಪಿ ಜಿಲ್ಲೆ ಹೆಚ್ಚಿನ ಸಲ 'ಹೊರಗಡೆಯ' ಉಸ್ತುವಾರಿ ಸಚಿವರನ್ನೇ ಕಂಡ ನತದೃಷ್ಟ ಜಿಲ್ಲೆ. ಈಗ ಇರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಹೊರ ಜಿಲ್ಲೆಯವರೇ. ಪ್ರತೀ ಬಾರಿ ಹೊರ ಜಿಲ್ಲೆಯವರು ಇಲ್ಲಿ ಉಸ್ತುವಾರಿಯಾಗಲು ಕಾರಣ, ಕರಾವಳಿ ಬಿಜೆಪಿಯ ಭದ್ರಕೋಟೆ ಆಗಿರುವುದು. ಅಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆದಾಗಲೆಲ್ಲ ಇಲ್ಲಿ ಗೆದ್ದ ಶಾಸಕರು ಬಿಜೆಪಿಯವರೇ‌. ಹೀಗಾಗಿ ಅನಿವಾರ್ಯವಾಗಿ‌ ಇಲ್ಲಿ ಹೊರ ಜಿಲ್ಲೆಯವರನ್ನು ಉಸ್ತುವಾರಿ ಮಾಡಬೇಕಾದ ಸಂಕಟ ಕಾಂಗ್ರೆಸ್ ಪಕ್ಷದ್ದು.

Tap to resize

Latest Videos

undefined

ಕೊಟ್ಟ ಮಾತಿನಂತೆ ಶಾಸಕ ಸ್ಥಾನಕ್ಕೆ ಪ್ರದೀಶ್ ಈಶ್ವರ್ ರಾಜೀನಾಮೆ; ವೈರಲ್ ಪತ್ರದ ಅಸಲಿಯತ್ತೇನು?

ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಆಯ್ಕೆ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ಹುಮ್ಮಸ್ಸಿನ ವಾತಾವರಣ ಸೃಷ್ಟಿಯಾಗಿದ್ದು ನಿಜ. ಆದರೆ ಈ ಹುಮ್ಮಸ್ಸು ಬಹುಕಾಲ ಉಳಿಯಲಿಲ್ಲ. ಬೆಳಗಾವಿಯಲ್ಲಿರುವ ಸಚಿವೆ ಎರಡು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಉಡುಪಿಗೆ 'ಪ್ರವಾಸ' ಮಾಡುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಹೆಬ್ಬಾಳ್ಕರ್ ಇಲ್ಲಿಗೆ ಒಮ್ಮೆಯೂ ಪ್ರವಾಸ ಮಾಡಿಲ್ಲ. ಕಾರಣ, ಪುತ್ರನಿಗೆ ಲೋಕಸಭೆ ಟಿಕೆಟ್ ಸಿಕ್ಕಿದ್ದು! ಪುತ್ರ ಮೃಣಾಲ್ ಗೆ ಟಿಕೆಟ್ ಸಿಕ್ಕಿದ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಇತ್ತ ಪಕ್ಷದ ಕಾರ್ಯಕರ್ತರ ಕೈಗೂ ಸಿಕ್ಕಿಲ್ಲ. ಜಿಲ್ಲೆಯ ಜನರ ಕೈಗೂ ಸಿಕ್ಕಿಲ್ಲ.

ಲೋಕಸಭೆ ಚುನಾವಣೆ ಸಂದರ್ಭ ಪುತ್ರನ ಪರ ಇಡೀ ಬೆಳಗಾವಿ ಕ್ಷೇತ್ರ ಸುತ್ತಿದ ಸಚಿವೆ ,ಇತ್ತಕಡೆ ಒಮ್ಮೆಯೂ ಬಂದಿಲ್ಲ. ಸರಿ , ಚುನಾವಣೆ ಮುಗಿದ ಮೇಲೂ ಫಲಿತಾಂಶಕ್ಕೆ ಒಂದು ತಿಂಗಳು ಕಾಲಾವಕಾಶ ಇತ್ತು.ಆ ಸಂದರ್ಭದಲ್ಲೂ ಸಚಿವೆ ಇತ್ತ ತಲೆ ಹಾಕಿಯೂ ಇಲ್ಲ. ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲೂ ಭಾಗಿಯಾಗಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆ ಪರ ಮತಯಾಚಿಸಲು ಕನಿಷ್ಠ ಒಂದು ಬಾರಿಯೂ ಉಡುಪಿಗೆ ಬಂದಿಲ್ಲ. 

ನೂತನ ಸಂಸದರಾಗುತ್ತಿದ್ದಂತೆಯೇ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಮಾಜಿ ಸಿಎಂ ಬೊಮ್ಮಾಯಿ

ಮಾರ್ಚ್ ತಿಂಗಳಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿದ್ದು ಬಿಟ್ಟರೆ ಮತ್ತೆ ಇತ್ತ ಕಡೆ ಮುಖ ಹಾಕಿಲ್ಲ!ಇದಕ್ಕೆಲ್ಲ ಕಾರಣ , ಸಚಿವೆಯ ಪುತ್ರ ವಾತ್ಸಲ್ಯ ಕಾರಣ ಎಂದು ಕೈ ಕಾರ್ಯಕರ್ತರು ಮಾತನಾಡತೊಡಗಿದ್ದಾರೆ. ಹಾಗಾಗಿ ಗೋ ಬ್ಯಾಕ್ ಲಕ್ಷ್ಮಿ ಹೆಬ್ಬಾಳ್ಕರ್ ಅನ್ನುವ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ನಿನ್ನೆ ಬಂದ ಫಲಿತಾಂಶದಲ್ಲಿ ಸಚಿವೆಯ ಪುತ್ರ ಸೋಲನುಭವಿಸಿದ್ದಾರೆ. ಇನ್ನು ಮುಂದಾದರೂ ಅವರು ಜಿಲ್ಲೆಗೆ ಬಂದು ಜನರ ಅಹವಾಲು ಮತ್ತು ಪಕ್ಷದ ಕಾರ್ಯಕರ್ತರ ಮನವಿಕೇಳಿಸಿಕೊಳ್ಳುತ್ತಾರೋ ಕಾದು ನೋಡಬೇಕು.

click me!