ರಾಜ್ಯದ ಯಾವುದೇ ಮೂಲೆಗಾದರೂ ಮಹಿಳೆಯರು ಉಚಿತವಾಗಿ ಸಂಚರಿಸಬಹುದು ಎಂಬ ಘೋಷಣೆ ಸರ್ಕಾರದಿಂದ ಹೊರಬೀಳುತ್ತಿದ್ದಂತೆ ಅಡುಗೆಮನೆ, ಬಟ್ಟೆ-ಪಾತ್ರೆ ತೊಳೆಯುವುದು, ಇನ್ನಿತರ ಮನೆಗೆಲಸಗಳ ನಿರ್ವಹಣೆಯ ಮೂಲಕ ಮನೆಗಳಲ್ಲಿಯೇ ಬಂಧಿಯಂತಾಗಿದ್ದ ಮಹಿಳೆಯರೂ ಮನೆ ಬಿಟ್ಟು ಹೊರಬಂದಿದ್ದಾರೆ.
ರುದ್ರಪ್ಪ ಆಸಂಗಿ
ವಿಜಯಪುರ(ಜೂ.18): ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಿಲ್ಲೆಯ ಮಹಿಳೆಯರಲ್ಲಿ ಸಂಚಲನ ಮೂಡಿಸಿದೆ. ದುಬಾರಿ ಬಸ್ ದರ ಪಾವತಿಸಲಾಗದೇ ತಮ್ಮ ಸಂಬಂಧಿಕರು ಇರುವ ಹಲವಾರು ದೂರದ ಊರುಗಳತ್ತ ಮುಖಮಾಡದೇ ವರ್ಷಾನುಗಟ್ಟಲೇ ತಮ್ಮ ಗ್ರಾಮದಲ್ಲೇ ಬೀಡುಬಿಡುತ್ತಿದ್ದ ಮಹಿಳೆಯರಿಗೆ ಈಗ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆ ದೂರದ ಊರುಗಳಿಗೆ ಹೋಗಿಬರಲು ಅವಕಾಶ ಕಲ್ಪಿಸಿದೆ.
ರಾಜ್ಯದ ಯಾವುದೇ ಮೂಲೆಗಾದರೂ ಮಹಿಳೆಯರು ಉಚಿತವಾಗಿ ಸಂಚರಿಸಬಹುದು ಎಂಬ ಘೋಷಣೆ ಸರ್ಕಾರದಿಂದ ಹೊರಬೀಳುತ್ತಿದ್ದಂತೆ ಅಡುಗೆಮನೆ, ಬಟ್ಟೆ-ಪಾತ್ರೆ ತೊಳೆಯುವುದು, ಇನ್ನಿತರ ಮನೆಗೆಲಸಗಳ ನಿರ್ವಹಣೆಯ ಮೂಲಕ ಮನೆಗಳಲ್ಲಿಯೇ ಬಂಧಿಯಂತಾಗಿದ್ದ ಮಹಿಳೆಯರೂ ಮನೆ ಬಿಟ್ಟು ಹೊರಬಂದಿದ್ದಾರೆ. ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದು ಮಹಿಳೆಯರಲ್ಲಿ ಎಲ್ಲಿಲ್ಲದ ಸಂತಸ, ಸಂಭ್ರಮ ತಂದಿದೆ. ಮಹಿಳೆಯರು ಕೈಯಲ್ಲಿ ಕೈಚೀಲ ಹಿಡಿದು, ತಮ್ಮ ಲಗೇಜ್ ಪ್ಯಾಕ್ ಮಾಡಿಕೊಂಡು ತಮ್ಮ ಬಂಧುಗಳು, ದೇವಸ್ಥಾನ, ಪ್ರವಾಸಿತಾಣಗಳನ್ನು ನೋಡಲು ತೆರಳುತ್ತಿರುವುದು ಈಗ ಸಾಮಾನ್ಯವಾಗಿದೆ.
'ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್' ಪಡೆದ ಮೊದಲ ಮಹಿಳೆ ಇವರೇ! ಉಚಿತ ಪ್ರಯಾಣವನ್ನೂ ಮಾಡಿದ್ರು
ಜಿಲ್ಲೆಯ ಪ್ರತಿ ಬಸ್ ನಿಲ್ದಾಣಗಳಲ್ಲೂ ಮಹಿಳೆಯರು ಜಾತ್ರೆಯಂತೆ ನೆರೆದಿರುವ ದೃಶ್ಯ ಕಂಡುಬರುತ್ತಿದೆ. ಪುರುಷರಿಗಿಂತ ತಾವೇನೂ ಕಮ್ಮಿ ಇಲ್ಲ ಎನ್ನುವಂತೆ ಮಹಿಳೆ ಬಸ್ ಬರುತ್ತಿದ್ದಂತೆ ಬಸ್ಸಿನ ಬಾಗಿಲು, ಕಿಟಕಿಗಳಿಗೆ ಮುಗಿಬಿದ್ದು ಆಸನಗಳನ್ನು ಹಿಡಿಯಲು ಭಾರಿ ನೂಕಾಟ-ತಳ್ಳಾಟ ನಡೆಸುವ ದೃಶ್ಯಗಳೂ ಅಲ್ಲಲ್ಲಿ ಕಂಡುಬರುತ್ತಿವೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಪ್ರಯಾಣದಲ್ಲಿ ತೊಡಗಿರುವುದರಿಂದ ಪುರುಷ ಪ್ರಯಾಣಿಕರಿಗೆ ಬಸ್ ಯಾತ್ರೆ ಪ್ರಯಾಸದಾಯಕ ಎನಿಸುತ್ತಿದೆ. ಮಹಿಳೆಯರನ್ನು ಬದಿಗೆ ಸರಿಸಿ ಬಸ್ ಏರುವುದು ಪುರುಷರಿಗೆ ಮುಜಗುರವಾಗುವುದು ಒಂದೆಡೆಯಾದರೆ, ಬಸ್ಸಿನಲ್ಲಿ ಆಸನ ಸಿಗದೇ ಗಂಟೆಗಟ್ಟಲೇ ಕೆಲವೊಮ್ಮೆ ರಾತ್ರಿಯಿಡೀ ನಿಂತುಕೊಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಪುರುಷರಿಗೆ ಎದುರಾಗಿದೆ.
ಜಗಳ ಬಿಡಿಸೋದೆ ನಿರ್ವಾಹಕರಿಗೆ ಸವಾಲು!:
ಕೆಲ ಬಸ್‌ಗಳಲ್ಲಿ ಪುರುಷರಿಗೆ ನಿಲ್ಲಲೂ ಆಗದಂತೆ ಮಹಿಳೆಯರೇ ಕಿಕ್ಕಿರಿದು ತುಂಬಿಕೊಂಡಿರುವುದರಿಂದ ಪುರುಷರು ಸಾರಿಗೆ ಬಸ್ಸುಗಳನ್ನು ನಂಬದೇ ರೈಲು ಪ್ರಯಾಣ, ಖಾಸಗಿ ವಾಹನಗಳ ಯಾತ್ರೆಯಂಥ ಪರ್ಯಾಯ ಮಾರ್ಗಗಳನ್ನು ನೋಡಿಕೊಳ್ಳುವಂತಾಗಿದೆ. ಸಾರಿಗೆ ಬಸ್‌ಗಳಲ್ಲಿ ಶೇ.50ರಷ್ಟುಮಹಿಳೆಯರು, ಶೇ.50ರಷ್ಟುಪುರುಷ ಪ್ರಯಾಣಿಕರಿಗೆ ಸ್ಥಳಾವಕಾಶ ಮಾಡಬೇಕು ಎಂಬ ನಿಯಮವನ್ನೇನೋ ಸರ್ಕಾರ ರೂಪಿಸಿದೆ. ಆದರೆ, ಮಹಿಳೆಯರು ಇದಕ್ಕೆ ಕ್ಯಾರೇ ಎನ್ನದೇ ಇಡೀ ಬಸ್‌ಗಳನ್ನು ಆಕ್ರಮಿಸಿಕೊಂಡು ಬಿಡುತ್ತಿದ್ದಾರೆ. ಬಸ್ ನಿರ್ವಾಹಕರು ಎಷ್ಟುತಿಳಿಹೇಳಿದರೂ ಪುರುಷರಿಗೆ ಆಸನ ಬಿಟ್ಟುಕೊಡದೇ ಅವರಿಗೇನು ಗಂಡಸರು ನಿಲ್ಲಲಿ ಬಿಡಿ ಎಂದಾಡಿಕೊಳ್ಳುತ್ತಿದ್ದಾರೆ. ಕೆಲ ಬಸ್‌ಗಳಲ್ಲಿ ಸೀಟ್‌ಗಾಗಿ ಮಹಿಳೆ-ಪುರುಷರ ಜಗಳ ಬಿಡಿಸುವುದೇ ನಿರ್ವಾಹಕರಿಗೆ ಸವಾಲಾದಂತಾಗಿದೆ. ಇದರಿಂದ ಪುರುಷರು ತಮ್ಮ ಪ್ರಯಾಣವನ್ನು ರದ್ದುಪಡಿಸುವ ಅಥವಾ ಮುಂದೂಡುವ ಅನಿವಾರ್ಯತೆಗೆ ಒಳಗಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಪುರುಷ ಪ್ರಯಾಣಿಕರ ವಲಯದಲ್ಲಿ ಕೇಳಿಬರುತ್ತಿದೆ.
ಪ್ರವಾಸಿತಾಣ, ತೀರ್ಥಕ್ಷೇತ್ರಗಳತ್ತ ಮಹಿಳೆಯರ ದಂಡು:
ಜಿಲ್ಲೆಯ ಆಲಮಟ್ಟಿ, ಗೋಳಗುಮ್ಮಟ, ಮಮ್ಮಟಗುಡ್ಡ, ರೂಗಿ ಜಟ್ಟಿಂಗರಾಯ, ಬಸವನಬಾಗೇವಾಡಿಯ ಬಸವ ಸ್ಮಾರಕ ಮುಂತಾದ ಪ್ರವಾಸಿತಾಣ, ತೀರ್ಥಕ್ಷೇತ್ರಗಳಲ್ಲಿ ಮಹಿಳೆಯರ ದೊಡ್ಡ ದಂಡು ಗೋಚರಿಸುತ್ತಿರುವುದು ಸಾಮಾನ್ಯವಾಗಿದೆ. ಸರ್ಕಾರ ಬಸ್ ಪ್ರಯಾಣವನ್ನು ಉಚಿತವಾಗಿ ಕಲ್ಪಿಸಿದೆ ಎಂದು ಮಹಿಳೆಯರು ತಮ್ಮ ಗೆಳತಿಯರು, ಓರಗಿತ್ತಿಯರು, ಸ್ತ್ರೀಶಕ್ತಿ ಹಾಗೂ ಮಹಿಳಾ ಸಂಘಗಳ ಸದಸ್ಯೆಯರು, ನೆರೆಹೊರೆಯ ಮಹಿಳೆಯರು, ಮಹಿಳಾ ಸಂಬಂಧಿಕರ ಜೊತೆಗೂಡಿ ಗುಂಪು ಗುಂಪಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ, ಸಹಜವಾಗಿಯೇ ದೇವಸ್ಥಾನ, ಪ್ರವಾಸಿತಾಣಗಳಲ್ಲಿ ಮಹಿಳೆಯರ ಸಂಖ್ಯೆಯೂ ಜಾಸ್ತಿಯಾಗಿದೆ.
ಫ್ರೀ ಬಸ್ ಪ್ರಯಾಣ: ಇಡೀ ಬಸ್ ಉಚಿತ ಬುಕ್ ಮಾಡಲು ಬಂದ ಮಹಿಳೆ..!
ಬಸ್, ಸಿಬ್ಬಂದಿ ಕೊರತೆ:
ಅಸಂಖ್ಯಾತ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಬಸ್‌ಗೆ ಮುಗಿಬೀಳುತ್ತಿರುವುದರಿಂದ ಬಸ್ ನಿರ್ವಾಹಕರಿಗೆ ದೊಡ್ಡ ತಲೆನೋವಾಗಿದೆ. ಬಸ್ಸಿನಲ್ಲಿ ಅವರಿಗೆ ಹಣ ಪಾವತಿಸದೇ ಟಿಕೆಟ್ ನೀಡಬೇಕು. ಇದರಿಂದಾಗಿ ನಿರ್ವಾಹಕರು ಭಾರಿ ಪ್ರಯಾಸಪಡುವಂತಾಗಿದೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬಸ್ ಪ್ರಯಾಣಕ್ಕೆ ಮುಂದಾಗಿರುವುದರಿಂದ ಬಸ್‌ಗಳ ಕೊರತೆ ಉಂಟಾಗುತ್ತಿದೆ. ಇದರ ಜೊತೆ ಸಿಬ್ಬಂದಿ ಕೊರತೆಯೂ ಕೂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯನ್ನು ಕಾಡುತ್ತಿದೆ.
ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಸೌಲಭ್ಯ ಕಲ್ಪಿಸಿರುವುದು ಸಂಸತ ಮೂಡಿಸಿದೆ. ತಂದೆ-ತಾಯಿ, ಬಂಧುಬಳಗ ನೋಡಲು ಊರಿಗೆ ಹೋಗಲು ಅನುಕೂಲವಾಗಿದೆ. ಪ್ರವಾಸಿತಾಣ, ದೇವಸ್ಥಾನಗಳ ವೀಕ್ಷಣೆಗೆ ಅವಕಾಶಗಳ ಬಾಗಿಲು ತೆರೆದಿದೆ. ಹಣಕಾಸಿನ ತೊಂದರೆಯಿಂದ ನಾವು ಊರಿಗೇ ಹೋಗುತ್ತಿರಲಿಲ್ಲ. ಈಗ ಈ ಯೋಜನೆ ಮಹಿಳೆಯರಿಗೆ ನಮಗೆ ಅನುಕೂಲ ಒದಗಿಸಿದೆ ಅಂತ ವಿಜಯಪುರ ದರ್ಗಾ ಬಡಾವಣೆ ನಿವಾಸಿ ಗೀತಾ ಹುಂಡೇಕಾರ ತಿಳಿಸಿದ್ದಾರೆ.