ಚಿಕ್ಕಬಳ್ಳಾಪುರ: ಬರದೂರಿನಲ್ಲೀಗ ಭರಪೂರ ಭತ್ತದ ನಾಟಿ..!

By Kannadaprabha NewsFirst Published Sep 2, 2022, 1:41 PM IST
Highlights

ಅಂಧ್ರ ಗಡಿಗೆ ಹಂಚಿಕೊಂಡಿರುವ ಬಾಗೇಪಲ್ಲಿ, ಚೇಳೂರು, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ಈ ಭಾರಿ ಭತ್ತದ ನಾಟಿ ಹೆಚ್ಚು ಮಾಡಿದ್ದು ನಿರೀಕ್ಷೆಗೂ ಮೀರಿ ಫಸಲು ನಿರೀಕ್ಷಿಸಲಾಗಿದೆ.

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಸೆ.02): ಹಲವು ವರ್ಷಗಳ ಹಿಂದೆ ಭತ್ತದ ನಾಟಿಗೆ ಹಿಂದೆ ಮುಂದೆ ನೋಡುತ್ತಿದ್ದ ಜಿಲ್ಲೆಯ ರೈತರೀಗ ಜಿಲ್ಲೆಯಲ್ಲಿ ಅಂತರ್ಜಲ ಗಣನೀಯ ಏರಿಕೆ, ಮಳೆಯ ಕೃಪೆಯ ಪರಿಣಾಮ ರೈತರು ಭರಪೂರ ಭತ್ತದ ನಾಟಿ ಮಾಡುತ್ತಿದ್ದಾರೆ. ಹೌದು, ಸದಾ ಬರಗಾಲ ಬೆನ್ನೆಗೇರಿಸಿಕೊಂಡಿದ್ದ ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆರೆ, ಕುಂಟೆಗಳ ಅಂಗಳದಲ್ಲಿ ಮಾತ್ರ ಭತ್ತದ ನಾಟಿ ಕಂಡು ಬರುತ್ತಿತ್ತು. ನೀರಾವರಿ ಪ್ರದೇಶದಲ್ಲಿ ಭತ್ತದ ನಾಟಿಗೆ ರೈತರರು ಅಷ್ಟೊಂದು ಧೈರ್ಯ ತೋರುತ್ತಿರಲಿಲ್ಲ.

ಆದರೆ ಇದೀಗ ಜಿಲ್ಲೆಯಲ್ಲಿ ಕಾಲ ಬದಲಾಗಿದೆ. ವರ್ಷದಲ್ಲಿ ಆರೇಳು ತಿಂಗಳು ಮಳೆ ಕಾಣುವ ಭಾಗ್ಯ ಜಿಲ್ಲೆಯ ಜನತೆಯದಾಗಿದ್ದು ಮಳೆಗಾಲದಲ್ಲಿ ಅಂತೂ ಕೆರೆ, ಕುಂಟೆ, ಜಲಾಶಯಗಳು ತುಂಬಿ ಹರಿಯುತ್ತಿವೆ. ಇದರ ನಡುವೆ ಭತ್ತದ ನಾಟಿ ಮಾಡುವ ಗದ್ದೆಗಳು ಎಲ್ಲರ ಗಮನ ಸೆಳೆಯುತ್ತಿದ್ದು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ನಿರೀಕ್ಷೆಗೂ ಮೀರಿ ಭತ್ತದ ನಾಟಿ ಮಾಡಿದ್ದು ಈಗಾಗಲೇ ಗುರಿ ಮೀರಿ ಭತ್ತದ ನಾಟಿ ಜಿಲ್ಲೆಯಲ್ಲಿ ನಡೆದಿದೆ. ಎರಡು, ಮೂರು ವರ್ಷಗಳ ಹಿಂದೆ ಜಿಲ್ಲೆಯು ಬರದಿಂದ ತತ್ತರಿಸಿ ಹೋಗಿತ್ತು. ಅತಿ ಹೆಚ್ಚು ನೀರು ಬೇಡುವ ಭತ್ತದ ಸಹಸವಾಸ ಸಾಕು ಎನ್ನುವಷ್ಟರ ಮಟ್ಟಿಗೆ ರೈತರು ಭತ್ತದ ಕೃಷಿಯಿಂದ ದೂರು ಉಳಿದಿದ್ದರು. ಅಪರೂಪಕ್ಕೆ ಜಿಲ್ಲೆಯಲ್ಲಿ ದೊಡ್ಡ ಜಮೀನ್ದಾರರು ಮಾತ್ರ ಭತ್ತ ಬೆಳೆಯುವ ಪರಿಸ್ಥಿತಿ ಜಿಲ್ಲೆಯ ಬರ ಒದಗಿಸಿತ್ತು. ಆದರೆ ವರ್ಷದಿಂದ ಈಚೇಗೆ ಜಿಲ್ಲಾದ್ಯಂತ ವಾಡಿಕೆಯಂತೆ ಮಳೆ ಆಗುತ್ತಿರುವುದು ಎಚ್‌ಎನ್‌ ವ್ಯಾಲಿ ಯೋಜನೆಯ ನೀರು ಕೆರೆಗಳ ತುಂಬಿ ಸ್ವಲ್ಪ ಅಂತರ್ಜಲ ಮಟ್ಟಹೆಚ್ಚಳ ಕಂಡಿರುವ ಪರಿಣಾಮವೋ ಏನೋ ಜಿಲ್ಲೆಯಲ್ಲಿ ಭತ್ತದ ನಾಟಿ ಜೋರಾಗಿಯೆ ಸಾಗಿದೆ. ವಿಶೇಷವಾಗಿ ಅಂಧ್ರ ಗಡಿಗೆ ಹಂಚಿಕೊಂಡಿರುವ ಬಾಗೇಪಲ್ಲಿ, ಚೇಳೂರು, ಚಿಂತಾಮಣಿ, ಗುಡಿಬಂಡೆ ಭಾಗದಲ್ಲಿ ಈ ಭಾರಿ ಭತ್ತದ ನಾಟಿ ಹೆಚ್ಚು ಮಾಡಿದ್ದು ನಿರೀಕ್ಷೆಗೂ ಮೀರಿ ಫಸಲು ನಿರೀಕ್ಷಿಸಲಾಗಿದೆ.

CHIKKABALLAPUR: ಕೋವಿಡ್‌ ವೇಳೆ ಶೇ. 20ರಷ್ಟು ರೇಷ್ಮೆ ಉತ್ಪಾದನೆ ಹೆಚ್ಚಳ

ಶಿಡ್ಲಘಟ್ಟ, ಗೌರಿಬಿದನೂರು ಕಡಿಮೆ: ಭತ್ತ ಬೆಳೆಯುವ ಪ್ರದೇಶದಲ್ಲಿ ಬಾಗೇಪಲ್ಲಿ ಇಡೀ ಜಿಲ್ಲೆಗೆ ಮುಂದಿದ್ದರೆ ಚಿಂತಾಮಣಿ ನಂತರದಲ್ಲಿದೆ. ಗೌರಿಬಿದನೂರು ಮೂರನೇ ಸ್ಥಾನದಲ್ಲಿದೆ. ಈ ತಾಲೂಕಿನಲ್ಲಿ 414 ಹೆಕ್ಟೇರ್‌ ಗುರಿಯಲ್ಲಿ ಇಲ್ಲಿಯವರೆಗೂ 249 ಹೆಕ್ಟೇರ್‌ಲ್ಲಿ ಭತ್ತದ ನಾಟಿ ಆಗಿದೆ. ಚಿಕ್ಕಬಳ್ಳಾಪುರದಲ್ಲಿ 139 ಹೆಕ್ಟೇರ್‌ ಪೈಕಿ 60 ಹೆಕ್ಟೇರ್‌ನಲ್ಲಿ ಮಾತ್ರ ಭತ್ತದ ನಾಟಿ ಆಗಿದೆ. ಶಿಡ್ಲಘಟ್ಟದಲ್ಲಿ 77 ಹೆಕ್ಟೇರ್‌ ಪೈಕಿ 45 ಹೆಕ್ಟೇರ್‌ನಲ್ಲಿ ಭತ್ತ ನಾಟಿ ಆಗಿದೆ. ಗುಡಿಬಂಡೆಯಲ್ಲಿ 184 ಹೆಕ್ಟೇರ್‌ ಪೈಕಿ ಬರೀ 17 ಹೆಕ್ಟೇರ್‌ನಲ್ಲಿ ಮಾತ್ರ ಭತ್ತ ನಾಟಿ ಆಗಿದೆ.

ಜಿಲ್ಲೆಯಲ್ಲಿ ಒಟ್ಟು 2,232 ಹೆಕ್ಟೇರ್‌ ಭತ್ತದ ನಾಟಿ ಗುರಿ ಹೊಂದಿದ್ದು ಈಗಾಗಲೇ 2.371 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿ ಆಗಿ ಶೇ.106.23 ಗುರಿ ಸಾಧಿಸಲಾಗಿದೆ. ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ನಿರೀಕ್ಷೆಗೂ ಮೀರಿ ಭತ್ತದ ನಾಟಿ ಮಾಡಿದ್ದಾರೆಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ತಿಳಿಸಿದರು.

ಭತ್ತ ನಾಟಿಯಲ್ಲಿ ಬಾಗೇಪಲ್ಲಿ, ಚಿಂತಾಮಣಿ ಟಾಪ್‌

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಭತ್ತದ ನಾಟಿ ಪ್ರಗತಿ ಶೇ.106.23 ಆಗಿದೆ. ಜಿಲ್ಲಾದ್ಯಂತ ಒಟ್ಟಾರೆ ಈ ವರ್ಷ ಮುಂಗಾರು ಹಂಗಾಮಿಗೆ ಬರೋಬ್ಬರಿ 2232 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಭತ್ತದ ನಾಟಿ ನಿರೀಕ್ಷಿಸಲಾಗಿತ್ತು. ಆದರೆ ಇಲ್ಲಿಯವರೆಗೂ ಜಿಲ್ಲೆಯಲ್ಲಿ 2,371 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಪೂರ್ಣಗೊಂಡಿದೆ. ಆ ಪೈಕಿ ಬಾಗೇಪಲ್ಲಿ ತಾಲೂಕು ಒಂದರಲ್ಲಿಯೆ 632 ಹೆ.ಕ. ಗುರಿ ಮೀರಿ 1,100 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಯಾದರೆ ಎರಡನೇ ಸ್ಥಾನದಲ್ಲಿ ಚಿಂತಾಮಣಿ ತಾಲೂಕಿನಲ್ಲಿ 786 ಹೆಕ್ಟೇರ್‌ ಗುರಿ ಮೀರಿ 900 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿ ಪೂರ್ಣಗೊಂಡಿದೆ.
 

click me!