ಬೆಂಗಳೂರಿನ 16 ವಾಣಿಜ್ಯ ಮಳಿಗೆಗಳಿಗೆ ಬಿತ್ತು ಬೀಗ!

By Web DeskFirst Published Jan 12, 2019, 12:37 PM IST
Highlights

ಮತ್ತೆ 16 ಮಳಿಗೆ, ಉದ್ದಿಮೆಗಳಿಗೆ ಬಿಬಿಎಂಪಿ ಬೀಗ: 70 ಸಾವಿರ ದಂಡ

ಬೆಂಗಳೂರು[ಜ.12]: ಬಿಬಿಎಂಪಿಯ ಪಶ್ಚಿಮ ವಲಯ ಅಧಿಕಾರಿಗಳು ಅನಧಿಕೃತ ವಾಣಿಜ್ಯ ಚಟುವಟಿಕೆಗಳಿಗೆ ಬೀಗ ಹಾಕುವ ಕಾರ್ಯಾಚರಣೆ ಮುಂದುವರಿಸಿದ್ದು, ಗುರುವಾರ ಡಾ.ರಾಜ್‌ಕುಮಾರ್‌ ರಸ್ತೆಯಲ್ಲಿ ಅಂಗಡಿ, ಮಳಿಗೆ, ಉದ್ದಿಮೆ ಸೇರಿದಂತೆ ಒಟ್ಟು 16 ವಾಣಿಜ್ಯ ಚಟುವಟಿಕೆಗಳನ್ನು ಮುಚ್ಚಿಸಿ .70 ಸಾವಿರ ದಂಡ ವಿಧಿಸಿದ್ದಾರೆ.

ಮಧ್ಯಾಹ್ನ ಕಾರ್ಯಾಚರಣೆಗಿಳಿದ ಪಶ್ಚಿಮ ವಲಯ ಅಧಿಕಾರಿಗಳು, ರಾಜ್‌ಕುಮಾರ್‌ ರಸ್ತೆಯಲ್ಲಿ ಕಟ್ಟಡಗಳ ತಳ ಮಹಡಿಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಂಡಿಗೋ ಡಿಜಿಟಲ್‌, ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಮೂರು ಉದ್ದಿಮೆಗಳಿಗೆ ಬೀಗ ಹಾಕಿದರು. ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್‌ ಬಳಸುತ್ತಿದ್ದ ಸಾಗರ್‌ ಫಾಸ್ಟ್‌ಫುಟ್‌ ಹೋಟೆಲ್‌ಗೆ .25 ಸಾವಿರ, ಕೆಫೆ ಕಾಫಿ ಡೇಗೆ .25 ಸಾವಿರ ಮತ್ತು ಪಾದಾಚಾರಿ ಮಾರ್ಗ ಒತ್ತುವರಿ ಮಾಡಿದ್ದ ಹುಂಡೈ ಶೋರೂಂಗೆ .10 ಸಾವಿರ, ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಿಸದ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳದ ಕಾರಣಕ್ಕೆ ಫ್ರೆಶ್‌ ಮೆನು ಎಂಬ ಆನ್‌ಲೈನ್‌ ಫುಡ್‌ ಔಟ್‌ಲೆಟ್‌ಗೆ .10 ಸಾವಿರ ದಂಡ ವಿಧಿಸಿದರು.

ನಂತರ ಮಹದೇವ ಎಂಟರ್‌ಪ್ರೈಸಸ್‌, ಜಿಯು.ಗ್ಲಾಸ್‌ ಆ್ಯಂಡ್‌ ಪ್ಲೈವುಡ್ಸ್‌, ಪಾನಿವೆಡ್ಸ್‌ ಪೂರಿ ಚಾಟ್ಸ್‌ ಸೆಂಟರ್‌, ಆರ್ಕಿಡ್‌ ಎಂಟರ್‌ಪ್ರೈಸಸ್‌ ಸೇರಿದಂತೆ ಒಟ್ಟು 10 ವಿವಿಧ ಮಳಿಗೆಗಳನ್ನು ಪರವಾನಗಿ ಪಡೆಯದೆ ನಡೆಸುತ್ತಿರುವುದು ಕಂಡುಬಂದಿದ್ದರಿಂದ ಅಧಿಕಾರಿಗಳು ಬೀಗ ಹಾಕಿ​ಸಿ​ದರು.

click me!