ಶಿರಸಿ ಸುತ್ತ ‘ಕೈಚಕ್ಕುಲಿ’ಯ ಕೈಚಳಕ ಜೋರು!

By Kannadaprabha News  |  First Published Aug 25, 2022, 2:35 PM IST

ಗಣೇಶ ಚತುರ್ಥಿ ಬಂತು ಎಂದರೆ ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ಹಬ್ಬಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತವೆ. ಹಳ್ಳಿಗರೆಲ್ಲ ಒಂದೆಡೆ ಕುಳಿತು ಹಬ್ಬಕ್ಕೆ ಸಾಕಾಗುವಷ್ಟುಚಕ್ಕುಲಿ ತಯಾರಿಸುವ ಚಕ್ಕುಲಿ ಕಂಬಳ ಈಗ ಎಲ್ಲೆಡೆ ಕಾಣತೊಡಗಿದೆ. ಶಿರಸಿ ತಾಲೂಕಿನ ಕಲ್ಮನೆ, ಹೆಗಡೆಕಟ್ಟಾ, ಹೆಗ್ಗಾರ ಭಾಗದಲ್ಲಿ ಪ್ರತಿವರ್ಷ ಬರಿಗೈನಿಂದ ಹೊಸೆದು ಮಾಡುವ ಚಕ್ಕುಲಿ ಜೋರಾಗಿದೆ.


ಶಿರಸಿ (ಆ.25): ಗಣೇಶ ಚತುರ್ಥಿ ಬಂತು ಎಂದರೆ ಇಲ್ಲಿನ ಬಹುತೇಕ ಹಳ್ಳಿಗಳಲ್ಲಿ ಹಬ್ಬಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತವೆ. ಹಳ್ಳಿಗರೆಲ್ಲ ಒಂದೆಡೆ ಕುಳಿತು ಹಬ್ಬಕ್ಕೆ ಸಾಕಾಗುವಷ್ಟುಚಕ್ಕುಲಿ ತಯಾರಿಸುವ ಚಕ್ಕುಲಿ ಕಂಬಳ ಈಗ ಎಲ್ಲೆಡೆ ಕಾಣತೊಡಗಿದೆ. ಶಿರಸಿ ತಾಲೂಕಿನ ಕಲ್ಮನೆ, ಹೆಗಡೆಕಟ್ಟಾ, ಹೆಗ್ಗಾರ ಭಾಗದಲ್ಲಿ ಪ್ರತಿವರ್ಷ ಬರಿಗೈನಿಂದ ಹೊಸೆದು ಮಾಡುವ ಚಕ್ಕುಲಿ ಸಿದ್ಧಪಡಿಸಲಾಗುತ್ತದೆ. ಈಗಾಗಲೇ ಚಕ್ಕುಲಿ ಕಂಬಳಕ್ಕೆ ಚಾಲನೆ ನೀಡಲಾಗಿದೆ. ವಾರವಿಡೀ ದಿನದಲ್ಲಿ ಒಂದು ಬಾರಿಯಂತೆ ಒಂದಲ್ಲ ಒಂದು ಮನೆಯಲ್ಲಿ ಈ ಕೈ ಚಕ್ಕುಲಿ ಕಂಬಳ ಮಾಡಲಾಗುತ್ತದೆ. ಇದಕ್ಕಾಗಿ ನಿಗದಿ ಮಾಡಿದ ಮನೆಗೆ ಗ್ರಾಮದ ಜನರು ಹೋಗಿ ಬರಿಗೈನಲ್ಲಿ ಚಕ್ಕುಲಿ ಹೊಸೆದು ಮಾಡಲಾಗುತ್ತದೆ.

ಗಣೇಶ ಚತುರ್ಥಿ 2022: ಬಪ್ಪನ ನೆಚ್ಚಿನ ರಾಶಿಚಕ್ರಗಳಿವು.. ಅವನ ಆಶೀರ್ವಾದ ಇವರ ಮೇಲೆ ನಿರಂತರ..

Tap to resize

Latest Videos

ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಒಗ್ಗಟ್ಟಾಗಿ ಸೇರಿ ಚಕ್ಕುಲಿ ತಯಾರಿಸುತ್ತಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಹಾಡುಗಳು, ಕೃಷಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಮೂಲಕ ಒಬ್ಬರಿಗೊಬ್ಬರು ತಮ್ಮಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಗಮ ಗಮ ಚಕ್ಕುಲಿ ಸಿದ್ಧವಾದ ನಂತರ ಎಲ್ಲರೂ ಸವಿದು ಚಹಾ, ಕಾಫಿ ಸೇವಿಸಿ ವೀಳ್ಯದೆಲೆ ಅಡಿಕೆ ಅಗೆದು ನಾಲಿಗೆ, ತುಟಿ ಕೆಂಪಾಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ.

ಈ ಮೂಲಕ ಊರಿನಲ್ಲಿ ತಮ್ಮ ಬಾಂಧವ್ಯವನ್ನು ಪ್ರತಿ ವರ್ಷ ಗಣೇಶ ಚತುರ್ಥಿಗೂ ಮೊದಲು ವೃದ್ಧಿಸಿಕೊಳ್ಳುವ ಈ ಗ್ರಾಮದವರು ತಲೆತಲಾಂತರದಿಂದ ಈ ಕಂಬಳವನ್ನು ಜೀವಂತವಾಗಿಸಿಕೊಂಡು ಬಂದಿದ್ದಾರೆ. ಚಕ್ಕುಲಿ ಹಿಟ್ಟನ್ನು ಬರಿಗೈನಿಂದ ಹೊಸೆದು ಸುತ್ತಿ ತಯಾರಿಸುವ ವಿಧಾನವೇ ಕೈಚಕ್ಕುಲಿ. ಆದರೆ ಇಂದಿನ ದಿನಗಳಲ್ಲಿ ಹಿಟ್ಟನ್ನು ಚಕ್ಕುಲಿ ಹುಟ್ಟಿ(ಮೌಲ್ಡ್‌)ನಲ್ಲಿ ಹಾಕಿ ಒತ್ತಿ ಚಕ್ಕುಲಿ ಮಾಡುತ್ತಾರೆ. ಈ ಗ್ರಾಮಗಳಲ್ಲಿ ಹಿರಿಯರು ಮೊದಲಿನಿಂದಲೂ ಕೈ ಚಕ್ಕುಲಿ ತಯಾರಿಸುವ ಕರಾಮತ್ತನ್ನು ಕರಗತ ಮಾಡಿಕೊಂಡಿದ್ದಾರೆ. ಈ ಚಕ್ಕುಲಿ ತುಂಬಾ ವಿಶೇಷ. ಇದಕ್ಕೆ ವಿಶೇಷ ಅಭ್ಯಾಸ ಅಗತ್ಯವಿದೆ. ಈಗಿನ ತಲೆಮಾರಿನವರಿಗೆ ಇದು ಅಷ್ಟಾಗಿ ಒಗ್ಗದು. ಹಳಬರದ್ದು ಇದರಲ್ಲಿ ಎತ್ತಿದ ಕೈ. ಈ ಚಕ್ಕುಲಿ ಕೈನಿಂದ ಹೊಸೆದು ಮಾಡುವುದನ್ನು ನೋಡುವುದೂ ಒಂದು ಹಬ್ಬ. ಜೊತೆಯಲ್ಲಿ ಅದರ ರುಚಿಯೂ ವಿಶಿಷ್ಟ. ಈ ಕೈ ಚಕ್ಕುಲಿ ಕಂಬಳ ಆರಂಭವಾಗುತ್ತಿದ್ದಂತೆಯೇ ಆ ಗ್ರಾಮದವರೆಲ್ಲ ತಮ್ಮ ಕೆಲಸ ಕಾರ್ಯವನ್ನು ಬಿಟ್ಟು ಚಕ್ಕುಲಿ ಮಾಡುವ ಮನೆಗೆ ಹಾಜರಾಗುತ್ತಾರೆ. ಇದು ಸುಮಾರು 10-15 ದಿನಗಳ ವರೆಗೂ ನಡೆಯುತ್ತದೆ.

ಗಣೇಶ ಚತುರ್ಥಿ 2022 ಯಾವಾಗ? ಶುಭ ಮುಹೂರ್ತವೇನು?

ಗಣೇಶ ಚತುರ್ಥಿ ಮುಗಿಯುವವರೆಗೂ ಈ ಚಕ್ಕುಲಿ ಕಂಬಳ ಈ ಭಾಗದಲ್ಲಿ ನಡೆಯುವುದು ವಿಶೇಷವಾಗಿದೆ. ಗ್ರಾಮದವರೆಲ್ಲ ಸೇರಿ ಮಾಡುವ ಚಕ್ಕುಲಿಯನ್ನು ನೆಂಟರಿಷ್ಟರು ಹಾಗೂ ಪರಿಚಿತ ಸ್ನೇಹಿತರಿಗೂ ನೀಡಿ ಸಹಬಾಳ್ಳೆಯ ಮಹತ್ವವನ್ನು ಈ ಗ್ರಾಮದ ಜನ ಕೈ ಚಕ್ಕುಲಿ ಕಂಬಳದ ಮೂಲಕ ಸಾರಿ ಮಾದರಿ ಯಾಗಿದ್ದಾರೆ.

click me!