* ಏ.24ರಿಂದಲೇ ದರ ಹೆಚ್ಚಿಸಿರುವ ರಸಗೊಬ್ಬರ ಕಂಪನಿಗಳು
* ಹಟ್ಟಿಗೊಬ್ಬರ, ನೈಸರ್ಗಿಕ ಗೊಬ್ಬರ ಕೂಡ ತುಟ್ಟಿ
* ಕೃತಕ ಅಭಾವ ಸೃಷ್ಟಿ ಸಾಧ್ಯತೆ
ಗೋಪಾಲ್ ಯಡಗೆರೆ
ಶಿವಮೊಗ್ಗ(ಜೂ.05): ಮುಂಗಾರು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರೈತರು ಬಿತ್ತನೆ ಬೀಜ ಮತ್ತು ಗೊಬ್ಬರದ ಕಡೆ ಮುಖ ಮಾಡಿದ್ದಾರೆ. ಆದರೆ ರಸಗೊಬ್ಬರದ ಬೆಲೆ ಕೇಳುತ್ತಿದ್ದಂತೆ ರೈತರ ಎದೆ ಧಸಕ್ ಎನ್ನುತ್ತಿದೆ. ಅಕ್ಷರಶಃ ಕಂಗಾಲಾಗಿದ್ದಾರೆ.
ಕಳೆದ ನವೆಂಬರ್ ಆರಂಭದಲ್ಲಷ್ಟೆ ಏರಿಕೆಯಾಗಿದ್ದ ರಸಗೊಬ್ಬರ ಬೆಲೆ ಈಗ ಇನ್ನಷ್ಟುಏರಿಕೆ ಕಾಣಿಸಿದ್ದು, ರೈತರ ಜೇಬಿಗೆ ಭಾರೀ ಭಾರ ಎನಿಸಿದೆ. ಏಪ್ರಿಲ್ 24 ರಿಂದ 50 ಕೆ.ಜಿ. ಯ 1 ಚೀಲ ರಸಗೊಬ್ಬರಕ್ಕೆ 150 ರಿಂದ 400 ರು.ವರೆಗೆ ಬೆಲೆ ಹೆಚ್ಚಾಗಿದ್ದು, ಈ ಬೆಲೆಯನ್ನು ಕಂಡು ರೈತರು ಮಾತ್ರವಲ್ಲದೆ ವ್ಯಾಪಾರಸ್ಥರೂ ತಬ್ಬಿಬ್ಬಾಗಿದ್ದಾರೆ.
ಹುಚ್ಚಾ ಅಯೋಗ್ಯ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ, ಏಕವಚನದಲ್ಲಿ ಈಶ್ವರಪ್ಪ ವಾಗ್ದಾಳಿ
ರಸಗೊಬ್ಬರ ಕಂಪನಿಗಳು ಏಪ್ರಿಲ್ 24ರಿಂದಲೇ ದರ ಹೆಚ್ಚಿಸಿದ್ದು, ಇದರ ಪರಿಣಾಮ ಮಾರುಕಟ್ಟೆಯಲ್ಲಿ ಇನ್ನಷ್ಟೆಕಾಣಬೇಕಿದೆ. ಕಳೆದ ಎರಡು ತಿಂಗಳಲ್ಲಿ ರಸಗೊಬ್ಬರದ ಅಗತ್ಯವಿರಲಿಲ್ಲ. ಆದರೆ ಈಗ ಕೃಷಿ ಚಟುವಟಿಕೆಗಳು ಆರಂಭವಾಗಬೇಕು ಎನ್ನುವ ಹೊತ್ತಿಗೆ ಬೆಲೆಯೇರಿಕೆ ಬಿಸಿ ಮುಟ್ಟಲಿದೆ.
ಯಾವುದಕ್ಕೆ ಎಷ್ಟು?:
ಪ್ರತಿ 50 ಕೆ.ಜಿ. ಚೀಲಕ್ಕೆ 1200 ರು. ಇದ್ದ ಡಿಎಪಿ 1350 ರು. ಆಗಿದೆ. ಎನ್‌ಪಿಕೆ 10.26.26 ರಸಗೊಬ್ಬರ 1200 ರು. ಇದ್ದಿದ್ದು ಪರಿಷ್ಕೃತ ಬೆಲೆ 1470 ರು. ಆಗಿದೆ. ಎನ್‌ಪಿಕೆ ಕಾಂಪ್ಲೆಕ್ಸ್ 16:20:0:13 ಇದಕ್ಕೆ 1000 ರು. ಇದ್ದದ್ದು, 1470 ರು.ಗೆ ಹೆಚ್ಚಿದೆ. ಎನ್‌ಪಿಕೆ ಕಾಂಪ್ಲೆಕ್ಸ್ 20:20:0:13 ರಸಗೊಬ್ಬರ ದರ 1200 ರು. ಇದ್ದಿದ್ದು 1470 ರು.ಗೆ ಏರಿದೆ. ಎನ್‌ಪಿಕೆ ಕಾಂಪ್ಲೆಕ್ಸ್ 10:26:26 ರಸಗೊಬ್ಬರ 1175ರಿಂದ 1470 ರು.ಗೆ ಹೆಚ್ಚಳವಾಗಿದೆ.
ರೈತರಿಗೆ ದೊಡ್ಡ ಶಾಕ್!:
ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಉದಾಹರಣೆ ಇದುವರೆಗೂ ಇಲ್ಲವೇ ಇಲ್ಲ. ಅಬ್ಬಬ್ಬಾ ಎಂದರೆ ಚೀಲಕ್ಕೆ 50ರಿಂದ 100 ರು.ಗೆ ಹೆಚ್ಚಳ ಮಾಡುತ್ತಿದ್ದರು. ಇದೇ ಮೊದಲ ಬಾರಿ ಶೇ.10ರಿಂದ 20ರಷ್ಟು ಏರಿಕೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲ, ಇನ್ನೂ ಹೆಚ್ಚಳವಾಗಲಿದೆ ಎಂಬ ಸುದ್ದಿಯಿದೆ. ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾಗುವ ವೇಳೆ ಅಂದರೆ ಜೂನ್‌ನಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಇಷ್ಟು ದೊಡ್ಡ ಮೊತ್ತ ಏಕಾಏಕಿ ಏರಿಕೆ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಏಪ್ರಿಲ್‌ನಲ್ಲಿ ಏರಿಸಲಾಗಿದೆ. ಸಹಜವಾಗಿಯೇ ಆಗ ರೈತರು ಗೊಬ್ಬರ ಖರೀದಿ ಮಾಡುವ ಸಮಯವಲ್ಲವಾದ್ದರಿಂದ ರೈತರಿಗೆ ನೇರವಾಗಿ ಬಿಸಿ ಮುಟ್ಟುವುದಿಲ್ಲ. ಅವರ ಗಮನಕ್ಕೂ ಬರುವುದಿಲ್ಲವಾದ್ದರಿಂದ ರೈತರ ಆಕ್ರೋಶ ಎದುರಾಗುವುದಿಲ್ಲ ಎಂಬ ತಂತ್ರ ಇದರ ಹಿಂದೆ ಇರಬಹುದು.
ಅಲ್ಲದೇ, ಜೂನ್ ವೇಳೆಗೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೆಸರು ಹೇಳಲಿಚ್ಚಸದ ಅಧಿಕಾರಿಯೊಬ್ಬರು ತಿಳಿಸಿದ್ದು, ರೈತರ ಪರಿಸ್ಥಿತಿ ಅಯೋಮಯ! ಈಗಾಗಲೇ ತಾವು ಬೆಳೆದ ಬೆಳೆಗೆ ವೈಜ್ಞಾನಿಕ ಬೆಳೆ ಸಿಗುತ್ತಿಲ್ಲ, ಕೂಲಿ ದರದಲ್ಲಿ ಹೆಚ್ಚಳವಾಗಿದೆ ಎಂಬ ಸಂಕಷ್ಟದಲ್ಲಿ ಪ್ರತಿ ವರ್ಷ ನಷ್ಟದಲ್ಲಿ ಸಿಲುಕುವ ರೈತರಿಗೆ ಗೊಬ್ಬರದ ಬೆಲೆ ಏರಿಕೆ ದೊಡ್ಡ ಮಟ್ಟದ ಹೊಡೆತ ಕೊಡುವುದು ಖಚಿತ. ಗೊಬ್ಬರ ಬಳಸದಿದ್ದರೆ ಫಸಲು ಇಲ್ಲ ಎನ್ನುವ ಸ್ಥಿತಿಗೆ ತಲುಪಿಯಾಗಿದೆ. ಇನ್ನು ಹಟ್ಟಿಗೊಬ್ಬರ, ನೈಸರ್ಗಿಕ ಗೊಬ್ಬರ ಕೂಡ ತುಟ್ಟಿಯಾಗಿಯೇ ಇದೆ.
ಶಿವಮೊಗ್ಗ: ಕಾರಾಗೃಹದಲ್ಲಿ ಕಣ್ಣೀರ ಕೋಡಿಯಾದ ಕೈದಿಗಳ ರಕ್ತಸಂಬಂಧ..!
ಕೃತಕ ಅಭಾವ ಸೃಷ್ಟಿ ಸಾಧ್ಯತೆ:
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರಿಗೆ 1.5 ಲಕ್ಷ ಟನ್ ರಸಗೊಬ್ಬರದ ಬೇಡಿಕೆ ಇದೆ. ಈಗಾಗಲೇ 14,807 ಮೆಟ್ರಿಕ್ ಟನ್‌ನಷ್ಟುಗೊಬ್ಬರ ವಿತರಣೆಯಾಗಿದೆ. 28,919 ಮೆಟ್ರಿಕ್ ಟನ್ ದಾಸ್ತಾನು ಇದೆ. ಅಧಿಕಾರಿಗಳು ಸದ್ಯ ಯಾವುದೇ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ ಎಂದು ಹೇಳುತ್ತಿದ್ದಾರೆ. ಹಾಗೊಂದು ವೇಳೆ ದಾಸ್ತಾನು ಪ್ರಮಾಣ ಕಡಿಮೆಯಾಗಿ ಬೇಡಿಕೆ ಪ್ರಮಾಣ ಹೆಚ್ಚಾದರೆ ಆಗ ಕೃತಕ ಅಭಾವ ಸೃಷ್ಟಿಯಾಗಿ ಪ್ರಸಕ್ತ ಮುಂಗಾರಿಗೆ ರಸಗೊಬ್ಬರ ಅಭಾವ ಸೃಷ್ಟಿಯಾಗಬಹುದು. ಆದ್ದರಿಂದ ಸರ್ಕಾರ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ರಸಗೊಬ್ಬರ - ಹಳೆ ದರ - ಹೊಸ ದರ:
ಡಿಎಪಿ: 1200 - 1350
ಎನ್‌ಪಿಕೆ 10.26.26 : 1175 - 1470
ಎನ್‌ಪಿಕೆ ಕಾಂಪ್ಲೆಕ್ಸ್ (16.20.0.13): 1175 - 1475
ಎನ್‌ಪಿಕೆ ಕಾಂಪ್ಲೆಕ್ಸ್ (20.20.0.13): 1000 - 1470
ಎಂಒಪಿ: 1015-1700
ಅಧಿಕಾರಿಗಳು ಗೊಬ್ಬರ ಪೂರೈಕೆಯ ಕಡೆಗೆ ವಿಶೇಷ ಗಮನ ಹರಿಸಬೇಕು. ಸರಿಯಾದ ರೀತಿಯಲ್ಲಿ ದಾಸ್ತಾನು ಇರಿಸಬೇಕು. ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಮಾಡಿದರೆ ಖಂಡಿತವಾಗಿಯೂ ಕೃತಕ ಅಭಾವ ಸೃಷ್ಟಿಯಾಗುತ್ತದೆ. ಹೀಗಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಅಂತ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದ್ದಾರೆ.