ನೀರಿನ ಬರದಲ್ಲೂ ಬಾಳೆ ಬೆಳೆದು ಯಶಸ್ವಿಯಾದ್ರು ನಿವೃತ್ತ ಅಧಿಕಾರಿ : ಮಾದರಿ ಸಾಧನೆ

By Kannadaprabha NewsFirst Published Feb 20, 2021, 10:58 AM IST
Highlights

ನೀರಿನ ಬರದಲ್ಲೂ ನಿವೃತ್ತ ಪೊಲೀಸ್ ಅಧಿಕಾರಿಯೋರ್ವರು ಬಾಳೆ ಬೆಳೆದು ಸಾಧನೆ ಮಾಡಿದ್ದಾರೆ. ಇತರರಿಗೆ ಈ ಮೂಲಕ ಮಾಧರಿಯಾಗಿದ್ದಾರೆ. 

ವರದಿ : ನಾಗೇಂದ್ರ ಜೆ.ಪಾವಗಡ

 ಪಾವಗಡ (ಫೆ.20):  ಬರದ ನಾಡು ಪಾವಗಡ ತಾಲೂಕಿನಲ್ಲಿ ಪೊಲೀಸ್‌ ಇಲಾಖೆ ನಿವೃತ್ತ ಅಧಿಕಾರಿ ಕಡಿಮೆ ನೀರಿನ ಹನಿ ನೀರಾವರಿ ಪದ್ಧತಿ ಅಳವಡಿಸಿ ಎರಡೂವರೆ ಎಕರೆ ಕೃಷಿ ಜಮೀನಿನಲ್ಲಿ ನಾಟಿ ಮಾಡಿದ ಪರಿಣಾಮ ಬಾಳೆ ಸಮೃದ್ಧವಾಗಿ ಬೆಳೆದು ಮಾದರಿ ರೈತ ಎನಿಸಿಕೊಂಡಿದ್ದಾರೆ.

ಬಾಳೆ ಕೃಷಿಗೆ ಅಪಾರ ವೆಚ್ಚ ತಗಲುತ್ತಿದ್ದ ಕಾರಣ ಅಗತ್ಯ ದಾಖಲೆ ಹಿಡಿದು ಸಹಾಯಧನಕ್ಕಾಗಿ ಇಲಾಖೆ ಬಳಿ ನಿತ್ಯಅಲೆದಾಡಿ ಬೇಡಿಕೊಂಡರೂ ಆ ರೈತನ ನೋವಿಗೆ ಇಲ್ಲಿನ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಪ್ರಗತಿಪರ ರೈತರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಂಜುಂಡಪ್ಪ ವರದಿ ಪ್ರಕಾರ ಪಾವಗಡ ತಾಲೂಕು ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶ ವ್ಯಾಪ್ತಿ ಹಣೆಪಟ್ಟಿಕಟ್ಟಿಕೊಂಡಿದ್ದು, ಮಳೆ ಬಂದರೆ ಮಾತ್ರ ಬೆಳೆ ಎಂಬ ಪರಿಸ್ಥಿತಿ ಇದೆ. ಪಾವಗಡ ತಾಲೂಕು ಕಸಬಾ ವ್ಯಾಪ್ತಿಯ ದೊಮ್ಮತಮರಿ ಗ್ರಾಮದ ವಾಸಿ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಬಿ.ನಾಗರಾಜ್‌ ಅವರು ಕೃಷಿಯಲ್ಲಿ ಅಪಾರ ಆಸಕ್ತಿ ವಹಿಸಿದ್ದಾರೆ.

ರಾಜ್ಯದ ಕೃಷಿ ಇಲಾಖೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರಾಯಭಾರಿ ...

ಬರ ಲೆಕ್ಕಿಸದೇ ದೊಮ್ಮತಮರಿಯಲ್ಲಿ ತಮ್ಮ 5ಎಕರೆ ಒಣ ಭೂಮಿ ಪೈಕಿ ಎರಡುವರೆ ಎಕರೆ ಜಮೀನಿನಲ್ಲಿ ಬಾಳೆ ನಾಟಿ ಮಾಡಿದ್ದಾರೆ. ಇಲಾಖೆಯ ಮಾಹಿತಿ ಅನ್ವಯ ಕಾಲಕಾಲಕ್ಕೆ ನೀರು ಹಾಗೂ ಕೊಟ್ಟಿಗೆ ಗೊಬ್ಬರ ಇತರೆ ಔಷಧಿ ಸಿಂಪಡಿಸಿದ್ದರಿಂದ ಬಾಳೆ ತೋಟ ಸಮೃದ್ಧವಾಗಿ ಬೆಳೆದು ನಿಂತಿದೆ. ಸರ್ಕಾರಿ ಸಹಾಯಧನದ ಭರವಸೆ ಮೇರೆಗೆ ಸಾಲಸೋಲ ಮಾಡಿ, ಲಕ್ಷಾಂತರ ರು. ವ್ಯಯಿಸಿ ಜುಲೈ ಮಾಹೆಯಲ್ಲಿ ಬಾಳೆ ನಾಟಿ ಮಾಡಿದ್ದಾರೆ.

ಗಿಡಗಳ ಬುಡದಲ್ಲಿ ಪಾಚಿ ಮಾಡಿ ಹನಿ ನೀರಾವರಿ ಮೂಲಕ ನೀರು ಹಾಯಿಸಿರುವ ಕಾರಣ ಫಸಲು ಬಿಡುವ ಹಂತಕ್ಕೆ ತಲುಪಿದೆ. ಬಾಳೆ ಜಮೀನಿನ ಫಹಣಿ, ಬೆಳೆ ದೃಢೀಕರಣ ಇತರೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ, ಬಾಳೆ ವಿಮೆ ಸೌಲಭ್ಯ ಹಾಗೂ ಇಲಾಖೆಯ ಸಹಾಯ ಧನ ಕಲ್ಪಿಸುವಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಳೆದ 6 ತಿಂಗಳಿಂದಲೂ ಮೀನಾ ಮೇಷ ಹಾಕುತ್ತಿದ್ದು, ಇದರಿಂದ, ಬಾಳೆ ಬೆಳೆಗಾರ ಬಿ.ನಾಗರಾಜ್‌ ಅವರು ತೀವ್ರ ಆತಂಕ್ಕಿಡಾಗಿದ್ದಾರೆ.

ಈ ಕುರಿತು ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಗತಿಪರ ರೈತ ದೊಮ್ಮತಮರಿ ಬಿ.ನಾಗರಾಜ್‌ ಮಾತನಾಡಿ, ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿ ಕಡಿಮೆ ನೀರಿನಲ್ಲಿ ಬಾಳೆ ನಾಟಿ ಮಾಡಲಾಗಿದೆ. ಡ್ರಿಪ್‌ ಮೂಲಕ ಬಾಳೆಗೆ ನೀರು ಹರಿಸುತ್ತಿದ್ದು, ಕೊಟ್ಟಿಗೆ ಗೊಬ್ಬರ ಹಾಗೂ ಇತರೆ ಔಷಧಿಗಳ ಸಿಂಪಡಿಸಿದ ಹಿನ್ನೆಲೆಯಲ್ಲಿ ಬಾಳೆ ಬೆಳೆ ಸಮೃದ್ಧವಾಗಿ ಬೆಳೆದಿದೆ ಎಂದು ತಿಳಿಸಿದರು.

click me!