ಯಲ್ಲಾಪುರ: ವನ್ಯಪ್ರಾಣಿಗಳ ಉಪಟಳಕ್ಕೆ ಅನ್ನದಾತ ಕಂಗಾಲು..!

By Kannadaprabha News  |  First Published Oct 8, 2023, 12:00 AM IST

ಕಾಡಿನಲ್ಲಿದ್ದ ಕಪ್ಪು ಮತ್ತು ಬಿಳಿ ಮಂಗ, ಹಂದಿ, ಅಳಿಲು, ಹಾರುಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳು ಪ್ರಸ್ತುತ ದಿನದಲ್ಲಿ ರೈತರ ಜಮೀನುಗಳಲ್ಲಿಯೇ ತಮ್ಮ ವಾಸ್ತವ್ಯ ಆರಂಭಿಸಿವೆ. ತೆಂಗು, ಅಡಕೆ, ಬತ್ತ, ಜೋಳ, ಬಾಳೆ, ಏಲಕ್ಕಿ ಸೇರಿದಂತೆ ಸರಿಸುಮಾರಾಗಿ ಎಲ್ಲ ಬೆಳೆಗಳನ್ನೇ ತಮ್ಮ ದೈನಂದಿನ ಆಹಾರವನ್ನಾಗಿಸಿಕೊಂಡಿದ್ದು ರೈತರು ಚಿಂತಾಕ್ರಾಂತರಾಗುವಂತಾಗಿದೆ.


ಯಲ್ಲಾಪುರ(ಅ.08):  ಇತ್ತೀಚಿನ ದಿನಗಳಲ್ಲಿ ವನ್ಯಪ್ರಾಣಿಗಳ ಮಿತಿಮೀರಿದ ಉಪಟಳದಿಂದಾಗಿ ರೈತರು ಕಂಗೆಡುವಂತಾಗಿದ್ದು, ಕಷ್ಟಪಟ್ಟು ಬೆಳೆದ ಬೆಳೆ ನಿರೀಕ್ಷತ ಪ್ರಮಾಣದಲ್ಲಿ ಪಡೆಯಲಾಗದೇ ಕೃಷಿ ಜೀವನವೇ ಸಾಕು ಎಂದು ಹಪಹಪಿಸುವಂತಾಗಿದೆ.

ಕಾಡಿನಲ್ಲಿದ್ದ ಕಪ್ಪು ಮತ್ತು ಬಿಳಿ ಮಂಗ, ಹಂದಿ, ಅಳಿಲು, ಹಾರುಬೆಕ್ಕು ಸೇರಿದಂತೆ ವಿವಿಧ ಪ್ರಾಣಿಗಳು ಪ್ರಸ್ತುತ ದಿನದಲ್ಲಿ ರೈತರ ಜಮೀನುಗಳಲ್ಲಿಯೇ ತಮ್ಮ ವಾಸ್ತವ್ಯ ಆರಂಭಿಸಿವೆ. ತೆಂಗು, ಅಡಕೆ, ಬತ್ತ, ಜೋಳ, ಬಾಳೆ, ಏಲಕ್ಕಿ ಸೇರಿದಂತೆ ಸರಿಸುಮಾರಾಗಿ ಎಲ್ಲ ಬೆಳೆಗಳನ್ನೇ ತಮ್ಮ ದೈನಂದಿನ ಆಹಾರವನ್ನಾಗಿಸಿಕೊಂಡಿದ್ದು ರೈತರು ಚಿಂತಾಕ್ರಾಂತರಾಗುವಂತಾಗಿದೆ.

Tap to resize

Latest Videos

undefined

ಗೋಕರ್ಣದಲ್ಲಿ ಹಿಂದೂ ಸಂಪ್ರದಾಯದಂತೆ ಪಿತೃ ಕಾರ್ಯ ನೆರವೇರಿಸಿದ ಮುಸ್ಲಿಂ ಕುಟುಂಬ!

ಸಾಮಾನ್ಯವಾಗಿ ಮಂಗಗಳು ತೆಂಗು ಮತ್ತು ಬಾಳೆ ಬೆಳೆ ತಿನ್ನುವ ಪರಿಪಾಠವಿರಲಿಲ್ಲ. ಆದರೆ ಇಂದು ಯಾವುದೇ ಪ್ರದೇಶಗಳಿಗೆ ಹೋದರೂ, ಅಲ್ಲಿನ ರೈತರು ಮಂಗಗಳ ಹಾವಳಿಯ ಕುರಿತು ತಮ್ಮ ಮಾತಿನಲ್ಲಿ ಪ್ರಸ್ತಾಪಿಸುವಂತಾಗಿದೆ. ಈ ಮಂಗಗಳು ಅಂಗಳದಲ್ಲಿ ಬೆಳೆಸಿದ ಹೂವಿನ ಗಿಡ ಮತ್ತು ತುಳಸಿ ಗಿಡಗಳನ್ನೂ ಕ್ಷಣಮಾತ್ರ ಅಲಕ್ಷಿಸಿದರೆ ಸಂಪೂರ್ಣ ಹಾಳು ಮಾಡುವ ಸ್ಥಿತಿ ಬಂದೊದಗಿದೆ. ಕೆಲವೆಡೆ ಮನೆಗೆ ಅಳವಡಿಸಿದ ಹೆಂಚು ತೆರೆದು ಮನೆಯೊಳಗೆ ನುಸುಳಿ ಅಲ್ಲಿದ್ದ ದವಸ-ಧಾನ್ಯ, ತರಕಾರಿ, ಅಕ್ಕಿ, ತಯಾರಿಸಿಟ್ಟ ಆಹಾರ ಪದಾರ್ಥ ದೋಚಿಕೊಂಡು ಓಡುತ್ತವೆ.

ಇಂತಹ ಮಿತಿಮೀರಿದ ಮಂಗ ಮತ್ತು ಹಂದಿಗಳನ್ನು ಅಭಯಾರಣ್ಯಕ್ಕೆ ಕೊಂಡೊಯ್ದು ಇಲ್ಲಿನ ರೈತರ ಸಮಸ್ಯೆಗೆ ವಿರಾಮ ನೀಡುವಂತೆ ಈ ಭಾಗದ ರೈತರು ಮತ್ತು ಸಾರ್ವಜನಿಕರು ವಿವಿಧ ವೇದಿಕೆ, ನೇರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಡಿದ ವಿನಂತಿ ವ್ಯರ್ಥವಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮತ್ತು ಸಾರ್ವಜನಿಕರ ಈ ಅಳಲನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

ಈ ನಡುವೆ, ಈ ಭಾಗಗಳಲ್ಲಿ ಕಾಣದಾಗಿದ್ದ ಹುಲಿ ಮತ್ತು ಚಿರತೆಗಳು ಪ್ರತ್ಯಕ್ಷವಾಗಿ ಜನರನ್ನು ಚಿಂತೆಗೀಡು ಮಾಡಿವೆ. ತಾಲೂಕಿನ ಉಮ್ಮಚಗಿ-ಕಾತೂರು ಜಿಲ್ಲಾ ಮುಖ್ಯರಸ್ತೆಯ ಚಿಪಗೇರಿ ಬಳಿ ಅ. ೫ರಂದು ಕಾಣಿಸಿಕೊಂಡ ಚಿರತೆ ಅನೇಕ ಬೈಕ್ ಸವಾರರಿಗೆ ಅಡ್ಡಲಾಗಿ ಜಿಗಿದು, ಭಯಗ್ರಸ್ತಗೊಳಿಸಿದೆ. ಇದೇ ಚಿರತೆ ಕಳೆದ ಒಂದೆರಡು ತಿಂಗಳ ಹಿಂದಷ್ಟೇ ಕುಂದರಗಿ ಗ್ರಾಪಂ ವ್ಯಾಪ್ತಿಯ ೨-೩ ರೈತರ ಕೊಟ್ಟಿಗೆಗೆ ನುಗ್ಗಿ ಹಸು ಕರುಗಳನ್ನು ಕೊಂದಿದ್ದ ಘಟನೆಯ ಬೆನ್ನಲ್ಲೇ, ಮತ್ತೆ ಚಿರತೆಯ ಹಾವಳಿ ಕಾಣಿಸಿಕೊಂಡು ಸಂಚಾರಿಗಳಿಗೆ ತೀವ್ರ ಆತಂಕ ಉಂಟುಮಾಡಿದೆ.

ಉತ್ತರಕನ್ನಡ: ಅನ್ನದಾತನಿಗೆ ಏಟಿನ ಮೇಲೆ ಏಟು, ಬೆಳೆಗೆ ರೋಗ ಕಾಟ, ಸಂಕಷ್ಟದಲ್ಲಿ ರೈತರು..!

ಈ ವರ್ಷ ವಾಡಿಕೆ ಪ್ರಮಾಣದಲ್ಲಿ ಮಳೆ ಸುರಿಯದೇ ರೈತರು ಬರಗಾಲ ಕಾಣುವ ಸನ್ನಿವೇಶದಲ್ಲಿಯೇ ವನ್ಯಪ್ರಾಣಿಗಳ ಕಾಟ ಬೆಚ್ಚಿಬೀಳಿಸುತ್ತಿದೆ. ಪ್ರತಿ ವರ್ಷದಂತೆ ಈ ಪ್ರದೇಶದ ಜಮೀನುಗಳಿಗೆ ತಪ್ಪದೇ ಆಗಮಿಸುವ ಕಾಡಾನೆಗಳ ತಂಡ ಇನ್ನೇನು ಕೆಲವೇ ತಿಂಗಳಲ್ಲಿ ಬಂದು ಭತ್ತ, ಕಬ್ಬು, ಬಾಳೆ, ಅಡಕೆ ಬೆಳೆ ಧ್ವಂಸಗೊಳಿಸುವುದು ನಿಶ್ಚಿತ. ಅರಣ್ಯ ಇಲಾಖೆ ದಿನೇದಿನೇ ಹೆಚ್ಚುತ್ತಿರುವ ವನ್ಯಪ್ರಾಣಿಗಳ ಉಪಟಳಕ್ಕೆ ಸೂಕ್ತ ರೀತಿಯ ಕಡಿವಾಣ ಹಾಕಬೇಕಿರುವುದು ಅತ್ಯಗತ್ಯವಾಗಿದ್ದು, ಇದು ರೈತ ಸಮುದಾಯದ ಮತ್ತು ಸಾರ್ವಜನಿಕರ ಆಗ್ರಹವೂ ಆಗಿದೆ.

ನಿರಂತರ ವನ್ಯಪ್ರಾಣಿಗಳ ಕಾಟದಿಂದಾಗಿ ರೈತರು ವಿವಿಧ ಸ್ವರೂಪದ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಗಂಭೀರ ಸಮಸ್ಯೆಗಳಿಗೆ ಅರಣ್ಯ ಇಲಾಖೆ ತ್ವರಿತ ಗತಿಯಲ್ಲಿ ಸೂಕ್ತ ಕ್ರಮಕೈಗೊಂಡು, ರೈತರ ಅಸಮಾಧಾನ ಕೊನೆಗೊಳಿಸಬೇಕಾಗಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎನ್.ಎಂ. ಹೆಗಡೆ ಪಣತಗೇರಿ ತಿಳಿಸಿದ್ದಾರೆ. 

click me!