ಕನಸಿನ ರೆಕ್ಕೆ ಕಟ್ಟಿದ ಕಾರ್ಕಳದ ಹುಡುಗಿ ಉಡುಪಿಯ ಮೊದಲ ಮಹಿಳಾ ಪೈಲಟ್! ಕರ್ನಾಟಕದಲ್ಲಿ ಮಹಿಳಾ ಪೈಲಟ್‌ಗಳೆಷ್ಟು?

Published : Aug 14, 2026, 04:57 PM IST
Shiney Asma Saldanha

ಸಾರಾಂಶ

ಕಾರ್ಕಳದ ಶೈನಿ ಅಸ್ಮಾ ಸಲ್ಡಾನಾ ಅವರು ವಾಣಿಜ್ಯ ಪೈಲಟ್ ಪರವಾನಗಿ ಪಡೆದು, ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಲ್ಯದಲ್ಲಿ ನಡೆದ ವಿಮಾನ ಅಪಘಾತದಿಂದ ಪ್ರೇರಿತರಾಗಿ, ಕಠಿಣ ಪರಿಶ್ರಮ ಮತ್ತು ತರಬೇತಿಯ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡ ಇವರ ಸಾಧನೆಯು ಕರಾವಳಿಯ ಯುವತಿಯರಿಗೆ ಸ್ಫೂರ್ತಿದಾಯಕವಾಗಿದೆ.

ಉಡುಪಿ: ಕಾರ್ಕಳ ತಾಲೂಕಿನ ಕೌದೂರು ರಂಗನಪಲ್ಕೆಯ ಯುವತಿ ಶೈನಿ ಅಸ್ಮಾ ಸಲ್ಡಾನಾ ಅವರು ತಮ್ಮ ಪೈಲಟ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ವಾಣಿಜ್ಯ ಪೈಲಟ್ ಪರವಾನಗಿ (CPL) ಪಡೆದುಕೊಳ್ಳುವ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ಮಹಿಳಾ ಪೈಲಟ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಾಲ್ಯದಲ್ಲೇ ಮೂಡಿದ ಬಲವಾದ ಕನಸು

ಐದು ವರ್ಷದ ಬಾಲಕಿಯಾಗಿದ್ದಾಗ ಮಂಗಳೂರಿನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತವು ಶೈನಿ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಆ ಸಂದರ್ಭದಲ್ಲಿ ವಿಮಾನ ಹಾಗೂ ಪೈಲಟ್ ವೃತ್ತಿಯ ಬಗ್ಗೆ ಉಂಟಾದ ಕುತೂಹಲವೇ ಮುಂದೆ ಅವರ ಜೀವನದ ಏಕೈಕ ಗುರಿಯಾಗಿ ಬದಲಾಯಿತು.

"ನಾನು ಐದು ವರ್ಷದವಳಿದ್ದಾಗ ನಡೆದ ಮಂಗಳೂರು ವಿಮಾನ ಅಪಘಾತ ನನ್ನ ಮನಸ್ಸನ್ನು ಕಲಕಿತ್ತು. ಆಗಲೇ ನಾನು ಪೈಲಟ್ ಆಗಬೇಕೆಂಬ ದೃಢಸಂಕಲ್ಪ ಮಾಡಿದೆ. ಹಲವು ವರ್ಷಗಳ ಸತತ ಪರಿಶ್ರಮ, ಛಲ ಮತ್ತು ತಾಳ್ಮೆಯ ಫಲವಾಗಿ ಇಂದು ಆ ಬಾಲ್ಯದ ಕನಸು ನನಸಾಗಿದೆ" ಎಂದು ಶೈನಿ ತಮ್ಮ ಸಾಧನೆಯ ಹಾದಿಯನ್ನು ಹಂಚಿಕೊಂಡಿದ್ದಾರೆ.

ಶಿಕ್ಷಣ ಮತ್ತು ತರಬೇತಿಯ ಹಾದಿ

ಕೌದೂರಿನ ಅಶೋಕ್ ಜಾಕೋಬ್ ಸಲ್ಡಾನಾ ಮತ್ತು ಮಾರಿಯಾ ಗ್ರೆಟ್ಟಾ ಸಲ್ಡಾನಾ ದಂಪತಿಯ ಪುತ್ರಿಯಾದ ಶೈನಿ, ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಹಾಗೂ ಪದವಿ ಪೂರ್ವ (PUC) ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಿಕಾಂ ಶಿಕ್ಷಣದ ನಂತರ ತಮ್ಮ ಕನಸನ್ನು ಬೆನ್ನತ್ತಿದ ಶೈನಿ, ಬೆಂಗಳೂರಿನಲ್ಲಿ ನಡೆದ ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ (IGRUA) ಯ ಪ್ರವೇಶ ಪರೀಕ್ಷೆಗೆ ಹಾಜರಾದರು. ದೇಶಾದ್ಯಂತ 5,000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದ ಈ ಕಠಿಣ ಪರೀಕ್ಷೆಯಲ್ಲಿ ಆಯ್ಕೆಯಾದ 125 ಮಂದಿಯಲ್ಲಿ ಶೈನಿ ಕೂಡ ಒಬ್ಬರಾಗಿದ್ದರು. ತರುವಾಯ, 2023ರ ಆಗಸ್ಟ್‌ನಿಂದ ಉತ್ತರ ಪ್ರದೇಶದ ಫುರ್ಸತ್‌ಗಂಜ್‌ನಲ್ಲಿರುವ IGRUA ಕೇಂದ್ರದಲ್ಲಿ ವೃತ್ತಿಪರ ಪೈಲಟ್ ತರಬೇತಿಯನ್ನು ಪಡೆದರು.

ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದ ಸಾಧಕಿ

ಪೈಲಟ್ ತರಬೇತಿಯು ಸುಲಭದ ಹಾದಿಯಾಗಿರಲಿಲ್ಲ. ತಾಂತ್ರಿಕ ಜ್ಞಾನ, ಮಾನಸಿಕ ಸಿದ್ಧತೆ, ಶಿಸ್ತು ಹಾಗೂ ಸುರಕ್ಷತಾ ಕ್ರಮಗಳ ತರಬೇತಿಯೊಂದಿಗೆ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ಕೌಶಲ್ಯವನ್ನು ಅವರು ಸಿದ್ಧಿಸಿಕೊಂಡಿದ್ದಾರೆ. ಸದ್ಯ ಹಾರಾಟದ ಅಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿರುವ ಅವರು, ಡಿಜಿಸಿಎ (DGCA) ಗೆ ಸಂಬಂಧಿಸಿದ ಅಂತಿಮ ಪ್ರಕ್ರಿಯೆಗಳಲ್ಲಿದ್ದಾರೆ.

ಯುವಜನತೆಗೆ ಸ್ಫೂರ್ತಿ

"ನನ್ನ ತಂದೆ-ತಾಯಿಯೇ ನನ್ನ ದೊಡ್ಡ ಸ್ಫೂರ್ತಿ. ಬಾಲ್ಯದ ಕನಸನ್ನು ಗುರಿಯಾಗಿಸಿಕೊಂಡು ಮುನ್ನಡೆಯಲು ತಂದೆಯ ಪ್ರೋತ್ಸಾಹವೇ ಪ್ರಮುಖ ಕಾರಣ. ಪ್ರತಿಯೊಬ್ಬರೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನಿರಂತರ ಶ್ರಮವಹಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ" ಎನ್ನುತ್ತಾರೆ ಶೈನಿ.

ಉಡುಪಿ ಜಿಲ್ಲೆಯ ವಾಯುಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿರುವ ಶೈನಿ ಅಸ್ಮಾ ಸಲ್ಡಾನಾ ಅವರ ಈ ಸಾಧನೆ, ಪೈಲಟ್ ಆಗುವ ಕನಸು ಕಾಣುತ್ತಿರುವ ಕರಾವಳಿಯ ನೂರಾರು ಯುವತಿಯರಿಗೆ ದಾರಿದೀಪವಾಗಿದೆ.

ಈ ಸಾಧನೆ ಮೂಲಕ, ಚಿಕ್ಕಮಗಳೂರಿನ 2018 ರಲ್ಲಿ ವಾಯುಪಡೆಯ ಅಕಾಡೆಮಿಯಿಂದ (IAF) ಪದವಿ ಪಡೆದ ನಂತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಮೊದಲ ಮಹಿಳಾ ಫೈಟರ್ ಪೈಲಟ್ ಮೇಘನಾ ಶಾನ್‌ಬೌ, 2024 ರ ಕೊನೆಯಲ್ಲಿ 18 ನೇ ವಯಸ್ಸಿನಲ್ಲಿ ವಾಣಿಜ್ಯ ಪೈಲಟ್ ಪರವಾನಗಿ (CPL) ಗಳಿಸಿದ ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್‌ಗಳಲ್ಲಿ ಒಬ್ಬರೆಂದು ಮಣ್ಣನೆ ಪಡೆದ ವಿಜಯಪುರದ ಸಮೈರಾ ಹುಲ್ಲೂರ್, 2017 ರಲ್ಲಿ ಉತ್ತರ ಕರ್ನಾಟಕ ಪ್ರದೇಶದಿಂದ ಮೊದಲ ಮಹಿಳಾ ವಾಣಿಜ್ಯ ಪೈಲಟ್ ಎಂದು ಗುರುತಿಸಲ್ಪಟ್ಟ ವಿಜಯಪುರದ ಪ್ರೀತಿ ಬಿರಾದಾರ್ ಸಾಲಿಗೆ ಉಡುಪಿಯ ಶೈನಿ ಅಸ್ಮಾ ಸೇರ್ಪಡೆಯಾಗಿದ್ದಾರೆ.

PREV
Read more Articles on
click me!

Recommended Stories

Khadi and Village Industries: ನಲುಗಿದ ಖಾದಿ ಗ್ರಾಮೋದ್ಯೋಗ, ಬೀದಿಗೆ ಬಿದ್ದ ಕಾರ್ಮಿಕರು: ₹150 ಕೋಟಿ ಪ್ರೋತ್ಸಾಹಧನ ನೀಡದೆ ಸತಾಯಿಸುತ್ತಿರುವ ಸರ್ಕಾರ!
ಶಿವಮೊಗ್ಗದಲ್ಲಿ ಹೃದಯ ವಿದ್ರಾವಕ ಘಟನೆ.. ಕಡಜ ಹುಳುಗೆ 8 ವರ್ಷದ ಬಾಲಕ ಬಲಿ..