ಸೆ.27ಕ್ಕೆ ಭಾರತ್‌ ಬಂದ್‌ : ಯಾರ್ಯಾರ ಬೆಂಬಲ

By Kannadaprabha NewsFirst Published Sep 23, 2021, 7:26 AM IST
Highlights
  •  ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿ ವರ್ಷವಾಗುತ್ತಿರುವ ಕಾರಣ
  •  ಸಂಯುಕ್ತ ಕಿಸಾನ್‌ ಮೋರ್ಚಾ ಸೆ.27ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದೆ

ಮೈಸೂರು (ಸೆ.23):  ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ರಾಷ್ಟ್ರಪತಿ ಸಹಿ ಹಾಕಿ ವರ್ಷವಾಗುತ್ತಿರುವ ಕಾರಣ, ಇದನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಸೆ.27ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ಬೆಂಬಲ ಸೂಚಿಸಿ ಅದೇ ದಿನ ಗನ್‌ಹೌಸ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ಮಂಜು ಕಿರಣ್‌ ತಿಳಿಸಿದರು.

ನಗರದ ಗನ್‌ಹೌಸ್‌ನಿಂದ ಹೊರಡುವ ಮೆರವಣಿಗೆಯು ನಗರಪಾಲಿಕೆ, ಡಿ. ದೇವರಾಜ ಅರಸು ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ಸಾಗಲಿದೆ. ಮುಖ್ಯಮಂತ್ರಿ ಹಾಗೂ ಪ್ರಧಾನಿಯವರಿಗೆ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಮನವಿ ಸಲ್ಲಿಸಲಾಗುವುದು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಕರ್ನಾಟಕ ಬಂದ್‌ : ಯಾವಾಗ..?

ಕೋವಿಡ್‌ ಲಾಕ್‌ಡೌನ್‌ ನಂತರ ಕೃಷಿ ಭೂಮಿ ಮಾರಾಟ ಶೇ.67 ರಷ್ಟುಹೆಚ್ಚಿದೆ. ಸರ್ಕಾರದ ನೀತಿಗಳಿಂದ ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಕೃಷಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ನಿಗದಿ, ಅಗತ್ಯ ವಸ್ತುಗಳ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧವಿದೆ. ಇದಲ್ಲದೆ ಕುಲಾಂತರಿ ಬೀಜಗಳ ಪ್ರಾಯೋಗಿಕ ವಿತರಣೆಗೆ ಮುಂದಾಗಿರುವುದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಅವರು ಆರೋಪಿಸಿದರು.

ಮೇಕೆದಾಟು ಅಣೆಕಟ್ಟು ಜಾರಿ ಮಾಡುವದರಲ್ಲಿ ಸರ್ಕಾರ ಹೇಳಿಕೆಯನ್ನು ಕೊಡುತ್ತಿದೆ ಹೊರತು ಅನುಷ್ಠಾನದ ಕಾರ್ಯ ಯೋಜನೆ ಇಲ್ಲ. ಪ್ರಚಾರದಲ್ಲಿ ಮಾತ್ರ ಮುಳುಗಿದೆ. ಈ ಯೋಜನೆಯನ್ನು ಯಾರೇ ವಿರೋಧಿಸಿದರೂ ಅದು ಸುಪ್ರೀಂಕೋರ್ಟ್‌ ಆದೇಶವನ್ನು ವಿರೋಧಿಸಿದಂತೆ. ಈ ವಿಚಾರದಲ್ಲಿ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಎರಡು ರಾಜ್ಯ ಮಧ್ಯೆ ಕಂದಕ ಸೃಷ್ಟಿಸಲು ಯತ್ನಿಸಿದರೆ ಕಾನೂನಿನ ಪರಿಣಾಮ ಏನಾಗಲಿದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್‌ ಟಿ. ರಾಮೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌. ರಘು ಇಮ್ಮಾವು, ಜಿಲ್ಲಾ ಸಂಚಾಲಕ ಶಿರಮಳ್ಳಿ ಜಿ. ಮಂಜುನಾಥ್‌, ರವಿರಾಜು, ಕಲ್ಲಂಬಾಳು ನಾಗಣ್ಣ ಇದ್ದರು.

click me!