CAA, NPR ಕಾಯ್ದೆ ಜಾರಿ: 'ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲೇಬೇಕು'

By Kannadaprabha NewsFirst Published Feb 16, 2020, 8:31 AM IST
Highlights

ಬಡವರನ್ನು 2ನೇ ದರ್ಜೆ ಪ್ರಜೆ ಆಗಿಸುವ ಹುನ್ನಾರ: ಜಿಗ್ನೇಶ್‌ ಮೇವಾನಿ|  ಪೌರತ್ವ ಕಾಯ್ದೆ ಎಲ್ಲ ಧರ್ಮದ ಬಡವರು, ಅನಕ್ಷರಸ್ಥರಿಗೆ ಸಮಸ್ಯೆ|ಈ ಹೋರಾಟವನ್ನು ಮತ್ತಷ್ಟು ಬಲಗೊಳಿಸಲು ಪ್ರಗತಿಪರ ಸಂಘಟನೆಗಳು ಮತ್ತಷ್ಟು ಸಂಘಟಿತರಾಗಬೇಕು|

ಬೆಂಗಳೂರು(ಫೆ.16): ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ದೇಶದ ಬಡವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿ ಶೋಷಿಸುವ ಹುನ್ನಾರ ಅಡಗಿದೆ ಎಂದು ಶಾಸಕ ಜಿಗ್ನೇಶ್‌ ಮೇವಾನಿ ಹೇಳಿದ್ದಾರೆ.

ನಾವು ಭಾರತೀಯರು ಸಂಘಟನೆಯಿಂದ ನಗರದ ಪ್ರೀಡಂ ಪಾರ್ಕ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಸಿಎಎ, ಎನ್‌ಪಿಆರ್‌ ಹಾಗೂ ಎನ್‌ಅರ್‌ಸಿಯಿಂದ ದುರ್ಬಲ ಸಮುದಾಯಗಳಿಗೆ ಎದುರಾಗುವ ದುಷ್ಪರಿಣಾಮ’ ಕುರಿತು ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾನೂನುಗಳಿಂದ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸಮಸ್ಯೆ ಎಂಬ ತಪ್ಪು ಭಾವನೆ ಬಿತ್ತಲಾಗುತ್ತಿದೆ. ಈ ಕಾನೂನುಗಳು ದೇಶದ ಬಡವರು, ಅನಕ್ಷರಸ್ಥರು, ಅಲೆಮಾರಿಗಳು, ಬುಡಕಟ್ಟುಗಳು, ಮಹಿಳೆಯರು ಸೇರಿದಂತೆ ಎಲ್ಲ ಧರ್ಮದ ಬಡವರಿಗೆ ಸಮಸ್ಯೆ ತಂದೊಡ್ಡಲಿದೆ. ಈ ಬಡವರನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಿ ಬಿಟ್ಟಿ ಚಾಕರಿ ಮಾಡಿಸುವ ಹುನ್ನಾರ ಅಡಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿ ದೇಶದಲ್ಲಿ ನಿರಾಶ್ರಿತ ಶಿಬಿರಗಳನ್ನು ಸ್ಥಾಪಿಸಬಹುದು. ಆದರೆ, ಸಂವಿಧಾನದ ಮೇಲೆ ಬಲವಾದ ನಂಬಿಕೆ ಇರಿಸಿರುವ ದೇಶದ ಬಹುಸಂಖ್ಯಾತ ಜನರಲ್ಲಿ ಶಾಹೀನ್‌ಬಾಗ್‌ಗಳನ್ನು ನಿರ್ಮಿಸುವ ಶಕ್ತಿಯಿದೆ. ಈ ಮೂಲಕ ಸಂವಿಧಾನ ವಿರೋಧಿ, ದೇಶದ್ರೋಹಿ ಕೃತ್ಯಗಳನ್ನು ಎದುರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಗೊಂಡಿದ್ದ ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ಕೂಲಿ ಕಾರ್ಮಿಕರ ಗುಡಿಸಲುಗಳನ್ನು ಧ್ವಂಸಗೊಳಿಸಲಾಗಿದೆ. ರಿಯಲ್‌ ಎಸ್ಟೇಟ್‌ ಮಾಫಿಯಾಗಳು, ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಈ ಬಡ ಕಾರ್ಮಿಕರಿಗೆ ಬಾಂಗ್ಲಾದೇಶಿಯರ ಪಟ್ಟಕಟ್ಟಿಒಕ್ಕಲೆಬ್ಬಿಸಿದ್ದಾರೆ ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮಾತನಾಡಿ, ಈ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ಮುಂದಿನ ದಿನಗಳಲ್ಲಿ ಜೈಲ್‌ ಭರೋ ಚಳವಳಿ ರೂಪಿಸುವ ಅಗತ್ಯವಿದೆ. ಹೀಗಾಗಿ ಈ ಹೋರಾಟ ನಿರಂತರತೆ ಪಡೆದುಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸುವಂತೆ ಮಾಡಬೇಕು. ಹೀಗಾಗಿ ಈ ಹೋರಾಟವನ್ನು ಮತ್ತಷ್ಟು ಬಲಗೊಳಿಸಲು ಪ್ರಗತಿಪರ ಸಂಘಟನೆಗಳು ಮತ್ತಷ್ಟು ಸಂಘಟಿತರಾಗಬೇಕು ಎಂದರು.

ಸಿಐಟಿಯು ರಾಜ್ಯಾಧ್ಯಕ್ಷ ಎಸ್‌.ವರಲಕ್ಷ್ಮಿ, ದಸಂಸ ಮುಖಂಡ ಲಕ್ಷ್ಮಿನಾರಾಯಣ ನಾಗವಾರ, ಗಾರ್ಮೆಂಟ್‌ ನೌಕರರ ಸಂಘಟನೆಯ ಮುಖಂಡರಾದ ಪ್ರತಿಭಾ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸದಸ್ಯರಾದ ಸರೋವರ ಬೆಂಕಿಕೆರೆ, ಕರ್ನಾಟಕ ಜನಶಕ್ತಿಯ ಗೌರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

click me!