'ಪ್ರಧಾನಿ ಮೋದಿ ಪ್ರಶ್ನಿಸುವ ಧೈರ್ಯ ಬಿಜೆಪಿ ನಾಯಕರಲ್ಲಿ ಇಲ್ಲವೇ ಇಲ್ಲ'

By Suvarna NewsFirst Published Feb 25, 2021, 12:59 PM IST
Highlights

ಅನುದಾನ ನೀಡುವಲ್ಲಿಯೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ| ಕೋವಿಡ್ ಹೆಸರಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಮರೆತು ಬಿಟ್ಟಿದೆ| ಪ್ರಧಾನಿಗೆ ಕರ್ನಾಟಕ ಸರ್ಕಾರದ ಭ್ರಷ್ಟಾಚಾರ ಕಣ್ಣಿಗೆ ಕಾಣೋದಿಲ್ವಾ? ಎಂದು ಮೋದಿಗೆ ಪ್ರಶ್ನಿಸಿದ ಕುಮಾರಸ್ವಾಮಿ‌| 

ಕಲಬುರಗಿ(ಫೆ.25):  ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಭ್ರಷ್ಟಾಚಾರ ಕಾಣುತ್ತದೆ. ಭ್ರಷ್ಟ ಸರ್ಕಾರವನ್ನ ಕಿತ್ತೊಗೆಯಿರಿ ಎಂದು ಮೋದಿ ಅಲ್ಲಿ ಕರೆ ನೀಡುತ್ತಿದ್ದಾರೆ. ಪ್ರಧಾನಿಗೆ ಕರ್ನಾಟಕ ಸರ್ಕಾರದ ಭ್ರಷ್ಟಾಚಾರ ಕಣ್ಣಿಗೆ ಕಾಣೋದಿಲ್ವಾ? ಎಂದು ಪ್ರಧಾನಿ ಮೋದಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ‌ ಪ್ರಶ್ನಿಸಿದ್ದಾರೆ.

ಇಂದು(ಗುರುವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಶಾಸಕರುಗಳೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೋಟಿಸ್‌ಗೆ ಉತ್ತರವಾಗಿ 11 ಪುಟಗಳ ಸುದೀರ್ಘ ಉತ್ತರ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಯತ್ನಾಳ್‌ ಎಳೆ ಎಳೆಯಾಗಿ ವಿವರಿಸಿದ್ದಾರೆ. ಪ್ರಧಾನಿ ಮೋದಿಗೆ ಕರ್ನಾಟಕದಲ್ಲಿನ ಭ್ರಚ್ಟಾಚಾರದ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ? ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌: ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ

ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುವಲ್ಲಿಯೂ ಅನ್ಯಾಯ ಮಾಡಿದೆ. ಕೇಂದ್ರಕ್ಕೆ ಪ್ರಶ್ನಿಸುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲವೇ ಇಲ್ಲ. ಕೋವಿಡ್ ಹೆಸರಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯ ಮರೆತು ಬಿಟ್ಟಿದೆ ಎಂದು ಹೇಳಿದ್ದಾರೆ.

ಸಚಿವರು, ಸಂಸದರ ಕಾರ್ ಖರೀದಿಗೆ ಹೆಚ್ಚುವರಿ ಹಣ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಇಂತಹ ಸಂದರ್ಭದಲ್ಲಿ ಕಾರ್ ಖರೀದಿಗೆ ಹಣ ಬಿಡುಗಡೆ ಅಗತ್ಯವೇ ಇರಲಿಲ್ಲ. ಅಭಿವೃದ್ಧಿ ಕಾರ್ಯ ಕೇಳಿದ್ರೆ ಕೊರೋನಾ ಅಂತೀರಿ, ಕಾರ್ ಖರೀದಿ ಈಗ ಮಾಡದಿದ್ರೆ ಸರ್ಕಾರಕ್ಕೆ ದರಿದ್ರ ಏನೂ ಬರ್ತಿರಲಿಲ್ಲ. ಸಿಎಂ ಇನ್ನೊಬ್ಬರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸುತ್ತಲಿನವರೇ ಸಂವಿಧಾನ ಬಾಹಿರವಾಗಿ ಆಡಳಿತ ಚುಕ್ಕಾಣಿಯನ್ನ ಹಿಡಿದಿದ್ದಾರೆ. ಕೆಲವರು ಕೊಟ್ಟ ಚೀಟಿ ನೋಡಿ ಸಿಎಂ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಕೊನೆಗಾಲದಲ್ಲಾದ್ರೂ ಉತ್ತಮವಾಗಿ ಕೆಲಸ ಮಾಡಿ ಅಂತ ಅವರಿಗೆ ಸಲಹೆ ಕೊಟ್ಟಿದ್ದೇನೆ. ಅವರಿಗೂ ಆ ಆಸೆ ಇರಬಹುದೆನೋ? ಆದರೆ, ಆಡಳಿತದ ಸ್ವಾತಂತ್ರ್ಯ ಯಡಿಯೂರಪ್ಪ ಅವರ ಕೈಯಲ್ಲಿ ಇಲ್ಲ ಎಂದು ಹೇಳಿದ್ದಾರೆ. 
 

click me!