ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!

By Kannadaprabha News  |  First Published Jan 7, 2020, 2:21 PM IST

ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಎಂಬ ಚೆಂದದ ಹೆಸರಿನ ಊರೊಂದಿದೆ. ಹೆಸರಿನಷ್ಟೇ ರಮಣೀಯವಾದ ಊರು. ವಾರಾಂತ್ಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರ ಜೊತೆಗೆ ಒಂದಿಷ್ಟು ಜನ ಪತ್ರಕರ್ತರೂ ಈ ಊರಿಗೆ ವಿಸಿಟ್ ಮಾಡಿದ್ದು, ಆಗ ಕಂಡ ಊರ ನೋಟಗಳು ಇಲ್ಲಿವೆ. 


ವಸಂತಕುಮಾರ್ ಕತಗಾಲ

ಕಾರವಾರ [ಜ.07]:  ಉತ್ತರ ಕನ್ನಡ ಜಿಲ್ಲೆಯ ಮೇದಿನಿ ಎಂಬ ಚೆಂದದ ಹೆಸರಿನ ಊರೊಂದಿದೆ. ಹೆಸರಿನಷ್ಟೇ ರಮಣೀಯವಾದ ಊರು. ವಾರಾಂತ್ಯ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರ ಜೊತೆಗೆ ಒಂದಿಷ್ಟು ಜನ ಪತ್ರಕರ್ತರೂ ಈ ಊರಿಗೆ ವಿಸಿಟ್ ಮಾಡಿದೆವು. ಆಗ ಕಂಡ ಊರ ನೋಟಗಳು ಇಲ್ಲಿವೆ. 

Tap to resize

Latest Videos

undefined

ಈ ಊರ ಹುಡುಗರಿಗೆ ಮದುವೆ ಯೋಗವೂ ಇಲ್ಲ

ಕುಮಟಾ ಸಿದ್ದಾಪುರ ರಸ್ತೆಯ ಹುಲಿದೇವರ ಕೊಡ್ಲು ಎಂಬಲ್ಲಿಂದ ಮೇದಿನಿಯತ್ತ ನಸುಕಿನ 6 ಗಂಟೆಗೇ ಹೆಜ್ಜೆ ಹಾಕುತ್ತಿದ್ದೆವು. ಈ ಹುಲಿದೇವರ ಕೊಡ್ಲು, ಕುಮಟಾದಿಂದ 35 ಕಿಮೀ ದೂರದಲ್ಲಿದೆ. ಸೂರ್ಯನ ಕಿರಣ ಸೋಕದ ಕಡಿದಾದ ಗುಡ್ಡದ ಹಾದಿಯಲ್ಲಿ ಒಂದೊಂದು ಹೆಜ್ಜೆಯೂ ಲೆಕ್ಕಕ್ಕೆ ಸಿಗುತ್ತಿತ್ತು. 7 ಕಿ.ಮೀಗಳಷ್ಟು ಕ್ರಮಿಸಿದಾಗ ಸ್ವರ್ಗದಂಥಾ ಊರೊಂದು ಕಣ್ಮುಂದೆ ಇತ್ತು. ಹಳ್ಳಕೊಳ್ಳಗಳು, ಸಮೃದ್ಧ ನೀರು, ಎಲ್ಲಿ ನೋಡಿದರೂ ಹಸಿರು. ಈ ಊರು ತಲುಪಿದಾಗ ಅಷ್ಟು ದೂರ ನಡೆದ ಬೆವರೆಲ್ಲ ಆರಿತ್ತು. ಆ ನಡು ಹೊತ್ತಲ್ಲೂ ಚಳಿ ನಡುಕ ಹುಟ್ಟಿಸುವ ಹಾಗಿತ್ತು. ಮಣ್ಣಿನಿಂದ ಗೋಡೆ ನಿರ್ಮಿಸಿ ಹೆಂಚು ಹಾಕಿದ ಮನೆಗಳು, ಗದ್ದೆಗಳಲ್ಲಿ ಬತ್ತದ ಘಮ, ಅಡಕೆ, ತೆಂಗಿನ ಮರಗಳು ಬೇರೆಯದೇ ಜಗತ್ತಿನ ಅನು‘ವ ನೀಡುತ್ತಿದ್ದವು. 

ಶಾಲೆಯೊಂದೇ ಸರ್ಕಾರದ ಕೊಡುಗೆ

 ಸಮೃದ್ಧ ಇತಿಹಾಸ, ನೈಸರ್ಗಿಕ ಸಂಪತ್ತನ್ನು ಮಡಿಲಲ್ಲಿ ಇಟ್ಟುಕೊಂಡಿರುವ ಆಧುನಿಕತೆಯ ಸ್ಪರ್ಶವೆ ಇಲ್ಲದ ಗ್ರಾಮವಿದು. ತೀರ ಈಚೆಗೆ ಕರೆಂಟು ಬಂದರೂ ವರ್ಷದಲ್ಲಿ 9 ತಿಂಗಳು ಕತ್ತಲೆಯೇ ಗತಿ. ಶಾಲೆಯೊಂದನ್ನು ಬಿಟ್ಟರೆ ಮತ್ಯಾವುದೇ ಸೌಲಭ್ಯ ಇಲ್ಲಿಲ್ಲ. ಮೇದಿನಿಯ ಕಡಿದಾದ ಕಲ್ಲು, ಮಣ್ಣಿನಿಂದ ಕೂಡಿದ ಹಾದಿಯಲ್ಲಿ ಈಗ ಬೈಕು, ಜೀಪುಗಳು ಏದುಸಿರು ಬಿಡುತ್ತ ಹೋಗುತ್ತವೆ. ತುಸು ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. 

ಹೆಚ್ಚಿನ ಹುಡುಗರು ಅವಿವಾಹಿತರು

ಮೇದಿನಿಯಲ್ಲಿ ಕರೆ ಒಕ್ಕಲಿಗರ 54 ಮನೆಗಳಿವೆ. 300ರಷ್ಟು ಜನಸಂಖ್ಯೆ ಇದೆ. ಹೆಚ್ಚಿನ ಯುವಕರು ಅವಿವಾಹಿತರು. ‘ಶೇ.20ರಷ್ಟು ಯುವಕರಿಗೆ ಮದುವೆ ವಯಸ್ಸು ಮೀರಿದರೂ ಕಂಕಣ ‘ಭಾಗ್ಯವಿಲ್ಲ. ಕಾರಣ ಈ ದುರ್ಗಮ ಪ್ರದೇಶಕ್ಕೆ ತಮ್ಮ ಮಗಳನ್ನು ಮದುವೆ ಮಾಡಿಕೊಡಲು ಪೋಷಕರು ಹಿಂದೆ ಮುಂದೆ ನೋಡುತ್ತಾರೆ’ ಎಂದು ಗ್ರಾಮಸ್ಥ ನಾಗರಾಜ ತಿಮ್ಮಗೌಡ ಹೇಳುತ್ತಾರೆ. ‘ಗರ್ಭಿಣಿಯರಿಗೆ 8 ತಿಂಗಳಾಗುತ್ತಿದ್ದಂತೆ ಪೇಟೆ ಪಟ್ಟಣಗಳ ಸಂಬಂಧಿಗಳ ಮನೆಗಳಿಗೆ ಕಳುಹಿಸಿಕೊಡುತ್ತೇವೆ. ಹಠಾತ್ ಕಾಯಿಲೆ ಬಿದ್ದವರನ್ನು ಜೋಲಿ ಮಾಡಿಕೊಂಡು ಹೊತ್ತು ತರುವ ಗೋಳು ಯಾರಿಗೂ ಬೇಡ. ದೇವರ ದಯೆ ಇದ್ದವರು ಬದುಕುತ್ತಾರೆ’ ಎಂದು ಹನುಮಂತ ಗೌಡ ಹೇಳುತ್ತಾರೆ.

ಮೇದಿನಿ ಗ್ರಾಮಕ್ಕೆ ಹೆಣ್ಣು ಕೊಡೋಕೂ ಹೆದರ್ತಾರೆ !...

ಕೋಟೆ ತೋರಿಸಿದ ಹುಲಿಯ

ಮೇದಿನಿ ಊರಿನಿಂದ ಮತ್ತೆ 3 ಕಿ.ಮೀ.ನಷ್ಟು ಚಾರಣ ಮಾಡಿದರೆ ಅಲ್ಲೊಂದು ಕೋಟೆ. ಅದು ದಟ್ಟಡವಿಯ ದಾರಿ. ನಮಗೆ ದಾರಿ ತೋರಿಸಲು ಅಂಡುಗೊಕ್ಕೆಗೆ ಕತ್ತಿ ಸಿಕ್ಕಿಸಿ ರೆಡಿಯಾದ ಹುಲಿಯ ಗೌಡ. ಕಾಲು ಹಾದಿಯೂ ಇಲ್ಲದ ಕಡಿದಾದ ಜಾಗ. ಹುಲ್ಲುಗಾವಲಿನಲ್ಲಿ ಗುಡ್ಡ ಏರುತ್ತಿದ್ದಾಗ ಹುಲಿಯ ಗಕ್ಕನೆ ನಿಂತ. ರಾಶಿಯಾಗಿ ಬಿದ್ದ ಹಸಿ ಹಸಿ ಸೆಗಣಿ ತೋರಿಸಿ ‘ನೋಡಿ, ಕಾಡುಕೋಣಗಳ ಹಿಂಡು ಒಂದೆರಡು ತಾಸಿನ ಹಿಂದೆ ಇಲ್ಲಿಂದ ಹೋಗಿವೆ’ ಎಂದಾಗ ಮೈ ಜುಮ್ ಎಂದಿತು. ಮತ್ತೆ ಕಾಡು ಕಾಲು ದಾರಿಗೆ ಹಬ್ಬಿದ ಬಳ್ಳಿಗಳನ್ನು ಕಡಿಯುತ್ತ ದಾರಿ ಮಾಡಿಕೊಂಡು ಹುಲಿಯ ಹೆಜ್ಜೆ ಹಾಕುತ್ತಿದ್ದರೆ ಅವನನ್ನು ಅನುಸರಿಸಿ ಎದುಸಿರು ಬಿಡುತ್ತ ಹಿಂಬಾಲಿಸುತ್ತಿದ್ದೆವು. ಒಂದು ಗಂಟೆ ಕಾಲ ನಡೆದ ಮೇಲೆ ಕಂಡಿತು ಕೋಟೆ. ಅಥವಾ ಕೋಟೆಯ ಅವಶೇಷ. ಚಪ್ಪಡಿ ಕಲ್ಲು ಜೋಡಿಸಿಟ್ಟ ಗೋಡೆ. ಮುಂದೆ ಸುರಂಗ. ಇದು 10-15 ಮೀಟರ್‌ನಷ್ಟು ದೂರದ್ದು. ಹುಲಿಯನ ಹಿಂದೆ ಸುರಂಗದಲ್ಲಿ ನುಸುಳಿ ಇನ್ನೊಂದೆಡೆಯಿಂದ ಹೊರಬಂದೆ. ಅಲ್ಲೆ ಕೆಳಗಡೆ ಬೀರಪ್ಪ ದೇವರಿನ ಮೂರ್ತಿ. ಪಕ್ಕದಲ್ಲಿ ಹರಿಯುವ ಝರಿ, ಎದುರುಗಡೆ ಹತ್ತಾರು ಮೈಲುದ್ದ ಕಾಣುವ ವಿಹಂಗಮ ನೋಟ. ಗುಡ್ಡ ಏರಿದ ಆಯಾಸವೆಲ್ಲ ಆ ನೋಟದಲ್ಲೇ ಮಾಯವಾಗಿಬಿಟ್ಟಿತು. 

ಹೆಣ್ಣು ಕೊಡೋಕು ಹೆದರುವ ಈ ಊರಿಗೆ ಹೋದ್ರು ಜಿಲ್ಲಾಧಿಕಾರಿ...

ಸಣ್ಣಕ್ಕಿಯ ಘಮ

ವಿಷ್ಣು ಗೌಡ ಅವರ ಮನೆ ಸಮೀಪ ಬರುತ್ತಿದ್ದಂತೆ ಎರಡು ನಾಯಿಗಳು ಬೊಗಳುತ್ತ ನಿಂತವು. ಮನೆಯವರು ಅಕ್ಕರೆಯಿಂದ ಸ್ವಾಗತಿಸಿದರು. ಕಲ್ಲು ಕಂಬ, ಮಣ್ಣಿನ ಗೋಡೆಯ ಮನೆಯದು. ಸಗಣಿಯಿಂದ ಸಾರಿಸಿದ ಅಂಗಳ ದಾಟಿ ಜಗುಲಿಗೆ ಹೋಗುತ್ತಿದ್ದಂತೆ ಘಮ ಘಮ ಪರಿಮಳ. ‘ಏನು ಗೌಡ್ರೇ ‘ ಭಾರಿ ಪರಿಮಳ..’ ಅಂದರೆ, ತುಟಿಯಿಂದ ಕವಳದ ರಸ ಒರೆಸಿಕೊಳ್ಳುತ್ತಾ, ‘ಸಣ್ಣಕ್ಕಿ ಹರಡಿಟ್ಟಿದ್ದೆ. ಚೀಲದಲ್ಲಿ ತುಂಬುತ್ತಿದ್ದೇನೆ’ ಎಂದರು ಗೌಡರು. 

ಕುಗ್ರಾಮ ಮೇದಿನಿ ಮಂದಿ ನೋವಿಗೆ ಸ್ಪಂದಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್...

ಅಬ್ಬಾ ಮೇದಿನಿ ಸಣ್ಣಕ್ಕಿಯ ಘಮವೇ! ಈ ಅಕ್ಕಿಯ ಕೇಸರಿಬಾತ್, ಪಾಯಸ, ಬಿರಿಯಾನಿ ಎಲ್ಲಕ್ಕೂ ಅದ್ಭುತ ರುಚಿ, ಜೊತೆಗೆ ಸುತ್ತಮುತ್ತೆಲ್ಲ ಪರಿಮಳ.

ಇಲ್ಲಿ ಮೊದಲು ಸುಮಾರು40 ರಷ್ಟು ಕುಟುಂಬಗಳು ಸಣ್ಣಕ್ಕಿ ಬೆಳೆಯುತ್ತಿದ್ದರು. ಈಗ ಕೇವಲ 8-10 ಕುಟುಂಬದವರು ಬೆಳೆಯುತ್ತಾರೆ. ಈ ಅಕ್ಕಿಯನ್ನು ಕೆಜಿಗೆ 125 ರು.ನಂತೆ ಸ್ಥಳೀಯವಾಗಿ ಮಾರುತ್ತಾರೆ. ಈ ತಳಿಯನ್ನು ಬೇರೆಡೆ ತೆಗೆದುಕೊಂಡು ಹೋಗಿ ಬೆಳೆಸುವ ಪ್ರಯೋಗ ಮಾಡಿದ್ದಾರೆ. ಆದರೆ ಈ ಪರಿಮಳ ಬಾರದು. ಇಲ್ಲಿಯ ಥರ ಹುಲುಸಾಗಿಯೂ ಬೆಳೆಯದು. ಇಲ್ಲಿನ ಮಣ್ಣು ಹಾಗೂ ವಿಪರೀತ ಚಳಿಯ ಕಾರಣ ಸಣ್ಣಕ್ಕಿಗೆ ಈ ಘಮ, ರುಚಿ ಎನ್ನುತ್ತಾರೆ ಕೃಷಿ ತಜ್ಞರು. ಸಣ್ಣಕ್ಕಿಗೆ ಪೇಟೆಂಟ್ ಸಿಕ್ಕಿದರೆ ಇವರ ಅದೃಷ್ಟ ಖುಲಾಯಿಸಲಿದೆ. ಇದಕ್ಕೊಂದು ಬ್ರಾಂಡ್ ಮಾಡಿ, ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಬೇಕಿತ್ತು ಎಂಬ ವಿಚಾರ ತಲೆಯಲ್ಲಿ ಗುಂಯ್‌ಗುಡುತ್ತಲೆ ಇತ್ತು.
ಹನುಮಂತ ಗೌಡರ ಮನೆಯ ಸಣ್ಣಕ್ಕಿ ಪಾಯಸ, ಗಣಪಾ ಗೌಡ ಮನೆಯಲ್ಲಿ ತಿಂದ ಕೊಟ್ಟೆ ಕಡುಬು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಚೈತನ್ಯ ಕೊಟ್ಟಿತು. 

click me!