ಜಿಲ್ಲೆಯಾಗಿ 15 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಜ.12ರ ಗುರುವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 105 ಉದ್ಯೋಗದಾತ ಸಂಸ್ಥೆಗಳು ನೋಂದಣಿ ಮಾಡಿಕೊಂಡು 12 ಸಾವಿರಕ್ಕೂ ಹೆಚ್ಚು ಉದ್ಯೋಗದ ಭರವಸೆ ನೀಡಿವೆ.
ವರದಿ- ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಬಳ್ಳಾಪುರ (ಜ.11): ಜಿಲ್ಲೆಯಾಗಿ 15 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಜ.12ರ ಗುರುವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 105 ಉದ್ಯೋಗದಾತ ಸಂಸ್ಥೆಗಳು ನೋಂದಣಿ ಮಾಡಿಕೊಂಡು 12 ಸಾವಿರಕ್ಕೂ ಹೆಚ್ಚು ಉದ್ಯೋಗದ ಭರವಸೆ ನೀಡಿರುವುದು ಜಿಲ್ಲೆಯ ನಿರುದ್ಯೋಗ ಯುವ ಜನತೆಗೆ ಸಂತಸ ತಂದಿದೆ.
ಮೊದಲಿನಿಂದಲೂ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ತೀವ್ರ ಬೇಡಿಕೆ ಇದ್ದು, ಜಿಲ್ಲೆಯಾಗಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಒಂದು ವಾರದ ಅದ್ಧೂರಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮುಂದಾಗಿದ್ದರು. ಈ ಉತ್ಸವದಲ್ಲಿ ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿಯ ಅನಾವರಣದ ಜೊತೆಗೆ ಆಗಬೇಕಿರುವ ಅಭಿವೃದ್ಧಿಯ ಕುರಿತೂ ಸಚಿವರು ದೂರದೃಷ್ಟಿ ಹರಿಸಿರುವುದು ವಿಶೇಷ. ಜಿಲ್ಲೆಯನ್ನು ಪ್ರಮುಖವಾಗಿ ಕಾಡುತ್ತಿದ್ದ ನೀರಾವರಿ ಸಮಸ್ಯೆಯೆನ್ನು ಎಚ್ಎನ್. ವ್ಯಾಲಿ ಯೋಜನೆ ಅನುಷ್ಠಾನದ ಮೂಲಕ ಪರಿಹರಿಸಲು ಸಚಿವರು ಶ್ರಮಿಸಿದ್ದು, ಇದರೊಂದಿಗೆ ವರುಣನೂ ಕೃಪೆ ತೋರಿದ ಪರಿಣಾಮ ಪ್ರಸ್ತುತ ವರ್ಷ ಜಿಲ್ಲೆಯ ಅಷ್ಟೂ ಕೆರೆಗಳು ತುಂಬಿ ಕೋಡಿ ಹರಿದವು. ಇದರಿಂದಾಗಿ ಜಿಲ್ಲೆ ಪ್ರಸ್ತುತ ಸಮೃದ್ಧಿಯಾಗಿದ್ದು, ಮೂರು ದಶಕಗಳ ಹಿಂದೆ ಬತ್ತಿಹೋಗಿದ್ದ ತೆರೆದ ಬಾವಿಗಳಲ್ಲಿಯೂ ನೀರು ಉಕ್ಕುವಂತಾಗಿದೆ.
Chikkaballapur Utsav: ಸುಧಾಕರ್ ವ್ಯಕ್ತಿಯಲ್ಲ, ಶಕ್ತಿ; ಭವಿಷ್ಯದ ನಾಯಕ : ವಸತಿ ಸಚಿವ ಸೋಮಣ್ಣ
ನಿರುದ್ಯೋಗ ಸಮಸ್ಯೆಗೆ ಪರಿಹಾರ: ನೀರಾವರಿ ಸಮಸ್ಯೆಯ ನಂತರ ಪ್ರಮುಖವಾಗಿ ಕಾಡುತ್ತಿರುವುದು ನಿರುದ್ಯೋಗ. ಹಾಗಾಗಿ ಈ ಬಗ್ಗೆಯೂ ದೃಷ್ಟಿ ಹಾಯಿಸಿರುವ ಸಚಿವರು ನೂತನ ತಾಲೂಕು ಮಂಚೇನಹಳ್ಳಿ ವ್ಯಾಪ್ತಿಯನ್ನು ಈಗಾಗಲೇ ಕೈಗಾರಿಕಾ ವಲಯ ಎಂದು ಘೋಷಿಸಿ, ಇದಕ್ಕೆ ಅಗತ್ಯವಿರುವ ಭೂಮಿ ವಶಕ್ಕೆ ಪಡೆಯಲು ಅಗತ್ಯ ಕ್ರಮಗಳಿಗೆ ಮುಂದಾಗಿದ್ದಾರೆ. ಅಲ್ಲದೆ ಭೂಮಿ ವಶಕ್ಕೆ ಪಡೆದು ಪ್ರಮುಖ ಕೈಗಾರಿಕೆಗಳು ಜಿಲ್ಲೆಗೆ ಬರುವುದಕ್ಕೆ ಕಾಲವಕಾಶದ ಅಗತ್ಯವಿರುವ ಹಿನ್ನೆಲೆಯಲ್ಲಿ ಉದ್ಯೊಗ ಮೇಳದ ಮೂಲಕ ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮುಂದಾಗಿದ್ದಾರೆ.
12 ಸಾವಿರ ಉದ್ಯೋಗಗಳ ಭರ್ತಿ: ಸ್ವಾಮಿ ವಿವೇಕಾನಂದರ ಜಯಂತಿಯಾದ ಜ.12 ರಂದು ಯುವ ಜನತೆಗೆ ಸ್ಪೂರ್ತಿದಾಯಕರಾದ ದಿನವಾಗಿದೆ. ಹೀಗಾಗಿ, ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಜನತೆಗೆ ಉದ್ಯೋಗ ಕಲ್ಪಿಸುವುದು ಸಚಿವರ ಉದ್ಧೇಶವಾಗಿದೆ. ಇದರ ಅಂಗವಾಗಿಯೇ ನಗರ ಹೊರವಲಯದ ಎಸ್ ಜೆಸಿಐಟಿ ಕಾಲೇಜಿನ ಆವರಣದಲ್ಲಿ ಗುರುವಾರ ಉದ್ಯೋಗ ಮೇಳ ಆಯೋಜಿಸಲಾಗಿದ್ದು, 105 ಉದ್ಯೋಗದಾತ ಸಂಸ್ಥೆಗಳು 12 ಸಾವಿರಕ್ಕೂ ಹೆಚ್ಚು ಉದ್ಯೋಗಗಳಿಗೆ ಬೇಡಿಕೆ ಇಟ್ಟಿವೆ. ಎಲ್ಲ ಹಂತದ ವಿದ್ಯಾಭ್ಯಾಸ ಹೊಂದಿರುವವರಿಗೂ ಈ ಮೇಳದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾನಾ ಕಾರಣಗಳಿಂದ ಹೆಚ್ಚಿನ ವ್ಯಾಸಂಗ ಮಾಡಲಾರದೆ ಶಾಲಾ ಕಾಲೇಜುಗಳನ್ನು ಬಿಟ್ಟವರಿಗೂ ವಿಫುಲ ಅವಕಾಶಗಳಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಯುವಜನತೆಯಲ್ಲಿ ಮನವಿ ಮಾಡಿದ್ದಾರೆ.
ಸುಧಾಕರ್‌ಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ: ಸಚಿವ ಎಸ್.ಟಿ.ಸೋಮಶೇಖರ್
ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ: 7ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೂ ವ್ಯಾಸಂಗ ಮಾಡಿದ ಎಲ್ಲರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ. ಅಲ್ಲದೆ ಪ್ರಮುಖವಾಗಿ ಮಹಿಳಾ ಅಭ್ಯ ರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಟೈಲರಿಂಗ್ ನಂತಹ ಅವಕಾಶಗಳಿಗೆ ಒತ್ತು ನೀಡಲಾಗಿದೆ. ಕಡಿಮೆ ವಿದ್ಯಾಭ್ಯಾಸ ಹೊಂದಿರುವವರಿಗಾಗಿ ಚಾಲಕ ಹುದ್ದೆಗಳಿಗೂ ಅವಕಾಶ ಕಲ್ಪಿಸಿರುವುದು ಮೇಳದ ವಿಶೇಷವಾಗಿದೆ.
ಅಲ್ಲದೆ ಐಟಿಐ, ಇಂಜಿನಿಯರಿಂಗ್ ನಂತಹ ಯುವಕರಿಗೆ ಪ್ರಮುಖ ಸಂಸ್ಥೆಗಳಲ್ಲಿ ಅವಕಾಶಗಳಿದ್ದು, ಜಿಲ್ಲೆಯ ಎಲ್ಲ ತಾಲೂಕಿನ ವಿದ್ಯಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉದ್ಯೋಗಗಳನ್ನು ಪಡೆಯುವಂತೆ ಅವರು ಕೋರಿದ್ದಾರೆ.
ಯಾವ ದಾಖಲೆಗಳು ಅಗತ್ಯ? : ಉದ್ಯೋಗ ಮೇಳಕ್ಕೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸದ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳು, ಇತ್ತೀಚಿನ ಭಾವಚಿತ್ರಗಳು, ಆಧಾರ್ ಕಾರ್ಡ್ ಮತ್ತು ಸ್ವ ವಿವರದೊಂದಿಗೆ ಹಾಜರಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ನೋಂದಾಯಿಸಿಕೊಂಡ ಅಭ್ಯರ್ಥಿಗಳ ವಿದ್ಯಾಭ್ಯಾಸ, ಅನುಭವದ ಆಧಾರದ ಮೇಲೆ ಅವರಿಗೆ ಉದ್ಯೋಗದಾತ ಸಂಸ್ಥೆಗಳು ಉದ್ಯೋಗ ನೀಡಲಿವೆ. ಕಳೆದ ಎರಡು ವಾರಗಳಿಂದ ಆನ್ ಲೈನ್ ಮೂಲಕ ಮತ್ತು ಜಿಲ್ಲಾಡಳಿತ ಭವನದ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಮೇಳಕ್ಕಾಗಿ ನೋಂದಾಯಿಸಿಕೊಂಡಿದ್ದು, ಗುರುವಾರ ನಡೆಯಲಿರುವ ಉದ್ಯೋಗ ಮೇಳ ಸಂಪೂರ್ಣ ಯಶಸ್ವಿಯಾಗಲಿದೆ. ಜಿಲ್ಲೆಗೆ ಒದಗಿಬಂದಿರುವ ಈ ಅವಕಾಶವನ್ನು ಜಿಲ್ಲೆಯ ನಿರುದ್ಯೋಗ ಯುವಕ, ಯುವತಿಯರು ಸದುಪಯೋಗಪಡಿಸಿಕೊಂಡು ಉದ್ಯೋಗ ಪಡೆಯುವಂತೆ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.