ಮುನಿರಾಬಾದ್ ನೀರಾವರಿ ಕಚೇರಿ ಮುಂದೆ ವಿಷ ಸೇವಿಸಿದ ನೌಕರನ ಸ್ಥಿತಿ ಗಂಭೀರ| ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು| 25 ದಿನಗೂಲಿ ನೌಕಕರಿಗೆ ಕಳೆದ 17 ತಿಂಗಳಿಂದ ಸಿಗದ ವೇತನ|
ಮುನಿರಾಬಾದ್(ಮೇ.09): 17 ತಿಂಗಳು ವೇತನ ನೀಡಿಲ್ಲ ಎಂದು ಮನನೊಂದು ನೀರಾವರಿ ಇಲಾಖೆಯ ದಿನಗೂಲಿ ನೌಕರನೊಬ್ಬ ಇಲ್ಲಿಯ ಇಲಾಖೆಯ ಅಧೀಕ್ಷಕ ಅಭಿಯಂತರ ಕಚೇರಿಯ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ತೀವ್ರ ಅಸ್ವಸ್ಥಗೊಂಡ ಅವರಿಗೆ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿಗೆ ಸಮೀಪದ ಹಿರೇಹಳ್ಳ ಯೋಜನೆಯ ವ್ಯಾಪ್ತಿಯಲ್ಲಿ ಪಾಮಣ್ಣ ಬಸಪ್ಪ ಚಲವಾದಿ ದಿನಗೂಲಿ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಮಣ್ಣ ಸೇರಿದಂತೆ 25 ಜನರಿಗೆ ವೇತನ ನೀಡಿರಲಿಲ್ಲ ಎನ್ನಲಾಗಿದೆ. ಈ ಕುರಿತು ಚರ್ಚಿಸಲು ಪಾಮಣ್ಣ ಹಾಗೂ ಸಹೋದ್ಯೋಗಿಗಳು ಶುಕ್ರವಾರ ಮುನಿರಾಬಾದ್‌ನ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರ ಕಾರ್ಯಾಲಯಕ್ಕೆ ಆಗಮಿಸಿದ್ದರು.
ಗಂಗಾವತಿ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಪ್ರತ್ಯಕ್ಷ: ಕಕ್ಕಾಬಿಕ್ಕಿಯಾದ ಜನತೆ..!
ಈ ಸಂದರ್ಭದಲ್ಲಿ ಹಿರೇಹಳ್ಳ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ ಬಂಡಿವಡ್ಡರ ಸಹ ಉಪಸ್ಥಿತರಿದ್ದರು. ಕಾರ್ಮಿಕರು ಅಧೀಕ್ಷಕ ಅಭಿಯಂತರರಾದ ರಾಠೋಡ್ ಮುಂದೆ ತಮ್ಮ ಸಮಸ್ಯೆ ಪ್ರಸ್ತಾಪಿಸಿದರು. ಆದರೆ ಯಾವುದೇ ರೀತಿಯ ಸ್ಪಂದನೆ, ಪರಿಹಾರ ಸಿಗದಿದ್ದರಿಂದ ಮನನೊಂದು ಕಚೇರಿಯ ಹೊರ ಬಂದ ಪಾಮಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ತಕ್ಷಣಕ್ಕೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಆರೋಪ:
ದಿನಗೂಲಿ ಕಾರ್ಮಿಕ ಪಾಮಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ತೀರಾ ದುರದೃಷ್ಟಕರ. ಇದಕ್ಕೆಲ್ಲ ಮೂಲ ಕಾರಣ ಕಿನ್ನಾಳ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಸವರಾಜ ಬಂಡಿವಡ್ಡರ ಎಂದು ಕಾರ್ಮಿಕ ಮುಖಂಡ ಪಂಪಾಪತಿ ರಾಟಿ ಆರೋಪಿಸಿದ್ದಾರೆ.
ಸಂಸದ, ಶಾಸಕರ ಪತ್ರಕ್ಕೆ ಕಿಮ್ಮತ್ತಿಲ್ಲ:
ಈ ಮಧ್ಯೆ ಸಂಸದ ಸಂಗಣ್ಣ ಕರಡಿ ಮತ್ತು ಶಾಸಕರಾದ ಬಸವರಾಜ ಹಿಟ್ನಾಳ್, ಪರಣ್ಣ ಮುನವಳ್ಳಿ ಅವರು ಕಳೆದ ಜನವರಿಯಲ್ಲಿ ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದು, ಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾಗಿರುವ ವೇತನದಲ್ಲಿ ಬಸವರಾಜ ಬಂಡಿವಡ್ಡರು ಅಕ್ರಮವೆಸಗಿರುವ ಕುರಿತು ದೂರು ಬಂದಿದೆ. ಕಾರ್ಮಿಕರಿಗೆ ವೇತನ ಪಾವತಿಸದೆ ಬೇರೆಯವರಿಗೆ ವೇತನ ನೀಡುತ್ತಿರುವುದು, ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದೂ ಸಹ ಕಂಡು ಬರುತ್ತಿದೆ. ಅವರನ್ನು ತಕ್ಷಣ ಅಮಾನಕು ಮಾಡಿ, ತನಿಖೆ ನಡೆಸುವಂತೆ ಪತ್ರ ಬರೆದಿದ್ದರೂ ಇನ್ನೂವರೆಗೂ ಕ್ರಮ ಕೈಗೊಂಡಿಲ್ಲ ಎಂದು ಪಂಪಾಪತಿ ರಾಟಿ ಆರೋಪಿಸಿದ್ದಾರೆ.
ಅಮಾನತ್ತಿನಲ್ಲಿಡಿ:
ದಿನಗೂಲಿ ಕಾರ್ಮಿಕನಿಗೆ ಸಂಬಳ ಕೊಡದೇ ಕಿರುಕಳ ನೀಡಿರುವ ಸಹಾಯಕ ಕಾರ್ಯಪಾಲಕ ಅಭಿಯಂತ ಬಂಡಿವಡ್ಡರರನ್ನು ತಕ್ಷಣ ಅಮಾನತು ಮಾಡಬೇಕು ಮತ್ತು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಆರತಿ ತಿಪ್ಪಣ್ಣ ಆಗ್ರಹಿಸಿದ್ದಾರೆ.