ಗದಗ: 40 ಮಂದಿಗೆ ಕೊರೋನಾ ವೈರಸ್‌ ಅಂಟಿಸಿದ ನೀರಾವರಿ ಇಲಾಖೆಯ ಅಕೌಂಟೆಂಟ್‌

By Kannadaprabha News  |  First Published Jun 29, 2020, 8:32 AM IST

ಗದಗ ಜಿಲ್ಲೆಯ ಮುಂಡರಗಿ, ಗದಗ ನಗರ, ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಮುಂದುವರಿದ ಆತಂಕ|ಐತಿಹಾಸಿಕ ಇಟಗಿ ಭೀಮಾಂಬಿಕಾ ದೇವಸ್ಥಾನವನ್ನು ಸೀಲ್‌ಡೌನ್‌| ಗದಗ ಜಿಲ್ಲೆಯಾದ್ಯಂತ ದೊಡ್ಡ ಕಂಟಕವೇ ಪ್ರಾರಂಭ|


ಶಿವಕುಮಾರ ಕುಷ್ಟಗಿ

ಗದಗ (ಜೂ.29): ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೋನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದು ಒಂದು ವಾರದಲ್ಲಿ ಸೋಂಕು ತ್ರಿಗುಣವಾಗಿದೆ. ಮುಂಡರಗಿ ನೀರಾವರಿ ಇಲಾಖೆಯಲ್ಲಿ ಅಕೌಂಟೆಂಟ್‌ ಆಗಿರುವ ವ್ಯಕ್ತಿಯೇ ಕಂಟಕಪ್ರಾಯವಾಗಿ ಅವರ ಸಂಪರ್ಕದಿಂದಲೇ 40ಕ್ಕೂ ಹೆಚ್ಚು ಜನರಿಗೆ ಸೋಂಕು ಖಚಿತವಾಗಿದೆ.

Tap to resize

Latest Videos

ಮುಂಡರಗಿ ಸಿಂಗಟಾಲೂರ ನೀರಾವರಿ ಇಲಾಖೆಯಲ್ಲಿ ಅಕೌಂಟೆಂಟ್‌ ಆಗಿರುವ ವ್ಯಕ್ತಿ, ಕಚೇರಿ ಕೆಲಸಕ್ಕೋ, ವೈಯಕ್ತಿಕ ಕೆಲಸಕ್ಕೆ ಬೆಂಗಳೂರಿಗೆ ತೆರಳಿರುತ್ತಾರೆ. ಅಲ್ಲಿಂದ ಮರಳಿ ಬಂದ ನಂತರ ಆರೋಗ್ಯದಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಕೊರೋನಾ ತಪಾಸಣೆ ನಡೆಸಿದ್ದು, ಜೂ. 22ಕ್ಕೆ ಅವರಲ್ಲಿ ಸೋಂಕು ಖಚಿತವಾಗಿದೆ. ಅಲ್ಲಿಂದ ಜಿಲ್ಲೆಯಾದ್ಯಂತ ದೊಡ್ಡ ಕಂಟಕವೇ ಪ್ರಾರಂಭವಾಗಿದೆ.

ಮುಂಡರಗಿ, ರೋಣ ತಾಲೂಕಿನಲ್ಲಿ ಆತಂಕ:

ಮುಂಡರಗಿ ನೀರಾವರಿ ಇಲಾಖೆಯಲ್ಲಿ ಅಕೌಂಟೆಂಟ್‌ ಆಗಿರುವ 38 ವರ್ಷದ ವ್ಯಕ್ತಿಗೆ (ಪಿ-9407) ಕಚೇರಿ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ ವೇಳೆಯಲ್ಲಿ ಸೋಂಕು ತಗಲಿದೆ. ಆದರೆ, ಮುಂಡರಗಿಗೆ ಬಂದ ಒಂದು ವಾರದವರೆಗೂ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದೇ ಇರುವ ಹಿನ್ನೆಲೆಯಲ್ಲಿ ಅವರು ಎಂದಿನಂತೆ ಕೆಲಸ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲ ಕಡೆಗಳಲ್ಲಿಯೂ ಸಂಚರಿಸಿದ್ದಾರೆ. ಆನಂತರ ತಮ್ಮ ಮೂಲ ಊರಾದ ರೋಣ ತಾಲೂಕಿನ ಇಟಗಿ ಗ್ರಾಮಕ್ಕೆ ಬಂದಿದ್ದಾರೆ. ಅಲ್ಲಿಯೂ ವ್ಯಾಪಕವಾಗಿ ಓಡಾಟ ಮಾಡಿದ್ದು, ಗ್ರಾಮದಲ್ಲಿ ನಡೆದ ತಿಥಿ ಕಾರ್ಯಕ್ರಮವೊಂದರಲ್ಲಿಯೂ ಪಾಲ್ಗೊಂಡಿದ್ದು ಈಗ ಎರಡೂ ತಾಲೂಕಿಗೆ ಹಾಗೂ ಜಿಲ್ಲೆಗೆ ಅಕೌಂಟೆಂಟ್‌ ಕಂಟಕವಾಗುತ್ತಿದ್ದಾರೆ.

ಲಕ್ಷ್ಮೇಶ್ವರ: ಗ್ರಾಮೀಣ ಭಾಗಕ್ಕೂ ಆವರಿಸಿದ ಮಹಾಮಾರಿ ಕೊರೋನಾ..!

40 ಜನರಿಗೆ ಸೋಂಕು ಖಚಿತವಾಗಿದೆ:

ಅಕೌಂಟೆಂಟ್‌ ಅವರ ಸಂಪರ್ಕಕ್ಕೆ ಬಂದ ಕಚೇರಿ ಸಿಬ್ಬಂದಿ, ಅವರು ವಾಸವಿದ್ದ ಕ್ವಾರ್ಟರ್ಸ್‌, ರೋಣ ತಾಲೂಕಿನ ಅವರ ಮೂಲ ಗ್ರಾಮದಲ್ಲಿ ಜನರು ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಪತ್ತೆ ಮಾಡಲಾಗಿದೆ. ಅವರಲ್ಲಿ ಈಗಾಗಲೇ 14 ಜನರಿಗೆ, ಭಾನುವಾರ ಮುಂಡರಗಿ ಪಟ್ಟಣದ 29 ಜನರಿಗೆ ಸೋಂಕು ಖಚಿತವಾಗಿದೆ. ಇದೇ ಅಕೌಂಟೆಂಟ್‌ ಅವರ ಸಂಪರ್ಕದಿಂದ, ಇನ್ನು ಆತಂಕ ವಿಷಯವೆಂದರೆ ಇವರ ಸಂಪರ್ಕಕ್ಕೆ ಬಂದಿರುವ ಇನ್ನು 100ಕ್ಕೂ ಅಧಿಕ ಜನರ ವರದಿಗಳು ಬರಬೇಕಾಗಿದೆ. ಇದು ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ.

ಮುಂಡರಗಿಗೆ ಚಹಾ ಸಂಕಟ:

ಅಕೌಂಟೆಂಟ್‌ ಅವರಿಂದ ಅದೇ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಜವಾನನಿಗೂ ಸೋಂಕು ತಗಲಿದೆ. ಆದರೆ, ಅದು ಜವಾನನಿಗೆ ಗೊತ್ತಿಲ್ಲ. ಅವರು ನಿತ್ಯವೂ ಕಚೇರಿಯಲ್ಲಿರುವ ಹಲವಾರು ಜನರಿಗೆ ಚಹಾ ತಂದು ಕೊಟ್ಟಿದ್ದಾರೆ. ಅವರಿಂದಲೇ ಕಚೇರಿಯಲ್ಲಿರುವ ಎಲ್ಲ ಸಿಬ್ಬಂದಿಗೆ, ಸಿಬ್ಬಂದಿ ಮನೆಯವರಿಗೆ ಸೋಂಕು ತಗುಲಿದೆ. ಇನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ವ್ಯಕ್ತಿ ರಾತ್ರಿ ವೇಳೆಯಲ್ಲಿ ಕಚೇರಿ ಕಾಯಲು ಲೋಕೋಪಯೋಗಿ ಇಲಾಖೆಗೂ ತೆರಳಿದ್ದು, ಅಲ್ಲಿನ ಅಧಿಕಾರಿಗಳು ಹೇಳಿದಾಗಲೂ ಚಹಾ ತಂದು ಕೊಟ್ಟಿದ್ದಾರೆ. ಆ ಕಚೇರಿ ಕೆಲ ಅಧಿಕಾರಿಗಳಿಗೆ, ಅವರ ಕುಟುಂಬಸ್ಥರಿಗೆ ಕೊರೋನಾ ತಗಲಿದೆ. ಇನ್ನು ಈ ಜವಾನ ಚಹಾ ತರಲು ತೆರಳಿದ ಚಹಾ ಅಂಗಡಿಯವರು, ಅಂದು ಅಲ್ಲಿ ಚಹಾ ಕುಡಿಯಲು ಬಂದಿದ್ದ ಇನ್ನಿತರ ಸಾರ್ವಜನಿಕರು ಹೀಗೆ, ಮುಂಡರಗಿ ತಾಲೂಕಿಗೆ ಜವಾನನ ರೂಪದಲ್ಲಿ ಚಹಾವೇ ಕಂಟಕವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

ಇಟಗಿ ಭೀಮಾಂಬಿಕಾ ದೇವಸ್ಥಾನ ಸೀಲ್‌ಡೌನ್‌

ರೋಣ ತಾಲೂಕಿನ ಇಟಗಿ ಗ್ರಾಮದಲ್ಲಿ ಅಕೌಂಟೆಂಟ್‌ ವ್ಯಕ್ತಿ ಕುಟುಂಬಸ್ಥರು, ಸಹೋದ್ಯೋಗಿಗಳು, ಗ್ರಾಮಸ್ಥರೊಂದಿಗೆ ಸಾಕಷ್ಟು ಬೆರೆತಿದ್ದು, ಗ್ರಾಮದಲ್ಲಿ ತಿಥಿ ಕಾರ್ಯಕ್ರಮವೊಂದರಲ್ಲಿಯೂ ಭಾಗಿಯಾಗಿದ್ದರು ಎನ್ನಲಾಗಿದ್ದು ಇದರಿಂದಾಗಿ ಐತಿಹಾಸಿಕ ಇಟಗಿ ಭೀಮಾಂಬಿಕಾ ದೇವಸ್ಥಾನವನ್ನು ಸೀಲ್‌ಡೌನ್‌ ಮಾಡಲಾಗಿದೆ.
 

click me!