ಹುನಗುಂದ: PKPS ಮತದಾರರ ಪಟ್ಟಿಯಲ್ಲಿ ಶಾಸಕ ದೊಡ್ಡನಗೌಡರಿಂದ ಭಾರಿ ಅಕ್ರಮ

By Suvarna News  |  First Published Dec 26, 2019, 1:13 PM IST

ಪಿಕೆಪಿಎಸ್‌ ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮ| ಶಾಸಕ ದೊಡ್ಡನಗೌಡ ಪಾಟೀಲರಿಂದ ಪ್ರಭಾವ ಬೀರಿ ಅಕ್ರಮ: ಮಾಜಿ ಶಾಸಕ ಕಾಶಪ್ಪನವರ ಆರೋಪ| ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕ ದೊಡ್ಡನಗೌಡ ಪಾಟೀಲರು ದ್ವೇಷದ ರಾಜಕಾರಣ|ಹುನಗುಂದ-ಇಳಕಲ್‌ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ನೀಡಿದ ಫಲಾನುಭವಿಗಳ ಪಟ್ಟಿಯನ್ನು ಅಧಿಕಾರಿಗಳ ಮೂಲಕ ತಡೆ ಹಿಡಿಸಿದ್ದಾರೆ|


ಹುನಗುಂದ(ಡಿ.26): ಹುನಗುಂದ ಮತ್ತು ಇಳಕಲ್‌ ತಾಲೂಕಿನ 18 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕ ಮಂಡಳಿ ಆಯ್ಕೆಗೆ ಜ.5 ಹಾಗೂ 12 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಮತದಾರರ ಪಟ್ಟಿ ತಯಾರಿಸುವಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಬರುವ ಜೂನ್‌ ತಿಂಗಳಲ್ಲಿ ನಡೆಯಲಿರುವ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಂಡಳಿ ಚುನಾವಣೆಗೆ ಈ ಚುನಾವಣೆಗಳ ಫಲಿತಾಂಶ ಬಹು ಮುಖ್ಯವಾಗಿರುವುದರಿಂದ ಶಾಸಕ ದೊಡ್ಡನಗೌಡ ಪಾಟೀಲರು ಇಲಾಖೆ ಅಧಿಕಾರಿಗಳು, ಚುನಾವಣೆ ಅಧಿಕಾರಿ ಮತ್ತು ಪಿಕೆಪಿಎಸ್‌ ಕಾರ್ಯದರ್ಶಿಗಳ ಮೇಲೆ ಅಧಿಕಾರದ ಪ್ರಭಾವ ಬೀರಿ ಈ ಅಕ್ರಮವೆಸಗುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ 18 ಪಿಕೆಪಿಎಸ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲವು ಸಾಧಿಸುವ ನಿರೀಕ್ಷೆ ಇರುವುದರಿಂದ ಹತಾಶಗೊಂಡಿರುವ ಶಾಸಕ ದೊಡ್ಡನಗೌಡರು, ಈ ರೀತಿ ಕುತಂತ್ರ ರಾಜಕಾರಣ ನಡೆಸಿದ್ದಾರೆ. ಶಾಸಕರ ಪ್ರಭಾವಕ್ಕೆ ಒಳಗಾಗಿರುವ ಬಹುತೇಕ ಪಿಕೆಪಿಎಸ್‌ಗಳ ಚುನಾವಣೆ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗಳು ಚುನಾವಣೆ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾಂಗ್ರೆಸ್‌ ಕಾರ್ಯಕರ್ತರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟು, ಬಿಜೆಪಿ ಕಾರ್ಯಕರ್ತರ ಹೆಸರನ್ನು ಸೇರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಸಭೆ ಕರೆದು ಸೂಚನೆ:

ಜ.5 ರಂದು ಚುನಾವಣೆ ಜರುಗುವ ಇಳಕಲ್‌ ತಾಲೂಕಿನ ಕೋಡಿಹಾಳ ಪಿಕೆಪಿಎಸ್‌ಗೆ ಡಿ.22 ರಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಹೋದರೆ ಇದುವರೆಗೂ ಅಲ್ಲಿ ಚುನಾವಣೆ ಅಧಿಕಾರಿ ಇಲ್ಲ. ಮತದಾರರ ಪಟ್ಟಿಯೂ ಅಂತಿಮಗೊಂಡಿಲ್ಲ. ಇಂತಹ ಸ್ಥಿತಿ ಅನೇಕ ಪಿಕೆಪಿಎಸ್‌ಗಳಲ್ಲಿದೆ. ಕರಡಿ ಪಿಕೆಪಿಎಸ್‌ನಲ್ಲಿ ಸಾವಿರ ಮತದಾರರು ಅರ್ಹರಿದ್ದರೂ, ಅದನ್ನು 270ಕ್ಕೆ ಸೀಮಿತಗೊಳಿಸಲಾಗಿದೆ. ಈ ರೀತಿ ಅಕ್ರಮ ನಡೆಸಲು ಶಾಸಕ ದೊಡ್ಡನಗೌಡ ಪಾಟೀಲರು ಚುನಾವಣೆ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಸಭೆ ಕರೆದು ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.

ನಾನು ಪ್ರಸ್ತುತ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕನಾಗಿರುವೆ. ಮುಂದಿನ ಚುನಾವಣೆಯಲ್ಲಿ ನಾನು ಗೆಲ್ಲಬಾರದು ಎಂಬ ಏಕೈಕ ಉದ್ದೇಶದಿಂದ ಶಾಸಕ ದೊಡ್ಡನಗೌಡ ಪಾಟೀಲರು ಅಧಿಕಾರಿಗಳ ಮೂಲಕ ಇಂತಹ ಕುತಂತ್ರ ನಡೆಸಿದ್ದಾರೆ. ಇದಕ್ಕೆ ಅಧಿಕಾರಿಗಳು ಮತ್ತು ಚುನಾವಣೆ ಅಧಿಕಾರಿಗಳು ಸೊಪ್ಪು ಹಾಕದೇ ನ್ಯಾಯಸಮ್ಮತ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಈ ಕುರಿತು ಬೀದಿಗಿಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ದ್ವೇಷದ ರಾಜಕಾರಣ:

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕ ದೊಡ್ಡನಗೌಡ ಪಾಟೀಲರು ದ್ವೇಷದ ರಾಜಕಾರಣ ಆರಂಭಿಸಿದ್ದಾರೆ. ಹುನಗುಂದ-ಇಳಕಲ್‌ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ನೀಡಿದ ಫಲಾನುಭವಿಗಳ ಪಟ್ಟಿಯನ್ನು ಅಧಿಕಾರಿಗಳ ಮೂಲಕ ತಡೆ ಹಿಡಿಸಿದ್ದಾರೆ. ಇದರಿಂದ ನನ್ನ ಅಧಿಕಾರವಧಿಯಲ್ಲಿ ಆಯ್ಕೆಯಾದ ಬಹುತೇಕ ಫಲಾನುಭವಿಗಳು ಸರ್ಕಾರದ ಯೋಜನೆಯಿಂದ ವಂಚಿತರಾಗಿದ್ದಾರೆ. ನನ್ನಂತೆ ನಿವೇಶನ ಗುರುತಿಸಿ ಮತ್ತೆ ಹಕ್ಕುಪತ್ರ ವಿತರಿಸಲಿ. ಅದನ್ನು ಬಿಟ್ಟು ಹಿಂದೆ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ತಡೆಹಿಡಿದಿರುವುದು ಅವರ ದ್ವೇಷದ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದರು.

ಹಿಂದೆ 9 ವರ್ಷಗಳ ಕಾಲ ಶಾಸಕರಾಗಿದ್ದರೂ ಅವರು ಕ್ಷೇತ್ರಕ್ಕೆ ಯಾವುದೇ ಯೋಜನೆ ತರಲಿಲ್ಲ. ಈಗ ಒಂದೂವರೆ ವರ್ಷ ಕಳೆದರೂ ಯಾವುದೇ ಅನುದಾನ ತಂದಿಲ್ಲ. ಬದಲಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಿಯಾದ ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನೆ ನೆರವೇರಿಸುತ್ತಿರುವುದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗಂಗಾಧರ ದೊಡಮನಿ, ಎಪಿಎಂಸಿ. ನಿರ್ದೇಶಕ ಶಿವಲಿಂಗಪ್ಪ ನಾಲತವಾಡ, ಪುರಸಭೆ ಸದಸ್ಯ ಶರಣು ಬೆಲ್ಲದ, ಮುಖಂಡರಾದ ಶಂಕ್ರಪ್ಪ ನೇಗಲಿ, ಎಲ್‌.ಎಂ. ಶಾಂತಗೇರಿ, ರಮೇಶ ಕೊಡಿಹಾಳ, ಮುತ್ತಣ್ಣ ಚಿತ್ತರಗಿ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
 

click me!