ಬೆಂಗಳೂರಲ್ಲಿ ಬೇಗ, ಬೇಗ ರಸ್ತೆ ಗುಂಡಿ ಮುಚ್ಚಿ: ಜಿಬಿಎ ಮುಖ್ಯ ಆಯುಕ್ತರ ತಾಕೀತು

Kannadaprabha News   | Kannada Prabha
Published : Sep 19, 2025, 07:12 AM IST
Bengaluru Pothole

ಸಾರಾಂಶ

ಎಲ್ಲಾ ಐದು ನಗರ ಪಾಲಿಕೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ತಲಾ 25 ಕೋಟಿ ರು. ಬಳಸಿಕೊಂಡು ರಸ್ತೆ ಗುಂಡಿಗಳನ್ನು ಬೇಗ ಬೇಗ ಮುಚ್ಚುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.

 ಬೆಂಗಳೂರು :  ಎಲ್ಲಾ ಐದು ನಗರ ಪಾಲಿಕೆಗಳಿಗೆ ಸರ್ಕಾರ ಬಿಡುಗಡೆ ಮಾಡಿರುವ ತಲಾ 25 ಕೋಟಿ ರು. ಬಳಸಿಕೊಂಡು ರಸ್ತೆ ಗುಂಡಿಗಳನ್ನು ಬೇಗ ಬೇಗ ಮುಚ್ಚುವಂತೆ ಅಧಿಕಾರಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದ್ದಾರೆ.

ರಸ್ತೆ ಗುಂಡಿಗಳ ಕುರಿತು ಸಾರ್ವಜನಿಕವಾಗಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳ ಜೊತೆ ನಡೆಸಿ ಸಭೆಯಲ್ಲಿ ಮಾತನಾಡಿದ ಅವರು, ರಸ್ತೆಗಳು ಹಾಗೂ ಗುಂಡಿಗಳ ಸಂಖ್ಯೆ, ಗುತ್ತಿಗೆದಾರರ ನಿಯೋಜನೆ, ತಗಲುವ ವೆಚ್ಚ, ಕಾಮಗಾರಿ ಮಾದರಿಯ ಕುರಿತು ವಿವರವಾದ ವರದಿ ನೀಡಬೇಕು. ಗುಂಡಿ ಮುಚ್ಚಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ಗುತ್ತಿಗೆದಾರರಿಂದ ಗುಂಡಿಗಳನ್ನು ಮುಚ್ಚಿಸುತ್ತಿರುವ ಕುರಿತು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ನಿರ್ದೇಶನ ನೀಡಿದರು.

ಆಂಧ್ರದಲ್ಲಿ ಜನ ಇಲ್ಲ. ಬರೋರಿದ್ದರೆ ಕರ್ಕೊಂಡು ಹೋಗಲಿ: ಡಿಸಿಎಂ

ಬೆಂಗಳೂರು: ಆಂಧ್ರದವರಿಗೆ ಜನ ಇಲ್ಲ. ಅದಕ್ಕೆ ಕರೆಯುತ್ತಿದ್ದಾರೆ. ಬರುವವರಿದ್ದರೆ ಕರೆದುಕೊಂಡು ಹೋಗಲಿ, ಯಾರು ಬೇಡ ಅಂತ ಹೇಳುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಂಗಳೂರಿನ ಉದ್ಯಮಿಗಳಿಗೆ ಆಂಧ್ರಪ್ರದೇಶ ರಾಜ್ಯದವರು ಪತ್ರ ಬರೆದು ಆಹ್ವಾನ ನೀಡುತ್ತಿರುವ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಾವು ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಗಡುವು ನೀಡಿದ್ದೇವೆ. ಎಲ್ಲರಿಗೂ ಹೊಣೆಗಾರಿಕೆ ನಿಗದಿ ಮಾಡಿದ್ದೇವೆ. ರಾತ್ರಿ ಕೂಡ ಮಳೆ ಬಂದಿದೆ. ವಿಧಾನಸೌಧದ ಪಕ್ಕದಲ್ಲೇ 20 ಗುಂಡಿ ಬಿದ್ದಿವೆ. ಮುಖ್ಯಮಂತ್ರಿ ಅವರು ಶನಿವಾರ ಸಭೆ ಮಾಡುತ್ತಾರೆ. ಈಗಾಗಲೇ ನಗರದ ಶಾಸಕರಿಗೆ ನೀಡಿರುವ ಅನುದಾನವನ್ನು ರಸ್ತೆ ದುರಸ್ತಿಗೇ ಬಳಸಲು ಸೂಚಿಸಿದ್ದೇವೆ ಎಂದರು.

ಯಾರಿಗೆ ಬೆಂಗಳೂರಿನಲ್ಲಿ ವ್ಯಾಪಾರ ಮಾಡುವುದರಿಂದ ಲಾಭ ಆಗುತ್ತದೆಯೋ ಅವರು ಇಲ್ಲೇ ಉಳಿಯುತ್ತಾರೆ. ವಿಶ್ವದ ಪ್ರತಿಷ್ಠಿತ ಕಂಪನಿಗಳು ಬೆಂಗಳೂರಿನಲ್ಲೇ ಏಕಿವೆ? ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳ ಸಂಖ್ಯೆ ಕೇವಲ 13 ಲಕ್ಷ. 25 ಲಕ್ಷ ಎಂಜಿನಿಯರ್‌ಗಳು ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾರೆ.

2 ಲಕ್ಷಕ್ಕೂ ಹೆಚ್ಚು ಜನ ವಿದೇಶಿ ಪಾಸ್‌ಪೋರ್ಟ್‌ದಾರರು ಇಲ್ಲಿ ಏಕೆ ಕೆಲಸ ಮಾಡುತ್ತಿದ್ದಾರೆ? ಇಲ್ಲಿನ ವ್ಯವಸ್ಥೆ ಚೆನ್ನಾಗಿದೆ ಅಂತ ತಾನೆ. ರಸ್ತೆ ಗುಂಡಿ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಕೆಲ ಶಿಕ್ಷಣ ಸಂಸ್ಥೆಗಳು ಮಕ್ಕಳ ಕೈಯಲ್ಲಿ ಪ್ರಧಾನಿಗೆ ಪತ್ರ ಬರೆಸುತ್ತಾರೆ. ಇನ್ಯಾರೋ ನಾಲ್ಕು ಜನ ಟ್ವೀಟ್‌ ಮಾಡುತ್ತಾರೆ. ಮಾಧ್ಯಮದವರು ಅದನ್ನು ಪಿಕ್‌ ಮಾಡುತ್ತಾರೆ. ಅದನ್ನಿಟ್ಟುಕೊಂಡು ಇನ್ಯಾರೋ ರಾಜಕೀಯ ಮಾಡುತ್ತಾರೆ. ಅವರಿಗೆ ರಾಜಕೀಯ ಮಾಡುವ ಆಸೆ ಇದ್ದರೆ ಚುನಾವಣೆಗೆ ಸ್ಪರ್ಧಿಸಲಿ. ಆಗ ಗೊತ್ತಾಗುತ್ತದೆ ಎಂದರು.

ಬೆಂಗಳೂರು ಬಗ್ಗೆ ಕಾಳಜಿ ಇದ್ದರೆ 10,000 ಕೋಟಿ ಕೊಡಿಸಲಿ: ಎಚ್ಡಿಕೆಗೆ ತಿರುಗೇಟು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನ ರಸ್ತೆಗಳನ್ನೆಲ್ಲ ಗುಂಡಿ ಬೀಳಿಸಿ ಕಂಪನಿಗಳು ವಲಸೆ ಹೋಗುವಂತೆ ಮಾಡಿದೆ ಎಂದಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಏಕವಚನದಲ್ಲೇ ತಿರುಗೇಟು ನೀಡಿದ್ದು, ‘ನೀನು ರಾಜ್ಯದ ಸಂಸದ, ಕೇಂದ್ರ ಸಚಿವನಿದ್ದೀಯ, ಬೆಂಗಳೂರಿಗೆ ನಿನ್ನ ಕೊಡುಗೆ ಏನು ಹೇಳಪ್ಪ, ಬೆಂಗಳೂರು ರಸ್ತೆ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ 10 ಸಾವಿರ ಕೋಟಿ ರು. ಅನುದಾನ ಕೊಡಿಸಲಿ’ ಎಂದು ಕೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ ಕುಮಾರಸ್ವಾಮಿ ಅವರ ಟ್ವೀಟ್‌ ಟೀಕೆ ಕುರಿತ ಪ್ರಶ್ನೆಗೆ, ಸುಮ್ಮನೆ ಒಂದು ಟ್ವಿಟ್‌ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಂಸದರಾಗಿ, ಕೇಂದ್ರ ಸಚಿವರಾಗಿ ಬೆಂಗಳೂರಿಗೆ ನಿನ್ನ ಕೊಡುಗೆ ಏನು? ಯುಪಿಎ ಸರ್ಕಾರ ಇದ್ದಾಗ ಜೆಎನ್‌ ನರ್ಮ್‌ ಯೋಜನೆ ಮೂಲಕ ಸಾಕಷ್ಟು ಅನುದಾನ ನೀಡಲಾಗಿತ್ತು. ಪ್ರಧಾನಿ ಮೋದಿ ಅವರಿಗೆ ಬಲಗೈ ಆಗಿರುವ ಅವರು ಬೆಂಗಳೂರಿನ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದಿಂದ ನಗರದ ಅಭಿವೃದ್ಧಿಗೆ 10 ಸಾವಿರ ಕೋಟಿ ರು. ಕೊಡಿಸಲಿ. ಮೇಕೆದಾಟುಗೆ ಒಂದೇ ನಿಮಿಷದಲ್ಲಿ ಪರ್ಮಿಷನ್ ಕೊಡುಸ್ತಿವಿ ಅಂದ್ರಿ ಯಾಕೆ ಮಾಡಲಿಲ್ಲ? ಮಹದಾಯಿಗೆ ಅನುಮತಿ ಕೊಡ್ತೀವಿ ಅಂದ್ರೆ ಯಾಕೆ ಮಾಡಲಿಲ್ಲ. ರೈತರ ಪರವಾಗಿ ಧ್ವನಿ ಎತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

PREV
Read more Articles on
click me!

Recommended Stories

ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ: ಯಾವ್ಯಾವ ಮಾರ್ಗಕ್ಕೆ?
ದಿಲ್ಲಿ, ಮುಂಬಯಿ ರೀತಿ ರಾಜಧಾನಿಗೆ ಎರಡು ಪೊಲೀಸ್‌ ಕಮೀಷನರೇಟ್‌