* ವೆಂಟಿಲೇಟರ್ ಖಾಲಿ ಇಲ್ಲ ಎಂದು ಕೈಚೆಲ್ಲಿದ್ದರಿಂದ ಮೃತಪಟ್ಟಿದ್ದ ಸೋಂಕಿತೆ
* ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು
* ಕುಟುಂಬಸ್ಥರ ಆಕ್ರಂದನ ಯಾರೂ ಕೇಳಲಿಲ್ಲ
ಕೊಪ್ಪಳ(ಮೇ.21): ನಗರದ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಿಗದೆ ಮೃತಪಟ್ಟ ಕೊರೋನಾ ಸೋಂಕಿತೆ ಅಗಳಿಕೇರಾ ಗ್ರಾಮದ ಹುಲಿಗೆಮ್ಮಾ (75) ಅವರ ಶವವನ್ನು ಕುಟುಂಬದವರು ಹೊತ್ತುಕೊಂಡು ಹೋದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಸೋಂಕಿತೆ ಹುಲಿಗೆಮ್ಮ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರಿಗೆ ವೆಂಟಿಲೇಟರ್ ಅಗತ್ಯವಿತ್ತು. ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಖಾಲಿ ಇಲ್ಲ ಎಂದು ಕೈಚೆಲ್ಲಿದ್ದರಿಂದ ಅವರು ಮೃತಪಟ್ಟಿದ್ದಾರೆ.
ಗಂಗಾವತಿ: ನಕಲಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತೆ ಸಾವು..!
ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವೆಂಟಿಲೇಟರ್ ಇಲ್ಲದಿದ್ದರೆ ಯಾಕೆ ಆಸ್ಪತ್ರೆ ಇಡಬೇಕು ಎಂದು ಕಿಡಿಕಾರಿದರು. ಬಳಿಕ ಶವವನ್ನು ಹೊತ್ತು, ಆಕ್ಸಿಜನ್ ಘಟಕದ ಎದುರು ಕೆಲಕಾಲ ಪ್ರತಿಭಟನೆ ಮಾಡಿದರು. ಆದರೆ, ಇವರ ಆಕ್ರಂದನವನ್ನು ಯಾರೂ ಕೇಳಲಿಲ್ಲ. ಹೀಗಾಗಿ, ಕೊನೆಗೆ ಅವರು ಆಸ್ಪತ್ರೆಯ ಆವರಣ ದಾಟುವವರೆಗೂ ಶವ ಹೊತ್ತುಕೊಂಡು ಹೋದ ದೃಶ್ಯ ಅಲ್ಲಿದ್ದವರ ಕಣ್ಣಲ್ಲಿ ನೀರು ಬರುವಂತೆ ಮಾಡಿತು.