ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್, ಧಾರವಾಡ ‘ಕೈ’ ನಾಯಕರ ಮನೆ ಮೇಲೆ ದಾಳಿ
ಹಾವೇರಿ/ಧಾರವಾಡ(ಮೇ.09): ಕಾಂಗ್ರೆಸ್ ನಾಯಕರ ಮನೆಗಳ ಮೇಲಿನ ಐಟಿ ದಾಳಿ ಮುಂದುವರಿದಿದ್ದು, ಸೋಮವಾರ ಶಿಗ್ಗಾಂವಿ ಮತ್ತು ಧಾರವಾಡಗಳಲ್ಲಿನ ಕಾಂಗ್ರೆಸ್ ನಾಯಕರ ಮನೆ, ಹೋಟೆಲ್‌ಗಳ ಮೇಲೆ ದಾಳಿ ನಡೆಸಲಾಗಿದೆ.
ಸಿಎಂ ಪ್ರತಿಸ್ಪರ್ಧಿ, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್‌ಖಾನ್ ಪಠಾಣ್‌ಗೆ ಸೇರಿದ ಹೋಟೆಲ್ ಮೇಲೆ ದಾಳಿ ನಡೆಸಲಾಗಿದೆ. ಹಾವೇರಿಯ ಬಂಕಾಪುರ ಟೋಲ್ ಬಳಿ ಇರುವ ಎನ್‌ಎಚ್-4 ಗ್ರ್ಯಾಂಡ್ ಹೋಟೆಲ್ ಮೇಲೆ ದಾಳಿ ನಡೆದಿದೆ.
PM MODI ROADSHOW: ಹಾವೇರಿಯಲ್ಲಿ ಮೊಳಗಿದ ಮೋದಿ, ಬಜರಂಗಬಲಿ ಘೋಷಣೆ!
ಇದೇ ವೇಳೆ, ಧಾರವಾಡದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಹು-ಧಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಆಪ್ತ, ರಾಬರ್ಟ್ ದದ್ದಾಪುರಿ ಅವರ ವಿದ್ಯಾಗಿರಿ ಬಡಾವಣೆಯ ವಿವೇಕಾನಂದ ನಗರದಲ್ಲಿರುವ ಮನೆ ಮೇಲೆ ಸೋಮವಾರ ಸಂಜೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಮುಖಂಡ ದೇವಕಿ ಯೋಗಾನಂದ ಅವರ ಹುಬ್ಬಳ್ಳಿಯ ನಿವಾಸದ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಸುಮಾರು 3 ಗಂಟೆ ಕಾಲ ದಾಖಲೆಗಳ ಪರಿಶೀಲನೆ ನಡೆಸಿದರು.
ಇತ್ತೀಚೆಗಷ್ಟೇ ವಿನಯ ಕುಲಕರ್ಣಿ ಆಪ್ತರಾದ ಪ್ರಶಾಂತ ಕೇಕರೆ, ಈಶ್ವರ ಶಿವಳ್ಳಿ, ಅರವಿಂದ ಏಗನಗೌಡ ಸೇರಿದಂತೆ 25ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.