ಚಿಕ್ಕಬಳ್ಳಾಪುರ (ಸೆ.20): ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಪೇದೆಯೊಬ್ಬ ಸಿವಿಲ್ ಪೊಲೀಸ್ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ತನ್ನ ಸ್ವಂತ ತಮ್ಮನ ಹೆಸರಿನಲ್ಲಿ ತಾನೇ ಪರೀಕ್ಷೆ ಬರೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದು ಈಗ ತನ್ನ ಕೆಲಸವನ್ನೇ ಕಳೆದುಕೊಂಡಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆಯ ಪೇದೆ ದೇವರಾಜ್ ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಪೇದೆ ದೇವರಾಜ್, 2020ನೇ ಸಾಲಿನ ಸೆ.20 ರಂದು ದೂರದ ಯಾದಗಿರಿ ಜಿಲ್ಲೆಯಲ್ಲಿ ನಡೆಸಿದ ಸಿವಿಲ್ ಪೊಲೀಸ್ ನೇಮಕಾತಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ತನ್ನ ಸಹೋದರ ಮರೆಪ್ಪ ಎಂಬುವನ ಬದಲಿಗೆ ತಾನೇ ತಮ್ಮನಂತೆ ನಟಿಸಿ ಪರೀಕ್ಷೆಯನ್ನು ಬರೆಯುತ್ತಿದ್ದಾಗ ಪರೀಕ್ಷಾ ಕೊಠಡಿ ಪರಿವೀಕ್ಷಕರ ಕೈಗೆ ಸಿಕ್ಕಿ ಬಿದಿದ್ದನು. ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ವಿ.ಮಂಜುನಾಥ ನೀಡಿದ ದೂರಿನಂತೆ ಆರೋಪಿ ವಿರುದ್ಧ ಯಾದಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ನಡೆಸಿದ್ದು, ವಿಚಾರಣೆಯಲ್ಲಿ ಆರೋಪ ಸಾಭೀತಾಗಿದ್ದರಿಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಆರೋಪಿ ಪೇದೆ ದೇವರಾಜ್‌ನನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಒಂದು ಡಜನ್ ಜನಕ್ಕೆ ವಂಚಿಸಿದನಾ ಮಾಜಿ ಖಾಕಿ: ಹೌಹಾರಿದ ಪೊಲೀಸ್ ಇಲಾಖೆ
ಎರಡನೇ ಪ್ರಕರಣ ಇದು:
ಪೊಲೀಸ್ ಇಲಾಖೆ ನಡೆಸುವ ನೇಮಕಾತಿ ವೇಳೆ ತಮ್ಮ ಸಂಬಂದಿಕರಿಗೆ, ಮಕ್ಕಳಿಗೆ ಪೊಲೀಸ್ ಪೇದೆಗಳಿಗೆ ಸಹಾಯ ಮಾಡಿ ಸಿಕ್ಕಿ ಬಿದ್ದಿರುವುದು ಜಿಲ್ಲೆಯಲ್ಲಿ ಇದು ಎರಡನೇ ಪ್ರಕರಣ. ಕೆಲವು ತಿಂಗಳ ಹಿಂದೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪೊಲೀಸ್ ನೇಮಕಾತಿಯ ದೈಹಿಕ ಪರೀಕ್ಷೆಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಆಯೋಜಿಸಿದ್ದ ಓಟದ ಸ್ಪರ್ಧೆಯ ವೇಳೆ ಎಸ್ಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಸೇರಿ ಎಎಸ್‌ಐ ಮಗನಿಗೆ ನೆರವು ನೀಡಿದ ಪ್ರಕರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಹೋಗಿ ಅಕ್ರಮದಲ್ಲಿ ಭಾಗಿಯಾಗಿದ್ದ ಹಲವರನ್ನು ಸೇವೆಯಿಂದ ಅಮಾನತುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.