ಗಂಗಾಂಬಿಕೆ ಅಧಿಕಾರಾವಧಿ ಮುಕ್ತಾಯ: ಮೇಯರ್‌ ಚುನಾವಣೆಗೆ ಸಿದ್ಧತೆ

By Web DeskFirst Published Aug 7, 2019, 9:43 AM IST
Highlights

ಮೇಯರ್‌ ಚುನಾವಣೆಗೆ ಪಾಲಿಕೆ ಸಿದ್ಧತೆ| ಸೆ.28ಕ್ಕೆ ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ ಅಧಿಕಾರಾವಧಿ ಮುಕ್ತಾಯ

ಬೆಂಗಳೂರು[ಆ.07]: ಬಿಬಿಎಂಪಿಯ ಮೇಯರ್‌ ಗಂಗಾಂಬಿಕೆ ಹಾಗೂ ಉಪಮೇಯರ್‌ ಭದ್ರೇಗೌಡ ಅವರ ಒಂದು ವರ್ಷದ ಅಧಿಕಾರಾವಧಿ ಸೆ.28ಕ್ಕೆ ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಐದನೇ ಅವಧಿಗೆ ನೂತನ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ಪಾಲಿಕೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

52 ನೇ ಮೇಯರ್‌ ಗಂಗಾಂಬಿಕೆ ಹಾಗೂ ಉಪಮೇಯರ್‌ ಭದ್ರೇಗೌಡ ಅವರ ಅಧಿಕಾರಾವಧಿ ಸೆ.28ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಐದನೇ ಅವಧಿಗೆ ಮೇಯರ್‌ ಹಾಗೂ ಉಪಮೇಯರ್‌ ಅವರ ಆಯ್ಕೆ ಸಂಬಂಧ ಚುನಾವಣೆ ನಡೆಸಲು ನಿರ್ದೇಶನಗಳನ್ನು ನೀಡುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಮೇಯರ್‌ ಹಾಗೂ ಉಪಮೇಯರ್‌ ಅವರು ಚುನಾವಣಾಧಿಕಾರಿ ಆಗಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತೆ ರಶ್ಮಿ ಮಹೇಶ್‌ ಅವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಗಳ ಮೀಸಲಾತಿ ಸ್ಪಷ್ಟಪಡಿಸುವಂತೆ ನಗರಾಭಿವೃದ್ಧಿ ಇಲಾಖೆಗೆ ಕೋರಿದ್ದಾರೆ.

ಮತದಾರ ಪಟ್ಟಿ ಪರಿಷ್ಕರಣೆ:

ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಗೆ ಬಿಬಿಎಂಪಿ ಸದಸ್ಯರ ಜತೆಗೆ ಬಿಬಿಎಂಪಿ ವ್ಯಾಪ್ತಿಯ ಶಾಸಕರು, ಸಂಸದರು ಮತದಾರರಾಗಿದ್ದಾರೆ. ಅದರಲ್ಲಿ ಬೆಂಗಳೂರು ನಗರ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರಿರುವ ವಿಧಾನ ಪರಿಷತ್‌ ಮತ್ತು ರಾಜ್ಯಸಭಾ ಸದಸ್ಯರು ಕೂಡ ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ.

ಹೀಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ನೂತನವಾಗಿ ಆಯ್ಕೆಯಾದ ಎಂಎಲ್‌ಸಿ ಮತ್ತು ರಾಜ್ಯಸಭಾ ಸದಸ್ಯರ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರ್ಪಡೆ ಮಾಡುವುದು ಹಾಗೂ ಈ ಹಿಂದೆ ಮತದಾರರಾಗಿದ್ದು, ಈಗ ಅನರ್ಹಗೊಂಡಿರುವವರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆಗೂ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

ಒಮ್ಮೆ ಪಟ್ಟಿಸಿದ್ಧವಾದ ನಂತರ, ಪ್ರಾದೇಶಿಕ ಆಯುಕ್ತರಿಗೆ ಕಳುಹಿಸಲಾಗುತ್ತದೆ. ಅವರು ಒಪ್ಪಿಗೆ ನೀಡಿದ ನಂತರ, ಅದನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಬಳಿಕ ಪ್ರಾದೇಶಿಕ ಆಯುಕ್ತರು ಮೇಯರ್‌ ಹಾಗು ಉಪಮೇಯರ್‌ ಚುನಾವಣೆ ದಿನಾಂಕ ನಿಗದಿ ಪಡಿಸಲಿದ್ದಾರೆ.

click me!