ದಾವಣಗೆರೆ: 4 ವರ್ಷ ಕಳೆದರೂ ಮುಗಿದಿಲ್ಲ ಫ್ಲೈಓವರ್‌ ಕೆಲಸ

By Kannadaprabha News  |  First Published Jul 31, 2019, 7:56 AM IST

ರೈಲ್ವೇ ಇಲಾಖೆಯಿಂದ ದಾವಣಗೆರೆಯಲ್ಲಿ ನಿರ್ಮಾಣ ಆಗುತ್ತಿರುವ ಪ್ಲೈಓವರ್‌ ಕಾಮಗಾರಿ 4 ವರ್ಷವಾದರೂ ಪೂರ್ತಿಯಾಗಿಲ್ಲ. ಕಾಮಗಾರಿ ಆಮೆನಡಿಗೆಯಲ್ಲೇ ಸಾಗುತ್ತಿದೆ. ಹಣಕಾಸಿನ ಲಭ್ಯತೆಯ ಕೊರತೆಯೂ ಇಲ್ಲಿಲ್ಲ. ಆದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಳ್ಳದಿರುವುದು ವಿಪರ್ಯಾಸ.


ದಾವಣಗೆರೆ(ಜು.31): ರೈಲ್ವೇ ಇಲಾಖೆಯಿಂದ ನಗರದಲ್ಲಿ ನಿರ್ಮಾಣ ಆಗುತ್ತಿರುವ ಪ್ಲೈಓವರ್‌ ಕಾಮಗಾರಿ 4 ವರ್ಷವಾದರೂ ಇನ್ನೂ ಆಮೆ ನಡಿಗೆಯಲ್ಲಿ ಸಾಗುತ್ತಿದೆ. ಈ ಕಾಮಗಾರಿಗೆ ಇಷ್ಟೊಂದು ದಿನಗಳು ಬೇಕಾಗಿರಲಿಲ್ಲ. ಹಣಕಾಸಿನ ಲಭ್ಯತೆಯ ಕೊರತೆಯೂ ಇಲ್ಲಿಲ್ಲ. ಆದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಳ್ಳದಿರುವುದು ವಿಪರ್ಯಾಸ.

ಹರಿಹರ-ದಾವಣಗೆರೆ ಅವಳಿ ನಗರಗಳ ಮಧ್ಯದಲ್ಲಿ ಎರಡು ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳಿವೆ. ದಿನಕ್ಕೆ 45ಕ್ಕೂ ಹೆಚ್ಚು ಬಾರಿ ರೈಲುಗಳು ಸಂಚರಿಸುವಾಗ ಎರಡೂ ಕ್ರಾಸಿಂಗ್‌ಗಳ ಗೇಟುಗಳನ್ನು ಏನಿಲ್ಲವೆಂದರೂ 20 ನಿಮಿಷ ಬಂದ್‌ ಮಾಡಲಾಗುತ್ತದೆ. ಇದರಿಂದ ಈ ನಗರಗಳ ನಡುವಿನ ವಾಹನ, ಜನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿತ್ತು.

Latest Videos

undefined

ನಾಲ್ಕು ವರ್ಷದ ಹಿಂದೆ ಆರಂಭವಾಯ್ತು ಕಾಮಗಾರಿ:

ಹಲವು ದಶಕಗಳ ಈ ಸಮಸ್ಯೆ ನಿವಾರಣೆಗೆ ಸ್ಥಳೀಯ ಜನಪ್ರತಿನಿಧಿಗಳ ಪರಿಶ್ರಮದಿಂದ ನಗರಕ್ಕೆ ಸಮೀಪದ ಅಮರಾವತಿ ಬಳಿಯ ಲೆವೆಲ್‌ ಕ್ರಾಸಿಂಗ್‌ಗೆ 8 ಕೋಟಿ ರೂ.ಗಳ ಫ್ಲೆಓವರ್‌ ಮಂಜೂರಾಗಿ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಕಾಮಗಾರಿ ಆರಂಭಿಸಲಾಯಿತು.

ಕಾಮಗಾರಿ ವರ್ಷದಲ್ಲಿ ಪೂರ್ಣಗೊಳಿಸುತ್ತಾರೆಂಬ ಆಶಯವಿತ್ತು. ಆದರೆ ಆರಂಭವಾಗಿ ನಾಲ್ಕು ವರ್ಷವಾದರೂ ಕಾಮಗಾರಿ ಇನ್ನೂ ಮುಗಿದಿಲ್ಲ. ಕಾಮಗಾರಿ ಆರಂಭಕ್ಕೆ ಮುನ್ನ 1ನೇ ರೈಲ್ವೆ ಗೇಟ್‌ ಬಂದ್‌ ಮಾಡಲಾಯಿತು. ಪರಿಣಾಮವಾಗಿ ಗೇಟ್‌ ಆಚೆಗಿನ ಅಮರಾವತಿ, ಜೈಭೀಮನಗರ, ಅಮರಾವತಿ ಕಾಲೋನಿ, ದೊಗ್ಗಳ್ಳಿ, ಆಂಜನೇಯ ಬಡಾವಣೆ, ಕೆಎಚ್‌ಬಿ ಕಾಲೋನಿಗಳ ನಿವಾಸಿಗಳು ಹರಿಹರಕ್ಕೆ ಬಂದು ಹೋಗಲು ಆರೇಳು ಕಿ.ಮೀ. ಸುತ್ತಳತೆಯ 2ನೇ ರೈಲ್ವೆ ಗೇಟು ದಾಟಿ ಬರಬೇಕಾಯಿತು.

ಮೂಗಿಗಿಂತ ಮೂಗುತಿ ಭಾರ:

ಪಾದಚಾರಿಗಳು, ಬೈಕ್‌ ಸವಾರರು ಗೇಟಿನ ಪಕ್ಕದಲ್ಲಿ ರೈಲ್ವೆ ಹಳಿ ಕೆಳಗಿನ ದೇವರಬೆಳಕೆರೆ ಪಿಕ್‌ಅಪ್‌ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಲಘು, ಭಾರಿ ವಾಹನಗಳಿದ್ದರೆ 2ನೇ ರೈಲ್ವೆ ಗೇಟು ಸುತ್ತಿ ಬರಬೇಕಿದೆ. ರಾತ್ರಿ ಕತ್ತಲಲ್ಲಿ, ಮಳೆಗಾಲದಲ್ಲಿ ಕೆಸರಿನಲ್ಲಿ ಸಂಚರಿಸಬೇಕಾದ ಜನರಿಗೆ ಈ ಕಾಮಗಾರಿ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ.

ಅಮರಾವತಿ, ಜೈಭೀಮನಗರ, ಆಂಜನೇಯ ಬಡಾವಣೆಯ ಅನೇಕರು ಹರಿಹರಕ್ಕೆ ಕೂಲಿ, ನಾಲಿಗೆಂದು ಬರುವ ಬಡವರ ಪಾಡು ಹೇಳದಂತಿದೆ. ಕೂಲಿ ಮಾಡಿ ನಡೆಯುತ್ತಾ ಬರುವ ಇವರಿಗೆ ರಾತ್ರಿ ಸಮಯದಲ್ಲಿ ಕತ್ತಲಲ್ಲಿ ಇಲ್ಲಿ ಸಂಚರಿಸಲು ಜೀವ ಕೈಯಲ್ಲಿ ಹಿಡಿದು ಬರಬೇಕಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಮನೆ ತಲುಪುರವರೆಗೆ ಕುಟುಂಬದವರಿಗೆ ಆತಂಕವಿರುತ್ತದೆ.

ಫಲ ನೀಡದ ಎಂಪಿ ಭೇಟಿ:

ಜನರ ಒತ್ತಾಯದ ಮೇರೆಗೆ ಸ್ಥಳಕ್ಕೆ ಡಿಸಿ, ರೈಲ್ವೆ ಅಧಿಕಾರಿಗಳೊಂದಿಗೆ ಮೂರ್ನಾಲ್ಕು ಬಾರಿ ಭೇಟಿ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ್‌ ಭೇಟಿಯೂ ಏನೂ ಫಲ ನೀಡದಂತಾಗಿದೆ. ಬೇರೆ ಇಲಾಖೆಯಾದರೆ ಹರಿಹರ, ದಾವಣಗೆರೆಯಲ್ಲಿ ಅಧಿಕಾರಿಗಳು ಸಿಗುತ್ತಾರೆ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿ ಅಲಭ್ಯ.

ಅರಣ್ಯರೋದನ:

ರೈಲ್ವೆ ಇಲಾಖೆಗಾದರೆ ಮೈಸೂರು, ಹುಬ್ಬಳ್ಳಿ ವಲಯ, ವಿಭಾಗೀಯ ಕಚೇರಿಗೆ ಸಂಪರ್ಕಿಸಬೇಕು. ಅದರಲ್ಲೂ ಅಲ್ಲಿನ ಇಂಜಿನಿಯರ್‌ಗಳನ್ನು ಕಷ್ಟಪಟ್ಟು ಸಂಪರ್ಕಿಸಿದರೂ ಅವರಿಗೆ ಕನ್ನಡ ಬರೊಲ್ಲ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯುತ್ತೆ ಎಂದು ಹೇಳಿ ಸಮಾಧಾನ ಪಡಿಸುತ್ತಾರೆ. ಒಟ್ಟಾರೆ ಈ ಕಾಮಗಾರಿಯಿಂದಾಗಿ ಜನರ ಪಾಡು ಅರಣ್ಯರೋದನವಾಗಿದೆ.

ಆಗಬೇಕಾದ್ದೇನು:

ಮೊದಲನೆಯದಾಗಿ ಕಾಮಗಾರಿ ನಡೆಯುವ ಸ್ಥಳದಲ್ಲಿ ರಾತ್ರಿ ಸಂಚಾರಕ್ಕೆ ಬೆಳಕಿನ ವ್ಯವಸ್ಥೆ ಮಾಡಬೇಕಿದೆ. ರೈಲ್ವೆ ಅಂಡರ್‌ಪಾಸ್‌ ಬಳಿ ಕೆಸರಾಗದಂತೆ ವ್ಯವಸ್ಥೆ ಮಾಡಬೇಕು. ಸೇತುವೆ ಇಕ್ಕೆಲಗಳ ಸರ್ವಿಸ್‌ ರಸ್ತೆಗೆ ಡಾಂಬರೀಕರಣ ಮಾಡಬೇಕಿದೆ. ಸಂಸದ, ರೈಲ್ವೆ ಅಧಿಕಾರಿಗಳ ಎಚ್ಚರಿಕೆ ಲೆಕ್ಕಿಸದೆ ದುರ್ವತನೆ ತೋರುತ್ತಿರುವ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕಿದೆ.

ಪ್ರವೀಣ್‌ ಹನಗವಾಡಿ

click me!