* ಮಾತಿನ ಭರದಲ್ಲಿ ಶಾಸಕ ಶ್ರೀಮಂತ ಹಾಗೆ ಹೇಳಿರಬಹುದು: ಸವದಿ
* ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ
* ಎಲ್ಲ 224 ಶಾಸಕರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ
ಅಥಣಿ(ಸೆ.13): ಕಾಗವಾಡ ಮತಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ ಅವರು ಕಾಂಗ್ರೆಸ್‌ಬಿಟ್ಟು ಬಿಜೆಪಿ ಸೇರುವ ಸಂದರ್ಭದಲ್ಲಿ ತಮಗೆ ಹಣದ ಆಮಿಷವೊಡ್ಡಿದ್ದರು ಎಂಬ ಹೇಳಿಕೆಯನ್ನು ನಾನು ಮಾಧ್ಯಮದಲ್ಲಿ ಗಮನಿಸಿದೆ. ಮಾತಿನ ಭರದಲ್ಲಿ ಆ ರೀತಿ ಮಾತನಾಡಿರಬೇಕು ಹಾಗೂ ನಾನು ಅವರು ಸಿಕ್ಕಿದಾಗ ಖುದ್ದಾಗಿ ಭೇಟಿಯಾಗಿ ಮಾತನಾಡುತ್ತೇನೆ. ಯಾರು ಹಣ ಕೊಡಲು ಹೋಗಿದ್ದರು, ಯಾರು ಆಮಿಷವೊಡ್ಡಿದ್ದರು ಎಂಬುದನ್ನು ಶಾಸಕರ ಬಳಿಯೇ ಕೇಳುತ್ತೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಅವರು ಭಾನುವಾರ ಪಟ್ಟಣದ ಸತ್ಯಪ್ರಮೋದ ನಗರದಲ್ಲಿ ವಾಲ್ಮೀಕಿ ಸಮುದಾಯದ ಸುಮಾರು 1.5 ಕೋಟಿ ವೆಚ್ಚದ ಸಮುದಾಯ ಭವನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಆಯ್ಕೆಯಾದ 224 ಶಾಸಕರಿಗೂ ಸಚಿವ ಸ್ಥಾನ ನೀಡಲು ಆಗುವುದಿಲ್ಲ, ಅದರಲ್ಲಿ 34 ಶಾಸಕರಿಗೆ ಸಚಿವ ಸ್ಥಾನ ನೀಡುತ್ತಾರೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಕೆಲವು ನಿರ್ಣಯಗಳಿಗೆ ನಾವು ಬದ್ಧವಾಗಿರಬೇಕಾಗುತ್ತದೆ. ಅಧಿಕಾರ, ಅಂತಸ್ತು ಮತ್ತು ಆಯುಷ್ಯ ಎಂದಿಗೂ ಶಾಶ್ವತವಲ್ಲ. ನಮಗೆ ಬಂದಿರುವ ಅಧಿಕಾರ ಒಂದು ವರ್ಷವೂ ಇರಬಹುದು 5 ವರ್ಷವೂ ಇರಬಹುದು. ಅಧಿಕಾರ ಇದ್ದಾಗ ಅದರ ಸದುಪಯೋಗ ನಾವು ಎಷ್ಟು ಮಾಡಿಕೊಂಡೆವು ಎಂಬುದು ಮುಖ್ಯವಾಗುತ್ತದೆ ಎಂದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರೋವಾಗ ಹಣದ ಆಫರ್: 'ಕಮಲ' ನಾಯಕನ ಸ್ಫೋಟಕ ಹೇಳಿಕೆ
ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ:
ಅಥಣಿ ತಾಲೂಕಿನ ಕೃಷ್ಣಾ ನದಿ ನೆರೆ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ ಪರಿಹಾರ ಧನ ಬಿಡುಗಡೆ ಮಾಡಲಾಗಿದೆ. ಕೆಲವು ಗ್ರಾಮಗಳಿಗೆ ತುರ್ತು ಪರಿಹಾರ ಗ್ರಾಮಗಳಿಗೆ ಬಂದಿಲ್ಲ. ಅದನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕೆಲವೊಂದು ತಾಂತ್ರಿಕ ಅಡಚಣೆಗಳಿಂದ ಸರ್ಕಾರದ ನಿಯಮಾನುಸಾರ ಪರಿಹಾರ ಬಂದಿಲ್ಲ. ಅಂತಹ ಕುಟುಂಬಗಳಿಗೆ ಮಾನವೀಯತೆ ಆಧಾರದ ಮೇಲೆ ಪರಿಹಾರ ಧನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ:
ಅಥಣಿ ತಾಲೂಕಿನ ವಾಲ್ಮೀಕಿ ಸಮುದಾಯದ ಜನರಿಗೆ ಕಲ್ಯಾಣ ಕಾರ್ಯಕ್ಕೆ, ಸಂಘಟನೆ ಮತ್ತು ಒಗ್ಗಟ್ಟಿಗಾಗಿ ಅನುಕೂಲವಾಗುವ ನಿಟ್ಟಿನಲ್ಲಿ 1.5 ಕೋಟಿ ರು. ವೆಚ್ಚದ ಸಮುದಾಯ ಭವನ ಮಂಜೂರಾಗಿದ್ದು, ಮುಂಬರುವ ವರ್ಷದೊಳಗೆ ಈ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳಲಿದೆ. ಗುತ್ತಿಗೆದಾರರಿಗೆ ಗುಣಮಟ್ಟದ ನಿರ್ಮಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ವೇಳೆ ಮುಖಂಡರಾದ ಮಹಾದೇವ ನಾಯಿಕ, ರಮೇಶ್‌ಸಿಂದಗಿ, ಲಕ್ಕಪ್ಪಾ ನಾಯಿಕ, ಬಾಬು ಹುಲ್ಯಾಳ, ಲಕ್ಷ್ಮಣ ಸನದಿ, ಈಶ್ವರಪ್ಪ ಎಂ.ಆರ್., ವೆಂಕಟೇಶ್‌ನವಲಕುಂದ್‌ಸೇರಿದಂತೆ ಹಲವರು ಉಪಸ್ಥಿತರಿದ್ದರು.