* ರಾಜಣ್ಣ ಕೊರವಿ ಬಿಜೆಪಿ ಸೇರಿದರೆ, ಕೋನರಡ್ಡಿ ನವಲಗುಂದಕ್ಕೆ ಸೀಮಿತ
* ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದಲ್ಲಿ ಅಧ್ಯಕ್ಷರೂ ಇಲ್ಲ
* ಕುಮಾರಸ್ವಾಮಿ ಪಕ್ಷ ಸಂಘಟನೆಯತ್ತ ಗಮನಹರಿಸುತ್ತಾರೆಯೇ?
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜು.02): ಮಹಾನಗರ ಪಾಲಿಕೆ ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಆಗುವ ಸಾಧ್ಯತೆ ಇದೆ. ಆದರೆ ಜೆಡಿಎಸ್‌ನಲ್ಲಂತೂ ಏನೊಂದು ತಯಾರಿಯೂ ಇಲ್ಲ. ಮಹಾನಗರ ಜಿಲ್ಲಾಧ್ಯಕ್ಷರ ನೇಮಕವನ್ನೂ ಈವರೆಗೂ ಮಾಡಿಲ್ಲ. ಪಾಲಿಕೆ ಚುನಾವಣೆ ಎದುರಿಸುವುದೇ ಈ ಪಕ್ಷಕ್ಕೆ ದೊಡ್ಡ ಸವಾಲಾದಂತಾಗಿದೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಈ ಪಕ್ಷ ಕೊಂಚ ಉಸಿರಾಡುತ್ತಿತ್ತು. ಪಾಲಿಕೆ ಪ್ರತಿ ಚುನಾವಣೆಯಲ್ಲೂ 8-10 ಸ್ಥಾನಗಳನ್ನು ಗೆಲ್ಲುವಷ್ಟುಸಂಘಟನೆ ಇತ್ತು. ಪಾಲಿಕೆಯಲ್ಲಿ ವಿರೋಧ ಪಕ್ಷವಾಗಿ ಅಲ್ಲದಿದ್ದರೂ ತನ್ನ ಅಸ್ತಿತ್ವವನ್ನು ಕಳೆದ 30 ವರ್ಷಗಳಿಂದಲೂ ಸಾಬೀತುಪಡಿಸಿಕೊಂಡು ಬರುವಲ್ಲಿ ತೆನೆ ಹೊತ್ತ ಮಹಿಳೆ ಯಶಸ್ವಿಯಾಗಿದ್ದಳು. ಆದರೆ ಈ ಸಲ ಆ ಪರಿಸ್ಥಿತಿಯೇ ಇಲ್ಲ. ಅಸ್ತಿತ್ವ ಉಳಿಯುತ್ತದೆಯೋ ಇಲ್ಲವೋ ಎಂಬುದು ಆ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಎದುರಾಗಿರುವುದು ಸ್ಪಷ್ಟ
ಕಾರಣವೇನು?
ಕಳೆದ 30 ವರ್ಷಗಳಿಂದ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದ ರಾಜಣ್ಣ ಕೊರವಿ. ಮಹಾನಗರದಲ್ಲಿ ಇವರೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಎರಡು ಬಾರಿ ಪಾಲಿಕೆ ಸದಸ್ಯರಾಗಿದ್ದರಲ್ಲದೇ, ತಮ್ಮೊಂದಿಗೆ 8-10 ಜನರನ್ನು ಪಾಲಿಕೆಗೆ ಚುನಾಯಿಸುವಷ್ಟುಶಕ್ತಿ ಹೊಂದಿದ್ದ ಸಂಘಟನಾ ಚತುರರು. ಮಹಾನಗರ ಜಿಲ್ಲಾಧ್ಯಕ್ಷರಾಗಿದ್ದ ರಾಜಣ್ಣ, ಕಳೆದ ಒಂದು ವರ್ಷದ ಹಿಂದೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇವರೊಂದಿಗೆ ನೂರಾರು ಜನ ಬೆಂಬಲಿಗರು ಬಿಜೆಪಿ ಸೇರಿದ್ದುಂಟು. ಇದರಿಂದಾಗಿ ಜೆಡಿಎಸ್‌ನಲ್ಲೀಗ ಕಾರ್ಯಕರ್ತರೂ ಇಲ್ಲ. ನಾಯಕರೂ ಇಲ್ಲದಂತಾಗಿರುವುದು ಒಂದೆಡೆಯಾಗಿದ್ದರೆ, ಇವರು ಬಿಜೆಪಿ ಸೇರಿದಾಗಿನಿಂದ ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನ ಖಾಲಿಯೇ ಉಳಿದಿರುವುದು ಇನ್ನೊಂದೆಡೆಯಾಗಿದೆ. ಪಾಲಿಕೆ ಚುನಾವಣೆಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷರದ್ದೇ ಹೆಚ್ಚಿನ ಜವಾಬ್ದಾರಿ. ಆದರೆ ಆ ಸ್ಥಾನವೇ ಖಾಲಿಯುಳಿದಂತಾಗಿದೆ. ಇನ್ನೂ ಮಾಜಿ ಶಾಸಕರೂ ಆದ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ನವಲಗುಂದ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹೀಗಾಗಿ ಪಾಲಿಕೆ ಚುನಾವಣೆಯ ಜವಾಬ್ದಾರಿ ಪಕ್ಷದಲ್ಲಿ ಯಾರಿಗೆ ಸೇರುತ್ತದೆ ಎಂಬುದು ಕೂಡ ತಿಳಿಯದೇ ಅಳಿದುಳಿದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ಹುಬ್ಬಳ್ಳಿ: ಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ಸಿಗೆ ನಿರಾಸಕ್ತಿ..!
ಅಭ್ಯರ್ಥಿಗಳೂ ಇಲ್ಲ:
ಹಾಗೆ ನೋಡಿದರೆ ಜೆಡಿಎಸ್‌ನಿಂದ ಸ್ಪರ್ಧೆ ಬಯಸಿ ಟಿಕೆಟ್ ಆಕಾಂಕ್ಷಿಗಳು ಒತ್ತಟ್ಟಿಗಿರಲಿ, 82 ವಾರ್ಡ್‌ಗಳಿಗೆ ಸ್ಪರ್ಧಿಸಬಹುದಾದಂತಹ ಅಭ್ಯರ್ಥಿಗಳು ಸಿಗುವುದು ಈ ಪಕ್ಷಕ್ಕೆ ಕಷ್ಟವೆನ್ನಲಾಗುತ್ತಿದೆ. ಆದರೂ ಕೆಲ ಹಳೆ ಕಾರ್ಯಕರ್ತರು, ಪಕ್ಷದ ಟಿಕೆಟ್‌ಗಾಗಿ ಯಾರನ್ನು ಸಂಪರ್ಕಿಸಬೇಕು ಎಂಬುದು ಗೊತ್ತಾಗದೇ ಗೊಂದಲಕ್ಕೊಳಗಾಗಿದ್ದಾರೆ.
ಪಾಲಿಕೆ ಚುನಾವಣೆ ಬಗ್ಗೆ ಪಕ್ಷದ ಮುಖಂಡರನ್ನು ಕೇಳಿದರೆ, ಪಾಲಿಕೆ ಚುನಾವಣೆ ಬಗ್ಗೆ ಇನ್ನೂ ತಯಾರಿ ನಡೆಸಿಲ್ಲ. ಇನ್ನೆರಡ್ಮೂರು ದಿನಗಳಲ್ಲಿ ಮಹಾನಗರ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುತ್ತೇವೆ. ಆ ಬಳಿಕ ತಯಾರಿ ಆರಂಭಿಸುತ್ತೇವೆ ಎಂದು ತಿಳಿಸುತ್ತಾರೆ.
ಏನಾಯ್ತು ಎಚ್‌ಡಿಕೆ ಪಣ:
ಇನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 2018ರಲ್ಲಿ ಹುಬ್ಬಳ್ಳಿಯಲ್ಲೇ ಮನೆ ಮಾಡಿ ದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಪಣ ತೊಟ್ಟಿದ್ದರು. ಅತ್ತ ಅಧಿಕಾರ ಸಿಗುತ್ತಿದ್ದಂತೆ ಇತ್ತ ಮನೆ ಖಾಲಿ ಮಾಡಿಕೊಂಡು ಹೋದರು. ಮತ್ತೆ ಸಂಘಟನೆ ಮಾಡುತ್ತೇನೆ ಎಂದುಕೊಂಡು ಹುಬ್ಬಳ್ಳಿಯತ್ತ ತಲೆ ಹಾಕಿಲ್ಲ. ಇದು ಕೂಡ ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿದೆ.
ಒಟ್ಟಿನಲ್ಲಿ ತೆನೆ ಹೊತ್ತ ಮಹಿಳೆಗೆ ತೆನೆಯ ಭಾರವೇ ಇಲ್ಲದಂತಾಗಿರುವುದಂತೂ ಸತ್ಯ. ಇನ್ನಾದರೂ ಕುಮಾರಸ್ವಾಮಿ ಪಕ್ಷ ಸಂಘಟನೆಯತ್ತ ಕೊಂಚ ಗಮನಹರಿಸುತ್ತಾರೆಯೇ? ಎಂಬುದು ಆ ಪಕ್ಷದ ಕಾರ್ಯಕರ್ತರ ಪ್ರಶ್ನೆ.
ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷರ ನೇಮಕ ಇನ್ನೂ ಮಾಡಿಲ್ಲ. ಇನ್ನೆರಡ್ಮೂರು ದಿನಗಳಲ್ಲಿ ನೇಮಕ ಮಾಡಲಾಗುವುದು. ಪಾಲಿಕೆ ಚುನಾವಣೆ ತಯಾರಿ ಇನ್ನೂ ಪ್ರಾರಂಭಿಸಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ತಯಾರಿ ಆರಂಭಿಸುತ್ತೇವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.