
ಗದಗ (ಜ.19): ಐತಿಹಾಸಿಕ ನಗರಿ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಇಲಾಖೆಯ ಉತ್ಖನನ ದಿನಕ್ಕೊಂದು ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಒಂದೆಡೆ ಅಪರೂಪದ ಶಿಲಾಯುಗದ ಆಯುಧಗಳು ಪತ್ತೆಯಾಗಿ ಸಂಶೋಧಕರಲ್ಲಿ ಉತ್ಸಾಹ ಮೂಡಿಸಿದ್ದರೆ, ಇನ್ನೊಂದೆಡೆ 'ಇಲ್ಲಿ ಸಾವಿರ ಕೆಜಿ ಚಿನ್ನದ ಶಿವಲಿಂಗವಿದೆ' (1000 Kg Gold Shivalinga Statue) ಎಂದು ಕಿತ್ತೂರು ರಾಣಿ ಚೆನ್ನಮ್ಮ ಅವರ ಮಗನೆಂದು ಹೇಳಿಕೊಂಡು ಬಂದಿದ್ದ ಸ್ವಾಮೀಜಿಯ ಮಾತು ಗ್ರಾಮದ ಜನರಿಗೆ ಭಾರೀ ಆಶ್ಚರ್ಯ ಮೂಡಿಸಿದೆ.
ಉತ್ಖನನ ನಡೆಯುತ್ತಿರುವ ಜಾಗಕ್ಕೆ ಆಗಮಿಸಿದ ಖಾವಿಧಾರಿ ವ್ಯಕ್ತಿಯೊಬ್ಬರು ತಾನು 'ಕಿತ್ತೂರು ರಾಣಿ ಚೆನ್ನಮ್ಮನ ಮಗ' ಎಂದು ಹೇಳಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸಿದರು. ಸ್ಥಳಕ್ಕೆ ಬಂದವರೇ ಒಂದೇ ಕಾಲಿನ ಮೇಲೆ ನಿಂತು ವಿಚಿತ್ರವಾಗಿ ವರ್ತಿಸಲು ಶುರು ಮಾಡಿದ ಈ ವ್ಯಕ್ತಿ, 'ಉತ್ಖನನ ಮಾಡುತ್ತಿರುವ ಜಾಗದಲ್ಲಿ ಏನೂ ಇಲ್ಲ, ಅದರ ಪಕ್ಕದಲ್ಲೇ ಸಾವಿರ ಕೆಜಿ ತೂಕದ ಚಿನ್ನದ ಶಿವಲಿಂಗ ಮತ್ತು ಕ್ವಿಂಟಲ್ ತೂಕದ ಚಿನ್ನದ ದೇವಿಯ ಮೂರ್ತಿ (100 KG Gold goddess Idol) ಇದೆ' ಎಂದು ಹೇಳಿಕೆ ನೀಡಿದರು.
ಅಷ್ಟಕ್ಕೇ ನಿಲ್ಲದ ಈ ವ್ಯಕ್ತಿ, 'ಒಂದು ವೇಳೆ ಆ ಮೂರ್ತಿಯನ್ನು ಸ್ಥಳಾಂತರಿಸಿದರೆ ಜಗತ್ತಿನಲ್ಲಿ ಮಳೆಯೇ ಆಗುವುದಿಲ್ಲ' ಎಂದು ಭವಿಷ್ಯ ನುಡಿದರು. ಇವರ ಈ ವಿಚಿತ್ರ ವರ್ತನೆಯಿಂದ ಸ್ಥಳದಲ್ಲಿ ಗೊಂದಲ ಸೃಷ್ಟಿಯಾಯಿತು. ಆದರೆ, ಈತ ಪಾನಮತ್ತನಾಗಿರುವುದು ಕಂಡುಬಂದ ಕೂಡಲೇ ರೊಚ್ಚಿಗೆದ್ದ ಸ್ಥಳೀಯರು ಮತ್ತು ಗ್ರಾಮಸ್ಥರು ಆತನಿಗೆ ಸರಿಯಾದ ಕ್ಲಾಸ್ ತೆಗೆದುಕೊಂಡು ಅಲ್ಲಿಂದ ಓಡಿಸಿದ್ದಾರೆ. ಗ್ರಾಮಸ್ಥರು ಗದರಿಸುತ್ತಿದ್ದಂತೆ ಆ ಖಾವಿಧಾರಿ ಹಿಮ್ಮುಖವಾಗಿ ಓಡಿ ಪರಾರಿಯಾಗಿದ್ದಾನೆ.
ಇನ್ನು 4ನೇ ದಿನದ ಉತ್ಖನನ ಕಾರ್ಯವನ್ನು ಆರಂಭಿಸಲಾಗಿದ್ದು, ಲಕ್ಕುಂಡಿಯ ಉತ್ಖನನ ಭೂಮಿಯಲ್ಲಿ ಬಗೆದಷ್ಟು ವಿಸ್ಮಯಗಳು ಹೊರಬರುತ್ತಿವೆ. ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ ಶಿಲಾಯುಗದ ಕಾಲದಲ್ಲಿ ಬಳಕೆಯಾಗುತ್ತಿದ್ದ ಕಲ್ಲಿನ ಆಯುಧವೊಂದು ಪತ್ತೆಯಾಗಿದೆ. ಈ ವಸ್ತುವು ಅಂಡಾಕಾರದಲ್ಲಿದ್ದು, ಒಂದು ಭಾಗವು ಅತ್ಯಂತ ಮೊನಚಾಗಿದೆ. ಇದು ಅಂದಿನ ಕಾಲದ ಮಾನವರು ಬೇಟೆ ಅಥವಾ ದೈನಂದಿನ ಕೆಲಸಕ್ಕೆ ಬಳಸುತ್ತಿದ್ದ ಆಯುಧವಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಗೆ ಗಂಟೆಯೊಂದು ಕೂಡ ಲಭ್ಯವಾಗಿದೆ.
ಪತ್ತೆಯಾದ ಆಯುಧ ಹಾಗೂ ಗಂಟೆಯನ್ನು ಪುರಾತತ್ವ ಇಲಾಖೆಯ ಉತ್ಖನನ ಮೇಲ್ವಿಚಾರಕರು ತಕ್ಷಣವೇ ವಶಕ್ಕೆ ಪಡೆದಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಟ್ಯಾಗ್ ಅಳವಡಿಸಿ ಹೆಚ್ಚಿನ ಸಂಶೋಧನೆಗಾಗಿ ಸುರಕ್ಷಿತವಾಗಿ ತೆಗೆದಿರಿಸಿದ್ದಾರೆ. ಇನ್ನು ನಿನ್ನೆ ಚಿಕ್ಕದೊಂದು ಶಿವಲಿಂಗ, ಶಿವನ ವಿಗ್ರಹದ ಕಳಶದ ಶಿಲಾ ಭಾಗವೊಂದು ಲಭ್ಯವಾಗಿತ್ತು. ಇದನ್ನೂ ಉತ್ಖನನ ಮೇಲ್ವಿಚಾರಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಒಟ್ಟಾರೆಯಾಗಿ ಲಕ್ಕುಂಡಿಯ ಈ ಮಣ್ಣಿನ ಅಡಿಯಲ್ಲಿ ಇನ್ನೂ ಅನೇಕ ಐತಿಹಾಸಿಕ ರಹಸ್ಯಗಳು ಅಡಗಿರುವ ಸಾಧ್ಯತೆ ಇದ್ದು, ಜನರ ಕುತೂಹಲ ಇಮ್ಮಡಿಯಾಗಿದೆ.
ರಿತ್ತಿ ಕುಟುಂಬಕ್ಕೆ ಬಂಗಾರದ ನಿಧಿ ಸಿಕ್ಕಿತ್ತು:
ಇತ್ತೀಚೆಗೆ ಕಳೆದ 10 ದಿನಗಳ ಹಿಂದೆ ಲಕ್ಕುಂಡಿ ಗ್ರಾಮದಲ್ಲಿ ಮನೆಯನ್ನು ನಿರ್ಮಿಸಲು ಪಾಯ ಅಗೆಯುವಾಗ ಬಂಗಾರದ ನಿಧಿ ಇರುವುದು ಪತ್ತೆಯಾಗಿತ್ತು. ಈ ನಿಧಿಯನ್ನು 8ನೇ ತರಗತಿ ಓದುತ್ತಿದ್ದ ಪ್ರಜ್ವಲ್ ರಿತ್ತಿ ಎನ್ನುವ ಬಾಲಕ ಸರ್ಕಾರಕ್ಕೆ ಒಪ್ಪಿಸಿದ್ದನು. ಈ ಚಿನ್ನದ ನಿಧಿಯ ಮೌಲ್ಯ 65 ಲಕ್ಷ ರೂ. ಆಗಿತ್ತು. ಇದರಲ್ಲಿ ಶೇ.20ರಷ್ಟು ಹಣವನ್ನು ಅಂದರೆ 13 ಲಕ್ಷ ರೂ. ನಷ್ಟು ಹಣವನ್ನು ರಿತ್ತಿ ಕುಟುಂಬಕ್ಕೆ ನೀಡಿತ್ತು. ಇದಾದ ನಂತರ ಬಾಲಕ ಪ್ರಜ್ವಲ್‌ಗೆ ಸರ್ಕಾರಿ ನೌಕರಿ ಕೊಡುವುದಕ್ಕೆ ಜಿಲ್ಲಾಡಳಿತ ಮುಂದಾಗಿದೆ.