ಕಲ್ಪತರು ನಾಡಲ್ಲಿ ಸಿಹಿ ಕಹಿಗಳ ಹೂರಣದಲ್ಲಿ 2023ಕ್ಕೆ ವಿದಾಯ

By Kannadaprabha News  |  First Published Dec 31, 2023, 10:23 AM IST

ಕಹಿ ಘಟನೆಗಳ ಮಧ್ಯೆ ಒಂದಿಷ್ಟು ಸಂತೋಷದ ಘಟನೆಗಳಿಗೆ ಸಾಕ್ಷಿಯಾಯಿತು ಕಲ್ಪತರು ನಾಡು  


ಕಹಿ ಘಟನೆಗಳ ಮಧ್ಯೆ ಒಂದಿಷ್ಟು ಸಂತೋಷದ ಘಟನೆಗಳಿಗೆ ಸಾಕ್ಷಿಯಾಯಿತು ಕಲ್ಪತರು ನಾಡು  

ಸಿಹಿ ಕಹಿಗಳ ಹೂರಣವಾಗಿದ್ದ 2023 ಕೊನೆಗೊಂಡಿದ್ದು 2024 ರ ಹೊಸ ವರ್ಷದಿಂದ ಕಲ್ಪತರು ಜಿಲ್ಲೆಯಲ್ಲಿ ಸಮೃದ್ಧಿ ನೆಲಸಲಿ ಎಂಬ ಆಶಾಭಾವನೆಯೊಂದಿಗೆ ಹೊಸ ವರ್ಷದ ಸ್ವಾಗತದಲ್ಲಿ ಜನ ಇದ್ದಾರೆ.

Tap to resize

Latest Videos

undefined

ಕಳೆದ ವರ್ಷದ ಸಾಲು ಸಾಲು ಸಾವು ನೋವುಗಳ ಮಧ್ಯೆ ಕೆಲ ಖುಷಿಯ ವಿಚಾರಗಳು ನಡೆದದ್ದು ವಿಶೇಷ. ತುಮಕೂರಿನ ಬಸ್ ನಿಲ್ದಾಣದಲ್ಲಿ ಸೀಟು ಹಿಡಿಯಲು ಹೋಗಿ ಎರಡು ಬಸ್ ಗಳ ಮಧ್ಯೆ ಸಿಲುಕಿ ಮಹಿಳೆಯರಿಬ್ಬರು ದಾರುಣವಾಗಿ ಸಾವನ್ನಪ್ಪಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ಹೊರವಲಯದಲ್ಲಿ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರು ಹೊರವಲಯದ ನಂದಿಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದು ತುಮಕೂರಿನಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಉಳಿಸಲು ಹೋಗಿ ನಾಲ್ವರು ನೀರು ಪಾಲಾಗಿದ್ದು ಹೀಗೆ ಸಾಲು ಸಾಲು ಕಹಿ ಘಟನೆಗಳಿಗೆ ಕಲ್ಪತರು ಜಿಲ್ಲೆ ಸಾಕ್ಷಿಯಾಯಿತು.

ಮೂರು ವರ್ಷಗಳ ಕೋವಿಡ್ ನರಳಾಟದ ಬಳಿಕ ಆರಂಭವಾದ ಹೊಸ ವರ್ಷದಲ್ಲಿ ಈ ರೀತಿಯ ಕೆಲ ಘಟನೆಗಳು ನಡೆದು ಹೋದವು. ಎಲ್ಲಕ್ಕೂ ಮಿಗಿಲಾಗಿ ಗುಬ್ಬಿ ತಾಲೂಕು ಹಾಗಲವಾಡಿಯಲ್ಲಿ ಹುಲಿ ಶವ ಪತ್ತೆಯಾಗಿದ್ದು ರಾಜ್ಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಹಾಗೆ ನೋಡಿದರೆ ಜಿಲ್ಲೆಯಲ್ಲಿ ಹುಲಿ ಸಂಚಾರ ಇದೆ ಎಂಬುದು ಕಳೆದ ಐದು ದಶಕಗಳಿಂದಲೂ ಚಾಲ್ತಿಯಲ್ಲಿತ್ತು. ದೇವರಾಯನದುರ್ಗ ಅರಣ್ಯದಲ್ಲಿ ಹುಲಿ ಸದ್ದು ಕೇಳಿದ್ದಾಗಿ ಕೆಲವರು ಹೇಳಿದ್ದರು. ಅಲ್ಲದೆ ಹುಲಿಯ ಪಗ್ ಮಾರ್ಕ್‌ಗಳು ಪತ್ತೆಯಾಗಿತ್ತು. ಆದರೆ ಹುಲಿ ಮಾತ್ರ ಪತ್ತೆಯಾಗಿರಲಿಲ್ಲ. ಆದರೆ ಫೆಬ್ರವರಿ 14 ರಂದು ಗುಬ್ಬಿ ತಾಲೂಕು ಹಾಗಲವಾಡಿಯಲ್ಲಿ ಸಿಕ್ಕ ಹುಲಿ ಶವ ಹಲವಾರು ಅನುಮಾನಗಳಿಗೆ ಕಾರಣವಾಯಿತು. ಹುಲಿ ಜಾಡು ಇರಬಹುದು ಎಂಬ ಶಂಕೆಯಲ್ಲಿ ಅರಣ್ಯ ಇಲಾಖೆಯವರು ಕಾಡಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಆದರೆ ಹುಲಿ ಜಾಡು ಪತ್ತೆಯಾಗಲಿಲ್ಲ. ಕಡೆಗೂ ಹುಲಿ ಹಾಗಲವಾಡಿ ಅರಣ್ಯದಲ್ಲಿ ಇತ್ತೇ ಅಥವಾ ಬೇರೆಡೆಯಿಂದ ವಲಸೆ ಬಂದು ಸಾವನ್ನಪ್ಪಿದೆಯೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದು ಹೋಯಿತು.

ಇನ್ನು ಮಳೆಯ ಕೊರತೆ ಹಿನ್ನೆಲೆಯಲ್ಲಿ ಜಿಲ್ಲೆಯ 10 ತಾಲೂಕುಗಳು ಬರಪೀಡಿತವಾಗಿತ್ತು. ಕೇಂದ್ರ ಸರ್ಕಾರದಿಂದ ಬರ ಅಧ್ಯಯನ ತಂಡ ಕೂಡ ಬಂದು ಹೋಗಿತ್ತು. ಹಾಗೆಯೇ ಮೇವಿನ ಕೊರತೆಯಿಂದ ಹಸುಗಳು ಸಾವನ್ನಪ್ಪಿದ್ದವು. ಇನ್ನು ಬರದ ಬೆನ್ನಲ್ಲೇ ಕೊಬ್ಬರಿ ಧಾರಣೆ ಕುಸಿದಿದ್ದ 18 ಸಾವಿರದಿಂದ 7500 ಕ್ಕೆ ಕುಸಿದಿತ್ತು.

ಇನ್ನು ಕಳೆದ ವರ್ಷ ಚುನಾವಣಾ ವರ್ಷವಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ ಮುಂತಾದವರು ತುಮಕೂರು ಜಿಲ್ಲೆಗೆ ಆಗಮಿಸಿದ್ದರು. ಇನ್ನು ಅತ್ಯಂತ ಖುಷಿಯ ಸಂಗತಿ ಎಂದರೆ ಫೆಬ್ರವರಿ 8 ರಂದು ಗುಬ್ಬಿ ಬಳಿ ನಿರ್ಮಿಸಲಾಗಿರುವ ಎಚ್ಎಎಲ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದು. ಯುದ್ದದ ಹೆಲಿಕ್ಯಾಪ್ಟರ್ ನಿರ್ಮಾಣ ಘಟಕವಾಗಿರುವ ಇದು ಭಾರತದ ಹೆಮ್ಮೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಅಂದು ಮೋದಿ ಅವರು ಲೋಕಾರ್ಪಣೆಗೊಳಿಸುವ ಮೂಲಕ ಭಾರತ ದೇಶಕ್ಕೆ ಅರ್ಪಣೆ ಮಾಡಿದರು. ಇದೇ ಕಾರ್ಯಕ್ರಮ ನೋಡಿ ವಾಪಸ್ ಬರುವಾಗ ನಡೆದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಕಹಿ ಘಟನೆ ಕೂಡ ನಡೆಯಿತು.

ಇನ್ನು ಕಳೆದ ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 7 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತು. ಜೆಡಿಎಸ್ ಹಾಗೂ ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಚುನಾವಣೆ ಹಿನ್ನೆಲೆಯಲ್ಲಿ ಮೂರು ಪಕ್ಷಗಳ ಯಾತ್ರೆಗಳು ತುಮಕೂರು ಜಿಲ್ಲೆಗೆ ಬಂದವು. ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ, ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಹಾಗೂ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಗೆ ಆಗಮಿಸಿತು.

ಕಳೆದ ಚುನಾವಣೆಯಲ್ಲಿ ಒಂದಿಷ್ಟು ವಲಸೆ ಪ್ರಕ್ರಿಯೆಗಳು ನಡೆದವು. ತಮ್ಮ ಅಳಿಯ ರಫೀಕ್ ಅಹಮದ್ ಗೆ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲವೆಂದು ಮಾಜಿ ಶಾಸಕ ಶಫಿ ಅಹಮದ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು. ಆದರೆ ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್ ಗೆ ಮರಳಿದರು.

ಇನ್ನು ಗುಬ್ಬಿಯಲ್ಲಿ ಹುಲಿಯ ಶವಪತ್ತೆಯಾಗಿದ್ದ ಘಟನೆ ಬೆನ್ನಲ್ಲೇ ತುಮಕೂರಿನ ದೇವರಾಯನದುರ್ಗದಲ್ಲಿ ಚಿರತೆಯೊಂದು ಬಾವುಲಿಗಳನ್ನು ಬೇಟೆಯಾಡಿದ ವಿಸ್ಮಯ ಘಟನೆ ನಡೆಯಿತು. ಸಾಮಾನ್ಯವಾಗಿ ಬಾವುಲಿಗಳನ್ನು ಚಿರತೆ ಬೇಟೆಯಾಡುವುದಿಲ್ಲ. ಆದರೆ ಪರಿಸರ ಸಂಸ್ಥೆಯೊಂದು ದೇವರಾಯನದುರ್ಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಬಾವುಲಿಯನ್ನು ಚಿರತೆ ತಿನ್ನುತ್ತಿರುವುದು ಕ್ಯಾಮರಾಗೆ ಸೆರೆಯಾಗಿದೆ.

ಇದೆಲ್ಲದರ ಮಧ್ಯೆ ಭಾರತ ಜೋಡೋ ಯಾತ್ರೆಗೆ ತುಮಕೂರು ಜಿಲ್ಲೆಗೆ ರಾಹುಲ್ ಗಾಂಧಿ ಬಂದ ವೇಳೆ ರಾಹುಲ್ ಗಾಂಧಿಗೆ ಸೌತೆಕಾಯಿ ಕೊಟ್ಟಿ ಗಮನ ಸೆಳೆದಿದ್ದ ವೃದ್ದೆ ಸಾವನ್ನಪ್ಪಿದ್ದ ಘಟನೆ ನಡೆಯಿತು.

ಇನ್ನು ಏಪ್ರಿಲ್ ತಿಂಗಳಿನಲ್ಲಿ ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಯಾಗಿ ಶಿವಸಿದ್ದೇಶ್ವರ ಸ್ವಾಮೀಜಿ ಅವರನ್ನು ನೇಮಿಸಿದ್ದು ಕೂಡ ಗಮನಸೆಳೆಯಿತು.

ಒಟ್ಟಾರೆಯಾಗಿ 2023 ಹಲವಾರು ಕಹಿ ಘಟನೆಗಳಿಗೆ ಸಾಕ್ಷಿಯಾದರೂ ಅಲ್ಲೊಂದು ಇಲ್ಲೊಂದು ಬೆಳಕಿಂಡಿಯಂತೆ ಸಂತೋಷದ ಘಟನೆಗಳಿಗೂ ಸಾಕ್ಷಿಯಾಯಿತು. ಮತ್ತೊಂದು ಹೊಸ ವರ್ಷಕ್ಕೆ ಜನ ಕಾಯುತ್ತಿದ್ದು ಹೊಸ ವರ್ಷದಲ್ಲಿ ಮತ್ತಷ್ಟು ಸಿಹಿ ಘಟನೆಗಳು ನಡೆಯಲಿ ಎಂಬ ಆಶಯವನ್ನು ಕಲ್ಪತರು ಜಿಲ್ಲೆಯ ಜನ ಹೊಂದಿದ್ದಾರೆ.

ಬಾಕ್ಸ್.......

ಗೌರಿಶಂಕರ್ ಅನರ್ಹ

ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಚುನಾವಣಾ ಅಕ್ರಮ ನಡೆಸಿದ್ದರು ಎಂದು ದೂರಿ ಸುರೇಶಗೌಡ ನ್ಯಾಯಾಲಯದ ಮೊರೆ ಹೋಗಿದ್ದರು. ಮಾರ್ಚ್ 30 ರಂದು ಹೈಕೋರ್ಟ್ ಗೌರಿಶಂಕರ್ ಅವರನ್ನು ಅನರ್ಹಗೊಳಿಸಿ ಆದೇಶ ನೀಡಿತ್ತು.

--------

ಮೌಢ್ಯಕ್ಕೆ ಬಲಿಯಾದ ಮಗು

ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಮೌಢ್ಯಕ್ಕೆ ಮಗುವೊಂದು ಬಲಿಯಾಗಿದ್ದು ರಾಜ್ಯದ ಗಮನಸೆಳೆದಿತ್ತು. ಗೊಲ್ಲ ಸಮುದಾಯದಲ್ಲಿ ಹೆರಿಗೆಯಾದ ಗೊಲ್ಲರಹಟ್ಟಿಯಾಚೆ ಮಗು, ಬಾಣಂತಿಯನ್ನು ಕೂರಿಸುವ ಪದ್ಧತಿ ಇದೆ. ಆಗ ವಿಪರೀತ ಮಳೆ, ಚಳಿಯಿಂದಾಗಿ ನವಜಾತ ಶಿಶು ಸಾವನ್ನಪ್ಪಿದ್ದು ದೊಡ್ಡ ಮಟ್ಟದಲ್ಲಿ ಗಮನಸೆಳೆಯಿತು. ತುಮಕೂರು ಜಿಲ್ಲೆಯ ನ್ಯಾಯಾದೀಶರು ಸೇರಿದಂತೆ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.

---

ತುಮಕೂರಿಗೆ ಗಣ್ಯರ ಆಗಮನ

ಪ್ರಧಾನಿ ನರೇಂದ್ರ ಮೋದಿ ಎಚ್ಎಎಲ್ ಘಟಕವನ್ನು ಲೋಕಾರ್ಪಣೆಗೊಳಿಸಿದ್ದು, ರಾಹುಲ್‌ ಗಾಂಧಿ ಹಮ್ಮಿಕೊಂಡ ಭಾರತ್ ಜೋಡೊ ಯಾತ್ರೆ ತುಮಕೂರಿಗೆ ಆಗಮಿಸಿದ್ದರು. ಚುನಾವಣೆ ವರ್ಷವಾಗಿದ್ದರಿಂದ ಅಮಿತ್‌ ಶಾ ಸೇರಿದಂತೆ ಅನೇಕ ಗಣ್ಯರು ಕಲ್ಪತರು ನಾಡಿಗೆ ಬಂದಿದ್ದು ವಿಶೇಷ.

----

ಗುಬ್ಬಿಯಲ್ಲಿ ಹುಲಿ ಶವ ಪತ್ತೆ

ಫೆಬ್ರವರಿ 14 ರಂದು ಗುಬ್ಬಿ ತಾಲೂಕು ಹಾಗಲವಾಡಿಯಲ್ಲಿ ಹುಲಿ ಶವ ಪತ್ತೆಯಾಗಿದ್ದು ರಾಜ್ಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಹುಲಿ ಶವ ಪತ್ತೆಯಿಂದ ಹಲವಾರು ಅನುಮಾನಗಳಿಗೆ ಕಾರಣವಾಯಿತು. ಹುಲಿ ಜಾಡು ಇರಬಹುದು ಎಂಬ ಶಂಕೆಯಲ್ಲಿ ಅರಣ್ಯ ಇಲಾಖೆಯವರು ಕಾಡಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದರು. ಆದರೆ ಹುಲಿ ಜಾಡು ಪತ್ತೆಯಾಗಲಿಲ್ಲ.

click me!