ಬೆಂಗಳೂರಿನಲ್ಲಿ ಗ್ಯಾಸ್ ಸಂಕಷ್ಟ: ಹೋಟೆಲ್‌ ಬಂದ್‌, ಪಿಜಿಗಳಲ್ಲಿ ಊಟ ನಿಲ್ಲಿಸಿದ ಮಾಲೀಕರು! ಊಟಕ್ಕೇನು ಮಾಡೋದು?

Published : Mar 11, 2026, 09:30 AM IST
GAS cylinder

ಸಾರಾಂಶ

ಬೆಂಗಳೂರಿನಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯು ಹೋಟೆಲ್‌ ಮತ್ತು ಪಿಜಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಹಲವು ಹೋಟೆಲ್‌ಗಳು ಬಂದ್ ಆಗುವ ಸ್ಥಿತಿಯಲ್ಲಿದ್ದು, ಪಿಜಿಗಳಲ್ಲಿ ಮಧ್ಯಾಹ್ನದ ಊಟ ಸ್ಥಗಿತಗೊಂಡಿದೆ, ಇದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ತೊಂದರೆ ಉಂಟುಮಾಡಿದೆ.

ಬೆಂಗಳೂರು ನಗರದಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರಗೊಂಡ ಹಿನ್ನೆಲೆ, ಹೋಟೆಲ್‌ಗಳು ಮತ್ತು ಪಿಜಿ (PG) ವಸತಿ ವ್ಯವಸ್ಥೆಗಳಲ್ಲಿ ಅಡುಗೆ ಸೇವೆಗೆ ಭಾರೀ ತೊಂದರೆ ಉಂಟಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಸರಬರಾಜು ಕಳೆದ ಮೂರು ದಿನಗಳಿಂದ ಸ್ಥಗಿತಗೊಂಡಿರುವುದರಿಂದ ನಗರದಲ್ಲಿ ಅನೇಕ ಹೋಟೆಲ್‌ಗಳು ಮಧ್ಯಾಹ್ನದ ವೇಳೆಗೆ ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ವಿದ್ಯಾರ್ಥಿಗಳು ಹಾಗೂ ಪಿಜಿಗಳಲ್ಲಿ ವಾಸಿಸುವ ಉದ್ಯೋಗಿಗಳಿಗೆ ನೇರವಾಗಿ ಪರಿಣಾಮ ಬೀರಿದೆ.

ಪಿಜಿಗಳಲ್ಲಿ ಮಧ್ಯಾಹ್ನದ ಊಟ ಸ್ಥಗಿತ

ವೈಟ್‌ಫೀಲ್ಡ್ ಪಿಜಿ ವೆಲ್ಫೇರ್ ಅಸೋಸಿಯೇಷನ್ ಮಾಹಿತಿ ಪ್ರಕಾರ, ತಮ್ಮ ವ್ಯಾಪ್ತಿಯ ಹಲವಾರು ಪಿಜಿ ಮಾಲೀಕರು ಗ್ಯಾಸ್ ಕೊರತೆಯಿಂದ ಮಧ್ಯಾಹ್ನದ ಊಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಪೂರೈಕೆ ಸರಿಯಾಗುವವರೆಗೆ ಮಧ್ಯಾಹ್ನದ ಊಟ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪಿಜಿ ಮಾಲೀಕರು ನೋಟಿಸ್ ನೀಡುತ್ತಿದ್ದಾರೆ. ಇದರಿಂದ ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳು ಮಧ್ಯಾಹ್ನದ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಇನ್ನೊಂದೆಡೆ, ನಗರದಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಇದರ ಪರಿಣಾಮವಾಗಿ ಅನೇಕ ಹೋಟೆಲ್‌ಗಳು ತಮ್ಮ ಸೇವೆಯನ್ನು ಕಡಿತಗೊಳಿಸಲು ಅಥವಾ ಬಂದ್ ಮಾಡಲು ಮುಂದಾಗಿವೆ. ಹಲವು ಹೋಟೆಲ್‌ಗಳಿಗೆ ಸಾಮಾನ್ಯವಾಗಿ ದಿನಕ್ಕೆ 10 ಸಿಲಿಂಡರ್ ದೊರೆಯುತ್ತಿದ್ದರೆ, ಈಗ ಕೇವಲ 5 ಸಿಲಿಂಡರ್ ಮಾತ್ರ ಲಭ್ಯವಾಗುತ್ತಿದೆ. ಹೀಗಾಗಿ ಉಳಿದಿರುವ ಎರಡು ಅಥವಾ ಮೂರು ಸಿಲಿಂಡರ್ ಬಳಸಿ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಇಂದು ಮಧ್ಯಾಹ್ನದ ವೇಳೆಗೆ ನಗರದಲ್ಲಿನ ಬಹುತೇಕ ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಈ ನಡುವೆ, ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಗ್ಯಾಸ್ ಪ್ಲಾಂಟ್ ಬಳಿ ಸಿಲಿಂಡರ್ ಹೊತ್ತೊಯ್ಯುವ ನೂರಾರು ಲಾರಿಗಳು ನಿಂತಿರುವ ದೃಶ್ಯ ಕಂಡುಬಂದಿದೆ. ಸಿಲಿಂಡರ್ ಉತ್ಪಾದನಾ ಕಂಪನಿಗಳಿಂದಲೇ ವಾಣಿಜ್ಯ ಸಿಲಿಂಡರ್ ಉತ್ಪಾದನೆ ಮತ್ತು ಸರಬರಾಜು ಸ್ಥಗಿತಗೊಂಡಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿಗೆ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಹೆಚ್ಚು ಪ್ರಮಾಣದಲ್ಲಿ ಪೂರೈಸುವ ಇಂಡಿಯನ್ ಆಯಿಲ್ ಸಂಸ್ಥೆಯಿಂದ ಸರಬರಾಜು ಕಡಿಮೆಯಾಗಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ವಿದ್ಯಾರ್ಥಿ ಭವನ್ ಹೋಟೆಲ್‌ನಲ್ಲಿ ಸೀಟುಗಳ ಸಂಖ್ಯೆ ಕಡಿತ!

ನಗರದ ಪ್ರಸಿದ್ಧ ಹೋಟೆಲ್‌ಗಳಲ್ಲಿಯೂ ಇದರ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ. ಪ್ರಸಿದ್ಧ Vidyarthi Bhavan ಹೋಟೆಲ್‌ನಲ್ಲಿ ಗ್ರಾಹಕರಿಗೆ ನೀಡುವ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಸಾಮಾನ್ಯವಾಗಿ ಲಭ್ಯವಿದ್ದ ಸುಮಾರು 40 ಸೀಟುಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ. ಗ್ಯಾಸ್ ಕೊರತೆಯಿಂದಾಗಿ ತಿಂಡಿ ಪೂರೈಕೆ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ನಾಲ್ಕು ಹಂಚುಗಳಲ್ಲಿ ದೋಸೆ ತಯಾರಿಸುತ್ತಿದ್ದರೆ, ಈಗ ಕೇವಲ ಒಂದು ಹಂಚಿನಲ್ಲಿ ಮಾತ್ರ ದೋಸೆ ತಯಾರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಹೋಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಇಂದೂ ಗ್ಯಾಸ್ ಸಿಲಿಂಡರ್ ಪೂರೈಕೆ ಆಗದಿದ್ದಲ್ಲಿ ಹೋಟೆಲ್ ಬಂದ್ ಮಾಡಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಗ್ಯಾಸ್ ಕೊರತೆ ಕೇವಲ ವಾಣಿಜ್ಯ ಬಳಕೆಗೆ ಮಾತ್ರ ಸೀಮಿತವಾಗದೆ, ಗೃಹ ಬಳಕೆಯ ಸಿಲಿಂಡರ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಮಧ್ಯಪ್ರಾಚ್ಯದ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾದ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಅದರ ಪರಿಣಾಮ ಇದೀಗ ಬೆಂಗಳೂರಿನಲ್ಲಿಯೂ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮಸ್ಯೆಯನ್ನು ಪರಿಹರಿಸಲು ಇಂದು ಬೆಳಿಗ್ಗೆ 11 ಗಂಟೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಹೆಚ್‌ ಮುನಿಯಪ್ಪ ( K. H. Muniyappa) ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ Indian Oil Corporation, Hindustan Petroleum ಮತ್ತು Bharat Petroleum ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇನ್ನೂ ಕೆಲವು ವರದಿಗಳ ಪ್ರಕಾರ, ಮುಂದಿನ 10 ರಿಂದ 15 ದಿನಗಳವರೆಗೆ ಗ್ಯಾಸ್ ಸಿಲಿಂಡರ್ ಅಭಾವ ಮುಂದುವರಿಯುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಮುಂದಾಗಿರುವವರಿಗೆ ಕೂಡ ಸಂಕಷ್ಟ ಎದುರಾಗಬಹುದು. ಈಗಾಗಲೇ ಹೊಸ ಕನೆಕ್ಷನ್ ಪಡೆಯಲು ಜನರು ಪರದಾಡುತ್ತಿರುವುದು ಕಂಡುಬರುತ್ತಿದೆ.

ಈ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಹಾಗೂ ಪಿಜಿ ನಿರ್ವಹಕರು ಸರ್ಕಾರವನ್ನು ತುರ್ತಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ ಮಾಡುತ್ತಿದ್ದಾರೆ. ಗ್ಯಾಸ್ ಸರಬರಾಜು ತಕ್ಷಣವೇ ಸರಿಪಡಿಸದಿದ್ದರೆ ನಗರದಲ್ಲಿ ಆಹಾರ ಸೇವೆಯ ಮೇಲೆಯೇ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಕೂಲಿ ಕೆಲಸ ಮುಗಿಸಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಜಾಡಿಸಿ ಒದ್ದ ಕುದುರೆ, ಬಡಪಾಯಿ ದುರಂತ ಸಾವು!
Bengaluru: ಬೆಂಗಳೂರಿನ ಶೇಷಾದ್ರಿಪುರಂ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕಳಚಿಬಿದ್ದ ಶೀಟ್