ಜಿಬಿಎ - ಎಲ್ಲಾ ಅಧಿಕಾರ ಕೇವಲ ಮುಖ್ಯಮಂತ್ರಿಗೆ : ಅಶೋಕ್ ಆಕ್ರೋಶ

Kannadaprabha News   | Kannada Prabha
Published : Oct 11, 2025, 08:01 AM IST
Karnataka LoP R Ashoka

ಸಾರಾಂಶ

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಿಂದ ಐದು ಮಹಾನಗರ ಪಾಲಿಕೆಗಳು ನೆಗೆದು ಬಿದ್ದುಹೋಗಿವೆ. ಎಲ್ಲಾ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಗೆ ನೀಡಲಾಗಿದೆ. ಇದು ಸಂವಿಧಾನ ವಿರೋಧಿ

ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಿಂದ ಐದು ಮಹಾನಗರ ಪಾಲಿಕೆಗಳು ನೆಗೆದು ಬಿದ್ದುಹೋಗಿವೆ. ಎಲ್ಲಾ ಅಧಿಕಾರಗಳನ್ನು ಕೇವಲ ಮುಖ್ಯಮಂತ್ರಿಗೆ ನೀಡಲಾಗಿದೆ. ಇದು ಸಂವಿಧಾನ ವಿರೋಧಿಯಾಗಿರುವುದರಿಂದ ಜಿಬಿಎ ಸಭೆಯನ್ನು ಬಹಿಷ್ಕರಿಸಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎ ಸಭೆಯನ್ನು ತರಾತುರಿಯಲ್ಲಿ ಕರೆಯಲಾಗಿದೆ. ಸಭೆ ಇರುವ ಒಂದು ದಿನದ ಮುನ್ನ ಆಹ್ವಾನ ನೀಡಲಾಗಿದೆ. ಕನಿಷ್ಠ 7 ದಿನಕ್ಕೆ ಮುನ್ನ ಸಭೆ ಹಾಗೂ ಅಜೆಂಡಾ ಬಗ್ಗೆ ಮಾಹಿತಿ ನೀಡಬೇಕು. ಮಧ್ಯಾಹ್ನ 12 ಗಂಟೆಗೆ ಅಜೆಂಡಾ ಕೊಟ್ಟು, ಅದನ್ನು ಓದಲು ಸಮಯ ನೀಡದೆ ಸಂಜೆ 4 ಗಂಟೆಗೆ ಸಭೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಯೋಜನೆಗಳಿಗೆ ಸಿಎಂ ಅನುಮೋದನೆ:

ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ, ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಹಾಗೂ ಪಂಚಾಯತ್‌ನಲ್ಲಿ ಅಧ್ಯಕ್ಷರೇ ಪ್ರಮುಖರಾಗಿರುತ್ತಾರೆ. ಆದರೆ, ಬೆಂಗಳೂರಿನಲ್ಲಿ ಐದು ಪಾಲಿಕೆಯಲ್ಲಿ ಮುಖ್ಯಮಂತ್ರಿಯೇ ಮುಖ್ಯಸ್ಥರಾಗುತ್ತಾರೆ. ಹಾಗಾದರೆ, ಮೇಯರ್‌ಗಳ ಅಗತ್ಯವೇನಿದೆ? ಹಾಗೆಯೇ ಬೆಂಗಳೂರು ಮೂಲಸೌಕರ್ಯಕ್ಕೆ ಎಂಜಿನಿಯರ್‌ಗಳನ್ನು ನೇಮಿಸಿದ್ದು, ಕಾರ್ಪೊರೇಶನ್‌ ಬದಲಾಗಿ ಇವರೇ ಎಲ್ಲ ಕಾಮಗಾರಿಗಳನ್ನು ಮಾಡುತ್ತಾರೆ. ಮುಖ್ಯಮಂತ್ರಿಯೇ ಯೋಜನೆಗಳನ್ನು ಅನುಮೋದಿಸಿ, ಅವರೇ ಜಾರಿ ಮಾಡುತ್ತಾರೆ. ನಿಯಮದ ಪ್ರಕಾರ ಯೋಜನೆಗಳನ್ನು ಪಾಲಿಕೆಯ ಕೌನ್ಸಿಲ್‌ ಅನುಮೋದಿಸಬೇಕು ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಬ್ರ್ಯಾಂಡ್‌ ಬೆಂಗಳೂರು ಎಂದು ಘೋಷಣೆ ಮಾಡಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ರಿಂಗ್‌ ರಸ್ತೆಯಲ್ಲಿ ರಾಶಿ ಕಸ ಬಿದ್ದಿದೆ. ಎಲ್ಲ ರಸ್ತೆಗಳಲ್ಲಿ ಹಳ್ಳ ಇದೆ. ಇಂತಹ ಸಮಸ್ಯೆಗಳನ್ನು ಇಟ್ಟುಕೊಂಡು ಸಭೆ ಮಾಡಿದ್ದೇಕೆ? ಈಗಿರುವ ಕಾರ್ಪೊರೇಶನ್‌ನಲ್ಲಿ ಕೌನ್ಸಿಲ್‌ ಸಭೆ ಮಾಡಬಹುದು. ಹಾಗಾದರೆ ಉಳಿದ ನಾಲ್ಕು ಪಾಲಿಕೆಗಳಲ್ಲಿ ಕೌನ್ಸಿಲ್‌ ಸಭೆ ನಡೆಸಲು ಅವಕಾಶ ಎಲ್ಲಿದೆ? ಅಂತಹ ಸಭಾಂಗಣ ಎಲ್ಲೂ ಇಲ್ಲ. ಚುನಾಯಿತ ಪ್ರತಿನಿಧಿಗಳು ಸಭೆ ಮಾಡಲು ಸ್ಥಳಾವಕಾಶವೇ ಇಲ್ಲದೆ ಐದು ಪಾಲಿಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿ/ನೌಕರರ ಕೊರತೆ:

ಈ ಹಿಂದೆ ಬಿಬಿಎಂಪಿಯ ಕಂದಾಯ ವಿಭಾಗದಲ್ಲಿ 858 ಅಧಿಕಾರಿ/ನೌಕರರು ಇದ್ದರು. ಐದು ಭಾಗ ಮಾಡಿದರೆ 1,482 ಅಧಿಕಾರಿ/ನೌಕರರು ಬೇಕಾಗುತ್ತದೆ. ಅಂದರೆ ಇನ್ನೂ ಸುಮಾರು 700 ಅಧಿಕಾರಿಗಳನ್ನು ನೇಮಕ ಮಾಡಬೇಕು. ಆರೋಗ್ಯ ಪರೀಕ್ಷಕರು 198 ಇದ್ದು, ಈಗ 500 ಮಂದಿ ಬೇಕಾಗಿದೆ. ಆರೋಗ್ಯ ವಿಭಾಗದಲ್ಲಿ ಒಟ್ಟು 429 ಮಂದಿ ಇದ್ದು, ಈಗ 1,065 ಮಂದಿಯನ್ನು ನೇಮಕ ಮಾಡಬೇಕಾಗುತ್ತದೆ. ಚುನಾವಣೆಗೆ ಮುನ್ನ ಇಷ್ಟೂ ಜನರನ್ನು ನೇಮಕ ಮಾಡಬೇಕಾಗುತ್ತದೆ. ಹಣಕಾಸು ಇಲಾಖೆಯಲ್ಲಿ 18 ಮಂದಿ ಇದ್ದು, ಇನ್ನೂ 30 ಮಂದಿಯನ್ನು ನೇಮಕ ಮಾಡಬೇಕು. ಒಟ್ಟಾರೆಯಾಗಿ 2,818 ಹುದ್ದೆಗಳಿವೆ. 6,326 ಹುದ್ದೆಗಳನ್ನು ಹೊಸದಾಗಿ ಸೃಜಿಸಬೇಕಾಗುತ್ತದೆ. ಅಂದರೆ 4 ಸಾವಿರ ಜನರನ್ನು ಹೊಸದಾಗಿ ನೇಮಕ ಮಾಡಬೇಕು. ಇಷ್ಟೊಂದು ಅಧಿಕಾರಿ/ನೌಕರರನ್ನು ಎಲ್ಲಿಂದ ತರುತ್ತಾರೆ ಎಂದು ಆರ್‌.ಅಶೋಕ್‌ ಪ್ರಶ್ನಿಸಿದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ