Gadag: 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾದ KRIDL AEE ಫರ್ವೇಜ್; ಜೀವಭಯ ಇತ್ತೇ?

Published : Oct 24, 2026, 07:02 AM IST
Gadag

ಸಾರಾಂಶ

ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಡೆತ್‌ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕೆಆರ್‌ಐಡಿಎಲ್‌ ಎಇಇ ಫರ್ವೇಜ್ ಧಾರವಾಡ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಗದಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದು, ನಾಪತ್ತೆಯ ಹಿಂದಿನ ನಿಖರ ಕಾರಣ ತಿಳಿಯಲು ತೀವ್ರ ವಿಚಾರಣೆ ನಡೆಸಲಿದ್ದಾರೆ.

ಗದಗ: ಸರಕಾರದಿಂದ ಕಾಮಗಾರಿಗಳ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಡೆತ್‌ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್‌) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಫರ್ವೇಜ್ ಧಾರವಾಡ, ಬರೋಬ್ಬರಿ 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.

ಅಧಿಕಾರಿಯನ್ನು ಪತ್ತೆ ಹಚ್ಚಿರುವ ಗದಗ ಪೊಲೀಸರು ಮುಂಬೈನಲ್ಲಿ ಅವರನ್ನು ವಶಕ್ಕೆ ಪಡೆದಿದ್ದು, ಶನಿವಾರ ಗದಗಕ್ಕೆ ಕರೆತರುವ ಸಾಧ್ಯತೆಯಿದೆ. ಬಳಿಕ ನ್ಯಾಯಾಲಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿ, ನಾಪತ್ತೆಯಾಗಿದ್ದರ ಹಿಂದಿನ ನಿಖರ ಕಾರಣಗಳು ಹಾಗೂ ಇಷ್ಟು ದಿನಗಳ ಕಾಲ ಎಲ್ಲೆಲ್ಲಿ ಆಶ್ರಯ ಪಡೆದಿದ್ದರು ಎಂಬ ಸಮಗ್ರ ಮಾಹಿತಿ ಕಲೆ ಹಾಕಲಿದ್ದಾರೆ.

ಐದು ಪ್ರತ್ಯೇಕ ತನಿಖಾ ತಂಡಗಳಿಂದ ಶೋಧಕಾರ್ಯ

ಪರ್ವೀಜ್ ಧಾರವಾಡ ಅವರು ಡೆತ್‌ ನೋಟ್ ಬರೆದಿಟ್ಟು ದಿಢೀರ್ ನಾಪತ್ತೆಯಾಗಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಗುತ್ತಿಗೆದಾರರ ಒತ್ತಡ ಹಾಗೂ ಸರಕಾರದ ಮಟ್ಟದಲ್ಲಿ ಅನುದಾನ ವಿಳಂಬದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಐದು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದ್ದರು.

40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆ

ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ಮೀರಜ್ ಸೇರಿದಂತೆ ವಿವಿಧ ಶಂಕಿತ ಸ್ಥಳಗಳಿಗೆ ತೆರಳಿ ಹುಡುಕಾಟ ನಡೆಸಿದರೂ ಅವರ ಸುಳಿವು ಲಭ್ಯವಾಗಿರಲಿಲ್ಲ. ಅವರ ಮೊಬೈಲ್ ಕರೆಗಳ ವಿವರ, ಹಣಕಾಸು ವಹಿವಾಟು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಸತತ ಕಾರ್ಯಾಚರಣೆ ನಡೆಸಿದ ತಂಡಗಳಿಗೆ ಇದೀಗ 40 ದಿನಗಳ ಬಳಿಕ ಮುಂಬೈನಲ್ಲಿ ಅವರು ಪತ್ತೆಯಾಗಿರುವುದು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ಒತ್ತಡ, ಜೀವಭಯ ಇತ್ತೇ ?

ಅಧಿಕಾರಿಯನ್ನು ಗದಗಕ್ಕೆ ಕರೆತಂದ ಬೆನ್ನಲ್ಲೇ ಪೊಲೀಸರು ವಿವರವಾದ ವಿಚಾರಣೆ ಕೈಗೊಳ್ಳಲಿದ್ದಾರೆ. ಸರಕಾರದ ಅನುದಾನದ ಕೊರತೆಯಿಂದ ಕಂಗಾಲಾಗಿ ಆತ್ಮ*ತ್ಯೆಯ ನಿರ್ಧಾರಕ್ಕೆ ಬಂದಿದ್ದರೆ ? ಅಥವಾ ಬೇರೆ ಯಾರದ್ದಾದರೂ ಒತ್ತಡ, ಜೀವಭಯ ಇತ್ತೇ ? ನಾಪತ್ತೆಯಾಗಿದ್ದ 40 ದಿನಗಳಲ್ಲಿ ಅವರು ಯಾರ ಸಂಪರ್ಕದಲ್ಲಿದ್ದರು ಮತ್ತು ಮುಂಬೈ ತಲುಪಲು ಯಾರು ನೆರವಾದರು ಎಂಬಿತ್ಯಾದಿ ಅಂಶಗಳ ಕುರಿತು ತನಿಖೆ ನಡೆಯಲಿದ್ದು, ವಿಚಾರಣೆ ಪೂರ್ಣಗೊಂಡ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಬೇಕಿದೆ.

PREV
Read more Articles on
click me!

Recommended Stories

ಚಿತ್ರದುರ್ಗ: ಗೋನೂರು ಕೆರೆ ಬಳಿ ಮುದ್ದಾದ ನವಜಾತ ಶಿಶು ಪತ್ತೆ, ಚೀಲದಲ್ಲಿ ಕಟ್ಟಿ ಬಿಸಾಕಿ ಹೋದ ಪಾಪಿಗಳು!
ಪ್ರತಿಯೊಬ್ಬ ಕನ್ನಡಿಗ ಓದಲೇಬೇಕು; ನಿಮ್ಮ ಮಾತೃಭಾಷೆ ಕನ್ನಡನಾ? ಹಾಗಾದ್ರೆ ರೆಸ್ಯೂಂ ಕಸದ ಬುಟ್ಟಿಗೆ! ಯುವತಿಯ ಶಾಕಿಂಗ್ ವಿಡಿಯೋ ವೈರಲ್!