ಗೀತಾ ಜಯಂತಿ, ಕೃಷ್ಣಾಷ್ಟಮಿಗೆ ಸಾರ್ವತ್ರಿಕ ರಜೆ ನೀಡಿ: ಪುತ್ತಿಗೆ ಶ್ರೀ

By Kannadaprabha News  |  First Published Jan 8, 2024, 12:00 AM IST

ನಮ್ಮ ಪರ್ಯಾಯ ಅವಧಿ ಜ.18ರಿಂದ ಆರಂಭವಾಗಲಿದೆ. ಅಂದಿನಿಂದ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನಿರಾತಂಕವಾಗಿ ನೆರವೇರಿಸಲಾಗುವುದು. ಈ ಅವಧಿಯಲ್ಲಿ ಈಗಾಗಲೇ ಆರಂಭಿಸಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಸಮಾಪ್ತಿಗೊಳಿಸಲಾಗುವುದು. ಸುಮಾರು ಒಂದು ಕೋಟಿ ಜನತೆ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾವು ಬರೆದ ಭಗವದ್ಗೀತೆ ಶ್ಲೋಕವನ್ನು ಶ್ರೀಕೃಷ್ಣನಿಗೆ ಅರ್ಪಿಸಬೇಕು. ಬಳಿಕ ಅದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುವುದು: ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ 


ಮಂಗಳೂರು(ಜ.07):  ಎಲ್ಲ ಮಕ್ಕಳಿಗೆ ಗೀತೆಯ ಆರಾಧನೆ ಮಾಡಲು ಅವಕಾಶ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಗೀತಾ ಜಯಂತಿ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಉಡುಪಿ ಭಾವಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶಿಸಿದ್ದಾರೆ. ಮಂಗಳೂರು ಕದ್ರಿ ಕಂಬಳದ ಮಂಜು ಪ್ರಾಸಾದ ನಿವಾಸದಲ್ಲಿ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರಿಂದ ಗುರುವಂದನಾ ಮತ್ತು ಪಟ್ಟದ ದೇವರ ತುಲಾಭಾರಕ್ಕೆ ಮುನ್ನ ಪುತ್ತಿಗೆಶ್ರೀಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ಪರ್ಯಾಯ ಅವಧಿ ಜ.18ರಿಂದ ಆರಂಭವಾಗಲಿದೆ. ಅಂದಿನಿಂದ ಎರಡು ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾ ಕೈಂಕರ್ಯವನ್ನು ನಿರಾತಂಕವಾಗಿ ನೆರವೇರಿಸಲಾಗುವುದು. ಈ ಅವಧಿಯಲ್ಲಿ ಈಗಾಗಲೇ ಆರಂಭಿಸಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಸಮಾಪ್ತಿಗೊಳಿಸಲಾಗುವುದು. ಸುಮಾರು ಒಂದು ಕೋಟಿ ಜನತೆ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತಾವು ಬರೆದ ಭಗವದ್ಗೀತೆ ಶ್ಲೋಕವನ್ನು ಶ್ರೀಕೃಷ್ಣನಿಗೆ ಅರ್ಪಿಸಬೇಕು. ಬಳಿಕ ಅದನ್ನೇ ಪ್ರಸಾದ ರೂಪದಲ್ಲಿ ನೀಡಲಾಗುವುದು. ಆ ಗೀತಾ ಲೇಖನ ಪುಸ್ತಕವನ್ನು ಮನೆಯ ಪೂಜಾ ಮಂದಿರದಲ್ಲಿ ಇರಿಸಿ ನಿತ್ಯವೂ ಶ್ಲೋಕ ಪಠಣ ಮೂಲಕ ಅರ್ಚಿಸಬೇಕು. ಪ್ರತಿ ಕುಟುಂಬವೂ ಭಗವದ್ಗೀತಾ ಯಜ್ಞದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪುತ್ತಿಗೆಶ್ರೀ ಹೇಳಿದರು.

Tap to resize

Latest Videos

ರೈತ ಆತ್ಮಹತ್ಯೆಗೆ ಸರ್ಕಾರ, ಕೃಷಿ ವಿಜ್ಞಾನಿಗಳು ನೇರ ಹೊಣೆ: ರೈತ ಸಂಘ ಆರೋಪ

ಪರ್ಯಾಯ ವೇಳೆ ಐದು ಯೋಜನೆ ಜಾರಿ:

ಈ ಬಾರಿ ನಮ್ಮದು ನಾಲ್ಕನೇ ಪರ್ಯಾಯವಾಗಿದ್ದು, ಇದನ್ನು ವಿಶ್ವ ಗೀತಾ ಪರ್ಯಾಯ ಎಂದು ಕರೆಯುತ್ತೇವೆ. ಈ ಪರ್ಯಾಯದಲ್ಲಿ ಭಗವದ್ಗೀತೆ ಬಗ್ಗೆ ಅರ್ಥಪೂರ್ಣ ಜಾಗೃತಿ ಮೂಡಿಸಲಾಗುವುದು. ಉಡುಪಿ ಕೃಷ್ಣ ಮಠದ ಗೀತಾ ಮಂದಿರದಲ್ಲಿ ಅಖಂಡ ಗೀತಾ ಪಾರಾಯಣ ನಡೆಸಿ ಕೃಷ್ಣನಿಗೆ ಅರ್ಪಿಸಲಾಗುವುದು. 700 ಶ್ಲೋಕಗಳಿಂದ ಭಗವದ್ಗೀತಾ ಮಹಾಯಾಗ ನಡೆಸಲಾಗುವುದು. ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ ಆಯೋಜಿಸಲಾಗುವುದು. ಸನ್ಯಾಸ ಸ್ವೀಕರಿಸಿ 50 ವರ್ಷ ಸಲ್ಲುವ ಹಿನ್ನೆಲೆಯಲ್ಲಿ ಶ್ರೀಕೃಷ್ಣನಿಗೆ ಬಂಗಾರದ ರಥ ಸಮರ್ಪಿಸಲಾಗುವುದು. ಈ ರಥವನ್ನು ಶ್ರೀಕೃಷ್ಣನ ಗರ್ಭಗುಡಿಯ ಸುತ್ತಲೂ ಎಳೆಯಲು ಅವಕಾಶ ಇದೆ. ಮಳೆ ಬಂದರೂ ರಥೋತ್ಸವಕ್ಕೆ ತೊಂದರೆಯಾಗದು. ಯಾತ್ರಿಗಳ ಅನುಕೂಲಕ್ಕೆ ಉಡುಪಿಯಲ್ಲಿ 108 ಕೊಠಡಿಗಳ ಅಷ್ಟೋತ್ತರ ಭವನ ನಿರ್ಮಿಸಲು ಸಂಕಲ್ಪಿಸಲಾಗಿದೆ ಎಂದರು.

ವಿದೇಶಗಳಲ್ಲೂ ಪುತ್ತಿಗೆ ಮಠ ಶಾಖೆ:

ದೇಶ, ವಿದೇಶ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಪುತ್ತಿಗೆ ಮಠದ ಶಾಖೆ ಇದೆ. ಇದನ್ನು 108 ಕಡೆಗಳಿಗೆ ವಿಸ್ತರಿಸಲು ಯೋಚನೆ ಮಾಡಲಾಗಿದೆ. ನಾವು 28 ದೇಶಗಳಲ್ಲಿ ಸಂಚಾರ ಮಾಡಿದ್ದು, ಪ್ರಮುಖ 60 ನಗರಗಳ ಪೈಕಿ 11 ನಗರಗಳಲ್ಲಿ ಶಾಖೆ ಇದೆ. ವಿದ್ಯಾಪೀಠಗಳನ್ನು ತೆರೆದು ಅಲ್ಲಿ ಭಗವದ್ಗೀತೆ ಪ್ರಸಾರಕ್ಕೆ ಯೋಜನೆ ರೂಪಿಸಲಾಗುವುದು. ವಿಶ್ವವಿದ್ಯಾಲಯಗಳಲ್ಲಿ ಸಂವಾದ, ಪ್ರವಚನ ಮೂಲಕ ಗೀತೆ ಪ್ರಸಾರ ಮಾಡಲಾಗುತ್ತದೆ ಎಂದರು.

ಮಂಗಳೂರಲ್ಲಿ ವಿಶ್ವಸಂಚಾರ ಸಮಾಪ್ತಿ:

ಪರ್ಯಾಯ ಪೀಠಾರೋಹಣ ಪೂರ್ವಭಾವಿಯಾಗಿ ಕಳೆದ ಎರಡು ವರ್ಷಗಳಿಂದ ನಾವು ವಿಶ್ವ ಸಂಚಾರ ಕೈಗೊಳ್ಳಲಾಗಿದೆ. ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಗಲ್ಫ್‌ ರಾಷ್ಟ್ರ, ಉತ್ತರ ಹಾಗೂ ದಕ್ಷಿಣ ಭಾರತದ ತೀರ್ಥ ಕ್ಷೇತ್ರಗಳನ್ನು ಸಂಚರಿಸಿ ಶನಿವಾರ ಮಂಗಳೂರಿನಲ್ಲಿ ವಿಶ್ವ ಸಂಚಾರಕ್ಕೆ ಮಂಗಳ ಹಾಡಲಾಗಿದೆ. ಜ.7ರಂದು ಮಂಗಳೂರಲ್ಲಿ ಪೌರ ಸನ್ಮಾನ ಸ್ವೀಕರಿಸಿ, ಅಲ್ಲಿಂದ ಜ.8ರಂದು ಉಡುಪಿ ಪುರಪ್ರವೇಶ ಮಾಡಲಾಗುವುದು. ಬಳಿಕ ಪರ್ಯಾಯ ಮಹೋತ್ಸವದ ವಿಧಿವತ್ತಾದ ಕಾರ್ಯಕ್ರಮಗಳು ಆರಂಭವಾಗಲಿದೆ ಎಂದು ಪುತ್ತಿಗೆಶ್ರೀ ಹೇಳಿದರು.

ಪರ್ಯಾಯಕ್ಕೆ ವಿದೇಶಿ ಗಣ್ಯರು:

ಜ.17ರಂದು ನಡೆಯುವ ಪುತ್ತಿಗೆ ಪರ್ಯಾಯದಲ್ಲಿ ಪಾಲ್ಗೊಳ್ಳಲು ವಿದೇಶಿಯರಿಗೂ ಆಹ್ವಾನ ನೀಡಲಾಗಿದೆ. ನಾವು ವಿದೇಶಿ ಸಂಚಾರ ವೇಳೆ ಜಾಗತಿಕ ವಿಶ್ವಶಾಂತಿ ಸಂಘಟನೆಗೆ ಮೂರು ಬಾರಿ ಅಧ್ಯಕ್ಷರಾಗಿದ್ದು, ಪ್ಯಾರಿಸ್‌ ಒಪ್ಪಂದಕ್ಕೆ ರಷ್ಯಾ ಅಧ್ಯಕ್ಷ ಪುತಿನ್‌, ಪೋಪ್ ಜತೆ ಸಹಿ ಹಾಕಲಾಗಿದೆ. ಹೀಗೆ ವಿದೇಶಗಳಲ್ಲಿ ಗೀತೆ ಪ್ರಸಾರಕ್ಕೆ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈ ಎಲ್ಲ ಕಾರಣಕ್ಕೆ ವಿದೇಶಿ ಗಣ್ಯರು ಕೂಡ ನಮ್ಮ ಪೀಠಾರೋಹಣಕ್ಕೆ ಸಾಕ್ಷಿಯಾಗಲಿದ್ದಾರೆ. ನಮ್ಮದು ಸಾವಯವ, ಹಸಿರು ಪರ್ಯಾಯ ಎಂದರು.

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಏಕೆ?: ಪದ್ಮರಾಜ್‌

ಕಲ್ರೂಪ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಪ್ರೊ.ಎಂ.ಬಿ.ಪುರಾಣಿಕ್‌, ಪುತ್ತಿಗೆ ಮಠದ ಅಂತಾರಾಷ್ಟ್ರೀಯ ದಿವಾನ ಪ್ರಸನ್ನ ಇದ್ದರು.

ಒತ್ತಡ, ಖಿನ್ನತೆ ನಿವಾರಣೆಗೆ ಗೀತೆ ಚಿಕಿತ್ಸೆ!

ಇಂದಿನ ದಿನಗಳಲ್ಲಿ ಮಾನವನಿಗೆ ನಿತ್ಯವೂ ಕಾಡುತ್ತಿರುವ ಒತ್ತಡ, ಖಿನ್ನತೆಗಳಿಂದ ಪಾರಾಗಲು ಭಗವದ್ಗೀತೆಯ ಅಧ್ಯಯನವೇ ಉತ್ತಮ ಚಿಕಿತ್ಸೆ ಎಂದು ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಪ್ರತಿ ಕುಟುಂಬದಲ್ಲೂ ಭಗವದ್ಗೀತೆ ಪ್ರಸಾರ ಮಾಡಬೇಕು. ಇದರಿಂದ ವೈಯಕ್ತಿಕ ಸಮಸ್ಯೆಗಳೂ ನಿವಾರಣೆಯಾಗುತ್ತದೆ. ಸಾಮಾಜಿಕ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಸ್ಯೆಗಳಿಗೂ ಭಗವದ್ಗೀತೆ ಉತ್ತರವಾಗಿದೆ. ಮನೋರೋಗ, ಆತ್ಮಹತ್ಯೆಯಂತಹ ಯೋಚನೆ, ಹವಾಮಾನ ವೈಪರೀತ್ಯವೇ ಮೊದಲಾದ ಎಲ್ಲ ತೊಂದರೆಗಳನ್ನು ನಿವಾರಿಸಲು ಭಗವದ್ಗೀತೆಯಿಂದ ಮಾತ್ರ ಸಾಧ್ಯವಿದೆ. ವ್ಯಕ್ತಿಯ ಜೀವನ ರೂಪಿಸಲು ಕೂಡ ಭಗವದ್ಗೀತೆಯೇ ಬೇಕು ಎಂದು ಸ್ವಾಮೀಜಿ ಪ್ರತಿಪಾದಿಸಿದರು.

click me!