
ಬೆಂಗಳೂರು(ಅ.13): ಕೊರೋನಾದಿಂದಾಗಿ ಜನರು ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಹೊರೆ ಹೊರಿಸುವ ಬದಲು ಹಾಲಿ ತೆರಿಗೆಯನ್ನೇ ಕಡಿಮೆ ಮಾಡಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಆಸ್ತಿ ತೆರಿಗೆ ಹೆಚ್ಚಳ ಮಾಡಿದರೆ ಬಾಡಿಗೆ ದರ ಹೆಚ್ಚಾಗುತ್ತದೆ. ಇದರಿಂದ ಮನೆ ಹಾಗೂ ಅಂಗಡಿಗಳ ಬಾಡಿಗೆ ದರ ಹೆಚ್ಚಳವಾಗಿ ಸಾರ್ವನಿಕರು, ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗುತ್ತದೆ. ಆಸ್ತಿ ತೆರಿಗೆ ಕಡಿಮೆ ಮಾಡಿದರೆ ಬಾಡಿಗೆ ದರಗಳು ಕಡಿಮೆಯಾಗಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಮನೆಗಳು ಕೈಗೆಟಕುವಂತಾಗುತ್ತದೆ ಎಂದಿದ್ದಾರೆ.
ಸಿದ್ದು ಅವಧಿಯಲ್ಲಿ ಸಾಲಮನ್ನಾ ಅಕ್ರಮ: ಎಚ್ಡಿಕೆ ಆರೋಪ!
ಬಿಬಿಎಂಪಿಯಲ್ಲಿ ಪ್ರಸ್ತುತ ಇರುವ ಆಸ್ತಿ ತೆರಿಗೆಯನ್ನು ಪಾವತಿಸಲೇ ಜನರು ಒದ್ದಾಡುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾಪ ಒಳ್ಳೆಯದಲ್ಲ. ಒಂದು ವೇಳೆ ತೆರಿಗೆ ಹೆಚ್ಚಳ ಮಾಡಿದರೆ ನಗರದ ಅಭಿವೃದ್ಧಿಗೆ ಮಾರಕವಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಸ್ತಿ ತೆರಿಗೆ ಹೆಚ್ಚಳದ ಬದಲು ಇಳಿಕೆ ಮಾಡುವ ಕುರಿತು ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.