ಇನ್ನೂ ಆತಂಕದಲ್ಲಿ ಕೃಷ್ಣಾ ಪ್ರವಾಹ ಸಂತ್ರಸ್ತರು

Published : Sep 11, 2019, 10:10 AM IST
ಇನ್ನೂ ಆತಂಕದಲ್ಲಿ ಕೃಷ್ಣಾ ಪ್ರವಾಹ ಸಂತ್ರಸ್ತರು

ಸಾರಾಂಶ

ಕೃಷ್ಣಾ ನದಿ ಪ್ರವಾಹ ಆವರಿಸಿ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದ್ದನ್ನು ಮರೆಯುವ ಮುನ್ನವೇ ಮತ್ತೆ ನದಿ ಉಕ್ಕೇರುತ್ತಿದೆ. ಇದರಿಂದ ಮತ್ತೆ ಜನ ಆತಂಕಗೊಂಡಿದ್ದಾರೆ.

ನಿಡಗುಂದಿ [ಸೆ.11]:  ಕಳೆದ ಆಗಸ್ಟ್‌ ತಿಂಗಳಲ್ಲಿ ಕೃಷ್ಣಾ ನದಿ ಪ್ರವಾಹ ಆವರಿಸಿ ಜನರ ನೆಮ್ಮದಿಯನ್ನೇ ಕಿತ್ತುಕೊಂಡಿದ್ದನ್ನು ಮರೆಯುವ ಮುನ್ನವೇ ಮತ್ತೆ ನದಿ ಉಕ್ಕೇರುತ್ತಿರುವ ಪರಿಣಾಮ ಸಂತ್ರಸ್ತರು ಆತಂಕಕ್ಕೀಡಾಗಿದ್ದಾರೆ.

ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಅಬ್ಬರದಿಂದಾಗಿ ಕೋಯ್ನಾ ಸೇರಿದಂತೆ ನಾನಾ ಜಲಾಶಯ ಸೇರಿ ಕೃಷ್ಣಾ ನದಿ ಪಾತ್ರದ ಕೆಲ ಭಾಗದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್‌ ನೀರನ್ನು ಹರಿಸಲಾಗುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಆಲಮಟ್ಟಿಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ.

ಆಲಮಟ್ಟಿಜಲಾಶಯದ ಮುಂಭಾಗ ಹಾಗೂ ನಾರಾಯಣಪುರ ಜಲಾಶಯ ಹಿನ್ನೀರು ಪ್ರದೇಶಗಳಾದ ನಿಡಗುಂದಿ ಮತ್ತು ಮುದ್ದೇಬಿಹಾಳ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಲೇಶ್ವರ, ರತ್ನಗಿರಿ, ಕರಾಡ, ಸಾಂಗ್ಲಿ, ಸಾತಾರ ಜಿಲ್ಲೆಗಳು ಹಾಗೂ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಆಲಮಟ್ಟಿಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಸೆ.4ರಿಂದ ಆಲಮಟ್ಟಿಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ ನೀರನ್ನು ನದಿಗೆ ಹರಿಬಿಡಲಾಯಿತು. ಸೆ.5ರಂದು ಬೆಳಗ್ಗೆ 1.40 ಲಕ್ಷ ಕ್ಯೂಸೆಕ್‌ ಹೊರ ಹರಿವು ಇದ್ದಿದ್ದು ಸಂಜೆಯಾಗುತ್ತಿದ್ದಂತೆ 1.85 ಕ್ಯೂಸೆಕ್‌ಗೆ ಏರಿಸಲಾಯಿತು. ಸೆ.6ರಂದು ಬೆಳಗ್ಗೆ 1.85 ಲಕ್ಷ ಕ್ಯೂಸೆಕ್‌ ಹೊರಹರಿವು ಇದ್ದಿದ್ದನ್ನು ಸಂಜೆಯಾಗುತ್ತಿದ್ದಂತೆ 1.36 ಲಕ್ಷ ಕ್ಯೂಸೆಕ್‌ಗೆ ಇಳಿಸಲಾಯಿತು. ಸೆ.7ರಂದು 1.50 ಲಕ್ಷ ಕ್ಯೂಸೆಕ್‌ ಹೊರಹರಿವು ಇದ್ದರೆ ಸೆ.8ರಂದು ಬೆಳಗ್ಗೆ 1.82 ಲಕ್ಷ ಕ್ಯೂಸೆಕ್‌ ಹೊರಹರಿವು ಇತ್ತು.

ಮಹಾರಾಷ್ಟ್ರದಲ್ಲಿ ಮಳೆ ಮುಂದುವರೆದಿರುವ ಕಾರಣ ಆಲಮಟ್ಟಿಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.

ಗರಿಷ್ಠ 519.60ಮೀ ಎತ್ತರದ ಜಲಾಶಯದಲ್ಲಿ ಗರಿಷ್ಠ 123.081 ಟಿಎಂಸಿ ಅಡಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಭಾನುವಾರ 518.43 ಮೀ. ಎತ್ತರದಲ್ಲಿ 104.067 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, 161167ಕ್ಯೂಸೆಕ್‌ ನೀರು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ 182000 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರವಾಹದ ಮುನ್ಸೂಚನೆಗಳು ಮತ್ತೆ ಮರುಕಳುಹಿಸುತ್ತಿದೆ. ಕಳೆದ ತಿಂಗಳಷ್ಟೇ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿರುವ ಕೃಷ್ಣಾ ತೀರದ ಗ್ರಾಮಸ್ಥರಿಗೆ ಗಣೇಶೋತ್ಸವ ಮುಗಿಯುತ್ತಿದ್ದಂತೆ ಮತ್ತೆ ಪ್ರವಾಹದ ಆತಂಕ ಉಂಟಾಗಿದೆ.

ಹಾವುಗಳ ಭೀತಿ:

ನದಿ ಪಾತ್ರದ ಹೊಳೆಮಸೂತಿ ಸೇರಿದಂತೆ ಕೆಲ ಗ್ರಾಮಗಳ ಜಮೀನಿನಲ್ಲಿ ನೀರು ಆವರಿಸುತ್ತಿದೆ. ನೀರಿನಲ್ಲಿ ಹಾವುಗಳು ಹರಿದು ಬರುತ್ತಿವೆ ಇದರಿಂದ ಜಮೀನಿಗೆ ಹೋಗಲು ಭಯ ಆವರಿಸಿದೆ. ನೀರು ಇಳಿಕೆಯಾಗಿದ್ದು ಇನ್ನೂ ಕೃಷಿ ಚಟುವಟಿಕೆ ನಡೆಸಬೇಕೆಂದರೆ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ ಎನ್ನುತ್ತಾರೆ ಹೊಳೆಮಸೂತಿ ಗ್ರಾಮಸ್ಥರು.

PREV
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ