ನಿವೃತ್ತ ನೌಕರರಿಗೂ ವೈದ್ಯಕೀಯ ಭತ್ಯೆ ನೀಡಿ: ಡಾ ಭೈರಪ್ಪ

By Kannadaprabha News  |  First Published Jan 2, 2024, 9:37 AM IST

ವಯೋಸಹಜವಾಗಿ ನಿವೃತ್ತಿ ಹೊಂದಿರುವ ಎಲ್ಲಾ ಸರ್ಕಾರಿ ನೌಕರರಿಗೆ ವೈದ್ಯಕೀಯ ಭತ್ಯೆಯನ್ನೂ ಸಹ ನೀಡಬೇಕೆಂದು ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಸರ್ಕಾರವನ್ನು ಆಗ್ರಹಿಸಿದರು.


  ತುರುವೇಕೆರೆ : ವಯೋಸಹಜವಾಗಿ ನಿವೃತ್ತಿ ಹೊಂದಿರುವ ಎಲ್ಲಾ ಸರ್ಕಾರಿ ನೌಕರರಿಗೆ ವೈದ್ಯಕೀಯ ಭತ್ಯೆಯನ್ನೂ ಸಹ ನೀಡಬೇಕೆಂದು ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್.ಭೈರಪ್ಪ ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣದ ವಿರಕ್ತಮಠದ ಶಿವಯೋಗೀಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗೂ ೭೫ ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರಾಗಿ ಸುಮಾರು ೬೦ ವರ್ಷದವರೆಗೂ ಸೇವೆ ಸಲ್ಲಿಸಿರುತ್ತಾರೆ. ನಿವೃತ್ತರಾದ ನಂತರ ಹಲವು ಸೇವಾ ಸೌಲಭ್ಯಗಳು ಕಡಿತಗೊಳ್ಳಲಿವೆ. ವಯಸ್ಸಾದಂತೆ ಆರೋಗ್ಯದ ಸಮಸ್ಯೆ ಹೆಚ್ಚು ಕಾಡಲಿದೆ. ಆದ್ದರಿಂದ ಸರ್ಕಾರ ನೌಕರರಂತೆ ನಿವೃತ್ತರಿಗೂ ವೈದ್ಯಕೀಯ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಸರ್ಕಾರಿ ನೌಕರರಾಗಿ ಸಾಧ್ಯವಾದಷ್ಟೂ ಪ್ರಾಮಾಣಿಕ ಸೇವೆ ಮಾಡಿ. ನಂತರ ನಿವೃತ್ತಿ ಎಂಬುದು ಸಹಜ ಪ್ರಕ್ರಿಯೆ. ನಿವೃತ್ತರಾದೆವೆಂಬ ಚಿಂತೆ ಬಿಟ್ಟು. ಬೇಸರ ಕಳೆಯಲು ವಿವಿಧ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಉಪವಾಸಕ್ಕೂ ಸಿದ್ದ:

ರಾಜ್ಯದೆಲ್ಲೆಡೆ ನಮ್ಮ ನಿವೃತ್ತ ನೌಕರರ ಸಂಘಟನೆ ಬಲಿಷ್ಟವಾಗಿದೆ. ವೇತನ ಆಯೋಗ ಶಿಫಾರಸ್ಸು ಜಾರಿ ಮಾಡಲು ವಿಳಂಬವಾದಲ್ಲಿ ಅಮರಣಾಂತ ಉಪವಾಸ ಮಾಡಲು ನಾವೆಲ್ಲ ಸಿದ್ದರಿರಬೇಕು. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟ ಮಾಡುವುದು ನಮ್ಮ ಸಂಘಟನೆ ಬಹುಮುಖ್ಯ ಧ್ಯೇಯವಾಗಿರಬೇಕು ಎಂದು ಡಾ.ಎಲ್.ಭೈರಪ್ಪ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ, ನೌಕರರಾಗಿದ್ದ ಅವಧಿಯಲ್ಲಿ ಮಾಡದ ಅದೆಷ್ಟೋ ಸಾಧನೆಗಳನ್ನು ನಿವೃತ್ತರಾದ ನಂತರ ಹಲವಾರು ಜನರು ಮಾಡಿದ ನಿದರ್ಶನಗಳಿವೆ. ಹಾಗಾಗಿ ನಿವೃತ್ತರಾದೆವೆಂಬ ಚಿಂತೆ ಬಿಟ್ಟು ಆತ್ಮಸ್ಥೈರ್ಯ ಹೊಂದಿ ಚಟುವಟಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಿವಯ್ಯ ಮಾತನಾಡಿ, ತಾಲೂಕಿನ ನಿವೃತ್ತ ನೌಕರರ ಸಂಘದ ಎಲ್ಲ ಸದಸ್ಯರ ಸಹಕಾರದಿಂದ ಸಂಘ ಉತ್ತಮವಾಗಿ ಬೆಳೆದಿದೆ. ಇದೇ ರೀತಿಯ ಸಹಕಾರ ನೀಡುವ ಮೂಲಕ ರಾಜ್ಯ ಸಂಘಟನೆಗೆ ಒತ್ತು ನೀಡೋಣ. ನಿವೃತ್ತಗೊಂಡ ನೌಕರರು ತಮ್ಮ ಅಧಿಕೃತ ಸಂಘಕ್ಕೆ ಸೇರ್ಪಡೆಗೊಂಡು ಸಂಘದಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಪ್ರಧಾನ ಕಾರ್ಯದರ್ಶಿ ಕೆಂಪಲಿಂಗೇಗೌಡರು ಸಂಘದ ಆಯವ್ಯಯ ಮಂಡಿಸಿದರು. ಈ ಸಂಧರ್ಭದಲ್ಲಿ ೭೫ ವರ್ಷ ಮೇಲ್ಪಟ್ಟ ಹಿರಿಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘಟನಾ ಕಾರ್ಯದರ್ಶಿ ಪ್ರಹ್ಲಾದ್, ರಾಜ್ಯ ಸಂಘದ ರಂಗೇಗೌಡ, ಗುರುಸ್ವಾಮಿ, ಪುಟ್ಟನರಸಯ್ಯ, ಅಂದಾನಪ್ಪ. ಈಶ್ವರಯ್ಯ, ಪಾತಲಿಂಗಯ್ಯ, ಹುಚ್ಚಯ್ಯ, ಸೋಮಶೇಖರ್, ಸಂಘದ ತಾಲೂಕು ಉಪಾಧ್ಯಕ್ಷ ರಾಮಯ್ಯ, ಪ್ರಧಾನ ಕಾರ್ಯದರ್ಶಿ ಕೆಂಪಲಿಂಗೇಗೌಡ ಸದಸ್ಯರಾದ ಎಚ್.ಜೆ.ನಾರಾಯಣ್, ಶಿವರುದ್ರಪ್ಪ, ಬೋರೇಗೌಡ, ಲಿಂಗಪ್ಪ, ಸಣ್ಣಪ್ಪ, ಶಹನಾಖಾನಂ. ಕಪನಿಗೌಡ, ಮರಿಕೆಂಚಯ್ಯ ಸೇರಿದಂತೆ ಇತರರು ಇದ್ದರು. ಕೆ.ರಾಜಯ್ಯ ಸ್ವಾಗತಿಸಿದರು. ಎಚ್.ಜೆ.ನಾರಾಯಣ್ ನಿರೂಪಿಸಿದರು. ಪ್ರಕಾಶ್ ವಂದಿಸಿದರು. 

click me!