Ramanagara Politics: ನನ್ನನ್ನು ಅವರ ದುಡ್ಡು ಖರ್ಚು ಮಾಡಿ MLA ಮಾಡ್ಲಿಲ್ಲ: HDK ವಿರುದ್ಧ ರಾಜು ವಾಗ್ದಾಳಿ

By Kannadaprabha News  |  First Published Feb 13, 2022, 10:11 AM IST

*   ತಂದೆ, ಮಗನ ಸೋಲಿಗೆ ನಡವಳಿಕೆಯೇ ಕಾರಣ
*   ಅತ್ತಿಗೆಯ ಭಯದಿಂದ ನನಗೆ ಟಿಕೆಟ್ ನೀಡಿದರು
*   ರಾಜಕೀಯಕ್ಕಾಗಿ ಕುಮಾರಸ್ವಾಮಿ ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತಾರೆ 


ರಾಮನಗರ(ಫೆ.13): ನನ್ನನ್ನು ಅವರ ಮನೆ ದುಡ್ಡು ಖರ್ಚು ಮಾಡಿ ಎಂಎಲ್‌ಎ(MLA) ಮಾಡಲಿಲ್ಲ. ಅವರ ಅತ್ತಿಗೆಯ ಭಯದಿಂದ ನನಗೆ ಟಿಕೆಟ್ ನೀಡಿದರಷ್ಟೆ. ನನ್ನ ಪ್ರಾಮಾಣಿಕ ಸೇವೆ ಗುರುತಿಸಿದ ಮತದಾರ ಪ್ರಭುಗಳು ಆಶೀರ್ವಾದ ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ(HD Kumaraswamy) ವಿರುದ್ಧ ಮಾಜಿ ಶಾಸಕ ಕೆ.ರಾಜು(K Raju) ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಕಾಂಗ್ರೆಸ್(Congress) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಲು ಎಂದೂ ಬಯಸಿದವರಲ್ಲ. ರಾಮನಗರ(Ramanagara) ಕ್ಷೇತ್ರ ಉಪಚುನಾವಣೆಗೆ ತಮ್ಮ ಅತ್ತಿಗೆ ಭವಾನಿ ರೇವಣ್ಣ(Bhavani Revanna) ಸ್ಪರ್ಧಿಸುತ್ತಾರೆಂಬ ಭಯದಿಂದ ನನಗೆ ಟಿಕೆಟ್ ನೀಡಿದರು. ನನಗಾಗಿ ಅವರು ನಯಾ ಪೈಸೆ ಖರ್ಚು ಮಾಡಿಲ್ಲ. ಯಾರು ಎಷ್ಟು ಖರ್ಚು ಮಾಡಿದರು ಗೊತ್ತಿದೆ ಎಂದರು.

Tap to resize

Latest Videos

Third Front: ಚುನಾವಣೆಗೂ ಮುನ್ನವೇ ಮಹಾಮೈತ್ರಿ: ಕನ್ನಡಪರ ಸಂಘಟನೆಗಳ ಜತೆ HDK ಸಂವಾದ

ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲಾಗದವರನ್ನು ಎಂಎಲ್‌ಎ ಮಾಡಿದೆನೆಂದು ಕುಮಾರಸ್ವಾಮಿ ಅನೇಕ ಬಾರಿ ಹೇಳಿದ್ದಾರೆ. ನಾನು ರಾಜಕೀಯಕ್ಕೆ(Politics) ಬಂದಾಗ ಅವರು ಎಲ್ಲಿದ್ದರೊ ಗೊತ್ತಿಲ್ಲ. ನಾನು ಯಾವತ್ತೂ ಟಿಕೆಟ್ ಕೇಳಿದವನಲ್ಲ. 20 ವರ್ಷದಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೆ. ಅದನ್ನು ಗುರುತಿಸಿ ಟಿಕೆಟ್ ನೀಡಿದರೆಂದು ಭಾವಿಸಿದ್ದೇನೆ ಎಂದು ಹೇಳಿದರು. ಆ ಪಕ್ಷದಿಂದ ದ್ದವರು ಅವರ ಮನೆಯ ಜೀತದಾಳು ಇದ್ದಂತೆ ಎಂಬ ಭಾವನೆ ಹೊಂದಿದ್ದಾರೆ. ಎಲ್ಲರೂ ನನ್ನಿಂದ ಬೆಳೆದರು, ಚುನಾವಣೆಯಲ್ಲಿ(Election) ಗೆದ್ದರು ಎಂದು ಹೇಳುತ್ತಾರೆ. 

ಚನ್ನಪಟ್ಟಣ ಕ್ಷೇತ್ರದಲ್ಲಿ ಅನಿತಾ ಸೋತರು, ಚಿಕ್ಕಬಳ್ಳಾಪುರ ಸಂಸತ್ ಚುನಾವಣೆಯಲ್ಲಿ 3ನೇ ಸ್ಥಾನಕ್ಕೆ ಏಕೆ ಹೋದರು. ಎಲ್ಲರನ್ನು ಗೆಲ್ಲಿಸುವ ತಾಕತ್ತು ಇರುವವರು ಏಕೆ ಸೋತರು. ಕಳೆದ ಸಂಸತ್ ಚುನಾವಣೆ ವೇಳೆ(Parliamentary Elections) ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಮಂಡ್ಯದಲ್ಲಿ(Mandya) 8 ಶಾಸಕರು, 2 ಸಚಿವರಿದ್ದರು ಪುತ್ರ ನಿಖಿಲ್ ಕುಮಾರಸ್ವಾಮಿನನ್ನು(Nikhil Kumaraswamy) ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತುಮಕೂರಿನಲ್ಲಿ(Tumakuru) ದೇವೇಗೌಡರು(HD Devegowda) ಸೋತರು. ತಂದೆ ಮತ್ತು ಮಗನ ಸೋಲಿಗೆ ಕುಮಾರಸ್ವಾಮಿರವರ ನಡವಳಿಕೆಯೇ ಕಾರಣ ಎಂದು ಟೀಕಿಸಿದರು.

ಸಮಾಧಿ ಮೇಲೆ ಸೌಧ ನಿರ್ಮಾಣ: 

ಸಾತನೂರಿನಲ್ಲಿ ಹೀನಾಯವಾಗಿ ಸೋತಿದ್ದ ಕುಮಾರಸ್ವಾಮಿ ಅವರನ್ನು ನಾನು ಅಧ್ಯಕ್ಷನಾಗಿದ್ದ ವೇಳೆ ಪಕ್ಷ ಸಂಘಟನೆ ಉದ್ದೇಶದಿಂದ ರಾಮನಗರ ಕ್ಷೇತ್ರಕ್ಕೆ ಕರೆತಂದೆವು. ಆಗ ತಗುಲಿದ ಶಾಪದಿಂದ ಕ್ಷೇತ್ರ ಇನ್ನೂ ಮುಕ್ತಿ ಕಂಡಿಲ್ಲ. ರಾಜಕೀಯವಾಗಿ ಬೆಳೆಯಲು ಅವಕಾಶವಿದ್ದ ರಾಜಕೀಯ ಮುಖಂಡರ ಸಮಾಧಿ ಮೇಲೆ ಕುಮಾರಸ್ವಾಮಿ ಸೌಧ ಕಟ್ಟಿಕೊಂಡಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

2000 ದಿಂದ 2014ರವರೆಗೆ ಯಾವ ಚುನಾವಣೆಗೂ ಒಂದು ರುಪಾಯಿ ಕೊಡಲಿಲ್ಲ. ನಾನು ಮತ್ತು ಅನೇಕ ಮುಖಂಡರು ಸಾಲ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದೇವು. ಆ ಯಾವ ಶ್ರಮವನ್ನು ಲೆಕ್ಕಿಸಲಿಲ್ಲ. ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಯಾವ ಮುಖಂಡರು ಒಗ್ಗೂಡಬಾರದೆಂದು ಒಬ್ಬರ ವಿರುದ್ಧ ಮತ್ತೊಬ್ಬ ಮುಖಂಡನನ್ನು ಎತ್ತಿ ಕಟ್ಟಿ ಯಶಸ್ವಿಯಾದರು. ಹೇಳಿದಂತೆ ಕೇಳುವ ವ್ಯಕ್ತಿಗಳನ್ನು ರಾಜಕೀಯವಾಗಿ ಬೆಳೆಸಿದರು. ಅವರ ಪರವಾಗಿ ದುಡಿದ ಬಹುತೇಕ ಮಂದಿ ಸಾಲಗಾರರಾಗಿದ್ದಾರೆ ಎಂದರು.

2005ರ ಜಿಪಂ ಚುನಾವಣೆಯಲ್ಲಿ ನನ್ನನ್ನು ಮತ್ತು ನಾಗಣ್ಣ, 2006ರ ನಗರಸಭೆ ಚುನಾವಣೆಯಲ್ಲಿ ಕೆ.ಶೇಷಾದ್ರಿ, ಕೂಟಗಲ್ ಹೋಬಳಿ ಯಲ್ಲಿ ಸುಮಿತ್ರಮ್ಮ, ತಾಪಂ ಚುನಾವಣೆಯಲ್ಲಿ ಕಾಂತರಾಜು, ಭದ್ರಯ್ಯ ಅವರನ್ನು ಸೋಲಿಸಲು ಕುಮಾರಸ್ವಾಮಿ ಹೇಳಿದರು. ಇಂತಹ ನೀಚ, ವಿಕೃತ ಮನಸ್ಸಿನ ರಾಜಕಾರಣಿಯನ್ನು ನನ್ನ ಜೀವನದಲ್ಲಿ ನೋಡಿಲ್ಲ ಎಂದು ಕೆ.ರಾಜುಹರಿಹಾಯ್ದರು. ಸುದ್ದಿಗೋಷ್ಠಿಯಲ್ಲಿ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಜಿಪಂ ಮಾಜಿ ಅಧ್ಯಕ್ಷ ರಮೇಶ್, ತಾಪಂ ಮಾಜಿ ಅಧ್ಯಕ್ಷ ಜಗದೀಶ್ ,ಮುಖಂಡರಾದ ಚೇತನ್ ಕುಮಾರ್ , ರಾಜು, ಶಿವಲಿಂಗೇಗೌಡ, ಜಗದೀಶ್, ಮಹೇಶ್ ಇದ್ದರು.

ಎಚ್‌ಡಿಕೆ ತಮ್ಮ ಆರ್ಥಿಕ ಪರಿಸ್ಥಿತಿ ಘೋಷಿಸಲಿ

ರಾಮನಗರ: ರಾಜಕಾರಣದಲ್ಲಿ ನಾನು ಮಾತ್ರ ಸತ್ಯಹರಿಶ್ಚಂದ್ರ ಉಳಿದವರೆಲ್ಲ ಭ್ರಷ್ಟರು ಎಂಬಂತೆ ಮಾತನಾಡುವ ಮಾಜಿ ಸಿಎಂ ಕುಮಾರಸ್ವಾಮಿ ಧೈರ್ಯವಿದ್ದರೆ ರಾಜಕೀಯಕ್ಕೆ ಬಂದಾಗ ಹಾಗೂ ಈಗಿನ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬುದನ್ನು ಘೋಷಿಸಲಿ ಎಂದು ಮಾಜಿ ಶಾಸಕ ಕೆ.ರಾಜು ಸವಾಲು ಹಾಕಿದರು. 

ಕುಮಾರಸ್ವಾಮಿ ನಡೆಗೆ ದತ್ತಾ ಅಸಮಾಧಾನ, ಜೆಡಿಎಸ್‌ಗೆ ಗುಡ್‌ ಬೈ ಹೇಳ್ತಾರಾ ದೇವೇಗೌಡ್ರ ಮಾನಸ ಪುತ್ರ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಬಡ ಕುಟುಂಬದಿಂದ ಬಂದ ಕುಮಾರಸ್ವಾಮಿ ಬೆಂಗಳೂರು ಡಾಲರ್ಸ್ ಕಾಲೋನಿಯಲ್ಲಿ ಮನೆ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕುಮಾರಸ್ವಾಮಿ ಜನರನ್ನು ಮೋಡಿ ಮಾಡಿ ಅವರ ಹಣದಲ್ಲಿ ರಾಜಕೀಯ ಮಾಡಿಕೊಂಡು ಬಂದವರು. ೨ನೇ ಬಾರಿ ಸಿಎಂ ಆದಾಗ ಹಣದ ವಸೂಲಿಗೆ ಇಳಿದರು. ಆ ಪಕ್ಷದಲ್ಲಿ ಹಣಕ್ಕೆ ನೀಡುವಷ್ಟು ಪ್ರಾಧಾನ್ಯತೆ ಪಕ್ಷದ ತತ್ವ ಸಿದ್ಧಾಂತ ಹಾಗೂ ನಾಯಕರಿಗೆ ನೀಡುವುದಿಲ್ಲ ಎಂದು ಲೇವಡಿ ಮಾಡಿದರು.

ರಾಜಕೀಯಕ್ಕಾಗಿ ಕುಮಾರಸ್ವಾಮಿ ಸುಳ್ಳಿನ ಸರಮಾಲೆಯನ್ನೆ ಕಟ್ಟುತ್ತಾರೆ. ಅವರು ಜೀವನಪರ್ಯಾಂತ ಹಾಗೆಯೇ ಬಂದವರು. ಸಿನಿಮಾ(Movies) ನಿರ್ಮಾಪಕ, ವಿತರಕರಾಗಿದ್ದ ಕಾರಣ ಸಿನಿಮಾ ಡೈಲಾಗ್ ಹೊಡೆಯುತ್ತಾರೆ. ರೈತನ ಮಕ್ಕಳಾಗಿ ನಮಗೆ ಅದೆಲ್ಲ ಬರುವುದಿಲ್ಲ. ಏಕ ವಚನದಲ್ಲಿ ಮಾತನಾಡಲು ನಮಗೂ ಬರುತ್ತದೆ ಎಂಬುದನ್ನು ಮರೆಯಬಾರದು. ವ್ಯಕ್ತಿಯ ಸ್ಥಾನಮಾನ, ವಯಸ್ಸಿಗೆ ತಕ್ಕಂತೆ ಮಾತನಾಡಬೇಕು ಅಂತ ಮಾಜಿ ಶಾಸಕ ಕೆ.ರಾಜು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.  
 

click me!