ಅನ್ನದಾತರಿಗೊಂದು ಸಂತಸದ ಸುದ್ದಿ ನೀಡಿದ ಸಿಎಂ ಯಡಿಯೂರಪ್ಪ

By Kannadaprabha NewsFirst Published Feb 10, 2020, 7:44 AM IST
Highlights

ಮಾರ್ಚ್‌ ಅಂತ್ಯದಲ್ಲಿ ಸಾಲ ಮರುಪಾವತಿಸಿದರೆ ರಿಯಾಯಿತಿ|ಮುಂದಿನ ರಾಜ್ಯ ಬಜೆಟ್‌ ಸಂಪೂರ್ಣ ರೈತ ಸ್ನೇಹಿಯಾಗಲಿದೆ|ದೆಹಲಿಗೆ ತೆರಳಿ ಮಹದಾಯಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವುದು|

ಹುಬ್ಬಳ್ಳಿ/ಹಾಸನ(ಫೆ.10): ಮುಂದಿನ ರಾಜ್ಯ ಬಜೆಟ್‌ ಸಂಪೂರ್ಣ ರೈತ ಸ್ನೇಹಿಯಾಗಲಿದೆ ತಿಳಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಜೆಟ್‌ನಲ್ಲಿ ಪಿಎಲ್‌ಡಿ, ಡಿಸಿಸಿ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ ಅಂತ್ಯದ ಒಳಗಾಗಿ ಸಾಲ ಮರುಪಾವತಿಸುವ ರೈತರಿಗೆ ರಿಯಾಯಿತಿ ಸಹ ನೀಡಲು ಯೋಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಮತ್ತು ಹಳೇಬೀಡುಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾ.5ರಂದು ಮಂಡನೆ ಆಗಲಿರುವ ರಾಜ್ಯ ಬಜೆಟ್‌ಗೆ ಸಿದ್ಧತೆಗಳು ಆರಂಭವಾಗಿದ್ದು, ರೈತಸ್ನೇಹಿ ಬಜೆಟ್‌ ಇದಾಗಿರಲಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನೆರೆ ಹಾಗೂ ಬರದ ಕಾರಣದಿಂದ ಹಲವು ವರ್ಷದಿಂದ ರೈತರು ಸಾಲದ ಒತ್ತಡದಲ್ಲಿ ಸಿಲುಕಿದ್ದಾರೆ. ಹೀಗಾಗಿ ರಾಜ್ಯದ ಅನ್ನದಾತರ ಹಿತಕಾಯಲು ಕೃಷಿ ಉಪಕರಣ, ಟ್ರ್ಯಾಕ್ಟರ್‌, ಟಿಲ್ಲರ್‌ ಖರೀದಿಗೆ ಮಾಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ 500 ಕೋಟಿವರೆಗೆ ಹೊರೆ ಬೀಳಲಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ತಿಳಿಸಿದರು.

ಇದೇ ವೇಳೆ ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು, ರಾಜ್ಯದ ಅಡ್ವೊಕೇಟ್‌ ಜನರಲ್‌ ಅವರಿಗೆ ಮೇಲ್ಮನವಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ದೆಹಲಿಗೆ ತೆರಳಿ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಮಾಡಲಾಗುವುದು. ರಾಜ್ಯ ಬಜೆಟ್‌ನಲ್ಲಿ ಮಹದಾಯಿ ಯೋಜನೆ ಹಣ ಮೀಸಲಿರಿಸಲಾಗುವುದು ಎಂದರು.

ಮೊಮ್ಮಗಳ ಹೆಸರು ನೈರಾ!

ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮರಿ ಮೊಮ್ಮಗಳ ನಾಮಕರಣ ಕಾರ್ಯಕ್ರಮ ನಡೆಯಿತು. ತಮ್ಮ ಮಗಳು ಪದ್ಮಾವತಿ ಹಾಗೂ ಅಳಿಯ ವಿರೂಪಾಕ್ಷಪ್ಪ ಅವರ ಮಗ ಶಶಿಧರ ಯಮಕನಮರಡಿ ಅವರ ಮಗಳ ನಾಮಕರಣದಲ್ಲಿ ಪಾಲ್ಗೊಂಡು ಕುಟುಂಬಸ್ಥರ ಜತೆ ಕೆಲಕ್ಷಣ ಕಳೆದರು. ಮೊಮ್ಮಗಳಿಗೆ ನೈರಾ ಎಂದು ನಾಮಕಾರಣ ಮಾಡಲಾಯಿತು.

click me!