ಈ ಸ್ಥಾನಗಳ ಮೇಲೆ ಉಚ್ಚಾಟಿತ ಮುಖಂಡರ ಕಣ್ಣು

By Kannadaprabha NewsFirst Published Dec 9, 2019, 8:20 AM IST
Highlights

ಇದೀಗ ಬಿಜೆಪಿ ಮುಖಂಡರ ಕಣ್ಣು ಈ ಸ್ಥಾನಗಳ ಮೇಲೆಯೂ ಬಿದ್ದಿದೆ. ಬಿಜೆಪಿ ಅಧಿಕಾರದಲ್ಲಿದ್ದರೂ ಸಹ ಹೆಚ್ಚಿ ಲಾಬಿ ನಡೆಯುತ್ತಿದೆ.

ಬೆಂಗಳೂರು [ಡಿ.09]:  ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ ಉಚ್ಚಾಟಿತ ಪಾಲಿಕೆಯ ಸದಸ್ಯರು ಸಹ ಲಾಬಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ನಾಲ್ಕು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಿಂದ ಕೆಲವು ಪಾಲಿಕೆ ಸದಸ್ಯರನ್ನು ಉಚ್ಚಾಟನೆ ಮಾಡಲಾಗಿತ್ತು. ಈಗ ಉಚ್ಚಾಟಿತ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ. ಇದು ಉಚ್ಚಾಟಿತ ಸದಸ್ಯರು ಪಕ್ಷೇತರ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಅನರ್ಹ ಶಾಸಕರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌ ಹಾಗೂ ಗೋಪಾಲಯ್ಯ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಎ. ನಾರಾಯಣಪುರ ವಾರ್ಡ್‌ ಸದಸ್ಯ ಸುರೇಶ್‌ ವಿ, ವಿಜ್ಞಾನ ನಗರದ ಎಸ್‌.ಜಿ.ನಾಗರಾಜ್‌, ಬಸವನಪುರ ವಾರ್ಡ್‌ನ ಬಿ.ಎನ್‌.ಪ್ರಕಾಶ್‌, ದೇವಸಂದ್ರ ವಾರ್ಡ್‌ನ ಎಂ.ಎನ್‌.ಶ್ರೀಕಾಂತ್‌, ಹೇರೊಹಳ್ಳಿ ವಾರ್ಡ್‌ನ ರಾಜಣ್ಣ , ಹೆಮ್ಮಿಗೆಪುರ ವಾರ್ಡ್‌ನ ಆರ್ಯ ಶ್ರೀನಿವಾಸ್‌, ಲಕ್ಷ್ಮೇದೇವಿ ನಗರ ವಾರ್ಡ್‌ನ ಎಂ.ವೇಲುನಾಯಕರ್‌ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಅದೇ ರೀತಿ ಜೆಡಿಎಸ್‌ ಪಕ್ಷದಿಂದ ವೃಷಭಾವತಿ ನಗರ ವಾರ್ಡ್‌ ಸದಸ್ಯೆ ಎಸ್‌.ಪಿ ಹೇಮಲತಾ ಹಾಗೂ ಮಾರಪ್ಪನ ಪಾಳ್ಯ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಮಹದೇವ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಸರ್ಕಾರ ಸೇಫ್ ಆದ್ರೆ ಯಾರಿಗೆ ಯಾವ ಖಾತೆ ? ಫೈನಲ್ ಪಟ್ಟಿ ರೆಡಿ...

ಅನರ್ಹ ಶಾಸಕರ ಬೆಂಬಲಿಗರಿಗೆ ಮಣೆ?:

ಕೆ.ಆರ್‌ಪುರ, ಆರ್‌ಆರ್‌ ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಾರ್ಡ್‌ಗಳಲ್ಲಿನ ಅನರ್ಹ ಶಾಸಕರ ಬೆಂಬಲಿತ ಪಾಲಿಕೆ ಸದಸ್ಯರಿಗೆ ತಲಾ ಒಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ನಿಂದ ಉಚ್ಚಾಟಿತ ಸದಸ್ಯರು ಮಾಹಿತಿ ನೀಡಿದ್ದಾರೆ.

ಡಿ.9ರ ಉಪಚುನಾವಣಾ ಫಲಿತಾಂಶದ ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌ ತಿಳಿಸಿದ್ದಾರೆ. ಯಾರಿಗೆ ಯಾವ ಸ್ಥಾನ ಸಿಗಲಿದೆ ಎನ್ನುವುದು ಫಲಿತಾಂಶ ಬಂದ ಮೇಲೆ ನಿರ್ಧಾರವಾಗಲಿದೆ.

- ಎಂ.ವೇಲುನಾಯಕರ್‌, ಲಕ್ಷ್ಮೀದೇವಿ ನಗರ ವಾರ್ಡ್‌ ಸದಸ್ಯ

click me!