ಡಿಕೆಶಿ ಬಳಿಕ ಡಿ.ಕೆ.ಸುರೇಶ್‌ಗೂ ಶುರುವಾಗಿದೆ ಬಿಸಿ?

By Kannadaprabha NewsFirst Published Sep 22, 2019, 7:43 AM IST
Highlights

ಜಾರಿ ನಿರ್ದೇಶನಾಲಯ (ಇ.ಡಿ.) ಈಗ ಸಹೋದರ ಡಿ.ಕೆ.ಸುರೇಶ್‌ ಕಡೆಗೂ ತನ್ನ ತನಿಖೆ ದಿಕ್ಕು ತಿರುಗಿಸುವ ಸುಳಿವು ನೀಡಿದೆ. 

ಎಂ.ಅ​ಫ್ರೋಜ್ ಖಾನ್‌

ರಾಮ​ನ​ಗರ [ಸೆ.22]:  ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಆರೋಪದಲ್ಲಿ ತಿಹಾರ್‌ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆಪ್ತರಲ್ಲಿ ಒಬ್ಬೊಬ್ಬರನ್ನಾಗಿಯೇ ಕರೆಸಿ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಈಗ ಸಹೋದರ ಡಿ.ಕೆ.ಸುರೇಶ್‌ ಕಡೆಗೂ ತನ್ನ ತನಿಖೆ ದಿಕ್ಕು ತಿರುಗಿಸುವ ಸುಳಿವು ನೀಡಿದೆ. ಈಗಾಗಲೇ ಡಿ.ಕೆ.ಶಿವಕುಮಾರ್‌ ಪುತ್ರಿ ಐಶ್ವರ್ಯಾ, ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಸೇರಿ ಹಲವರ ವಿಚಾರಣೆ ನಡೆಸಿದ ಇ.ಡಿ. ತನಿಖೆಯ ಪ್ರತಿ ಹಂತದಲ್ಲೂ ಸಹೋದರನ ಜತೆ ದೆಹಲಿಯಲ್ಲಿ ಬಂಡೆಯಂತೆ ನಿಂತಿರುವ ಸಂಸದ ಡಿ.ಕೆ.ಸುರೇಶ್‌ರನ್ನೂ ಕೂರಿಸಿಕೊಂಡು ವಿಚಾರಣೆ ನಡೆಸುವ ಸಾಧ್ಯತೆಗಳೂ ದಟ್ಟವಾಗಿವೆ.

ಡಿ.ಕೆ.ಶಿವಕುಮಾರ್‌ ಸಂಕಷ್ಟಕ್ಕೆಲ್ಲ ದೆಹಲಿಯ ಫ್ಲ್ಯಾಟ್‌ಗಳಲ್ಲಿ ಸಿಕ್ಕ 8.5 ಕೋಟಿ ರು. ನಗದು ಪ್ರಕರಣವೇ ಮೂಲ. ಆ ಪ್ರಕರಣವನ್ನು ಮುಂದಿಟ್ಟುಕೊಂಡೇ ಅವರ ಆದಾಯ, ಹಣಕಾಸು ವ್ಯವಹಾರಗಳ ಮೂಲಗಳನ್ನು ಇ.ಡಿ. ಕೆದಕುತ್ತಾ ಹೋಗುತ್ತಿದೆ. ದೆ​ಹಲಿಯಲ್ಲಿ ಆದಾಯ ತೆರಿಗೆ ಅಧಿ​ಕಾ​ರಿ​ಗಳು ವಶ ಪಡಿ​ಸಿ​ಕೊಂಡಿ​ರುವ ನಗದಲ್ಲಿ 21.38 ಲಕ್ಷ ರು. ತನ್ನದೇ ಎಂದು ಡಿ.ಕೆ.​ಸು​ರೇಶ್‌ ಈಗಾಗಲೇ ಘೋಷಿಸಿಕೊಂಡಿದ್ದಾರೆ. 2019ರ ಲೋಕ​ಸಭಾ ಚುನಾ​ವಣೆ ವೇಳೆ ಮಾ.26ರಂದು ಚುನಾ​ವಣಾ ಆಯೋ​ಗಕ್ಕೆ ಸಲ್ಲಿ​ಸಿ​ರುವ ಅಫಿ​ಡ​ವಿಟ್‌ನಲ್ಲಿ ದೆಹಲಿ ಮನೆ​ಯಲ್ಲಿ ತಮಗೆ ಸೇರಿದ 21.38 ಲಕ್ಷ ರು. ನಗದನ್ನು ಆದಾಯ ತೆರಿಗೆ ಇಲಾಖೆ ಮುಟ್ಟು​ಗೋಲು ಹಾಕಿ​ಕೊಂಡಿದೆ ಎಂದು ಡಿ.ಕೆ.ಸುರೇಶ್‌ ಪ್ರಮಾ​ಣೀ​ಕ​ರಿ​ಸಿ​ದ್ದಾರೆ.

ಆದಾಯ ತೆರಿಗೆ ಇಲಾಖೆ 2017ರಲ್ಲಿ ನವ​ದೆ​ಹಲಿಯ ಸಫ್ದರ್‌ ಜಂಗ್‌ ಎನ್‌ ಕ್ಲೇವ್‌ನಲ್ಲಿ​ರುವ ಫ್ಲ್ಯಾಟ್‌ಗಳಲ್ಲಿ 8.5 ಕೋಟಿ ರು. ನಗದು ಪತ್ತೆ ಹಚ್ಚಿತ್ತು. ಈ ಹಣ ಡಿ.ಕೆ.​ಶಿ​ವ​ಕು​ಮಾರ್‌ಗೆ ಸೇರಿದ್ದು ಎಂದು ಇ​.ಡಿ ಪರ ವಕೀಲ ನಟ​ರಾಜ್‌ ವಾದಿ​ಸು​ತ್ತಿ​ದ್ದಾರೆ. ಆದರೆ, ಡಿ.ಕೆ. ಶಿವಕುಮಾರ್‌ ಪರ ವಕೀಲರು ಮಾತ್ರ ಆ ಹಣದಲ್ಲಿ 41 ಲಕ್ಷ ರು. ಮಾತ್ರ ಡಿ.ಕೆ.ಶಿವಕುಮಾರ್‌ಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ. ಜತೆಗೆ, ಇ.ಡಿ.ಪರ ವಕೀಲರು ಕೂಡ ಡಿ.ಕೆ.ಸುರೇಶ್‌ ಹೆಸರಲ್ಲಿರುವ 27 ಆಸ್ತಿಗಳ ವಿಚಾರವನ್ನೂ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಿದ್ದು, ಇದರಲ್ಲಿ 10 ಆಸ್ತಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಡಿ.ಕೆ.ಶಿವಕುಮಾರ್‌ ಬೇನಾಮಿ ಆಸ್ತಿ ಪ್ರಕರಣದಲ್ಲಿ ಇನ್ನೂ ಹಲವರ ವಿಚಾರಣೆ ನಡೆಸಬೇಕಿದೆ ಎಂದು ಕೋರ್ಟ್‌ಗೆ ವಕೀಲರು ಹೇಳಿಕೊಂಡಿದ್ದಾರೆ.

ಏತನ್ಮಧ್ಯೆ, ದೆಹಲಿಯಲ್ಲಿ ಸಿಕ್ಕ ನಗದಿಗೆ ಸಂಬಂಧಿಸಿ ಈಗಾಗಲೇ ಡಿ.ಕೆ.ಸುರೇಶ್‌ ಹೊರತುಪಡಿಸಿ ಆಪ್ತರಾದ ಸುನಿಲ್‌ ಕುಮಾರ್‌ ಶರ್ಮಾ, ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಅವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ರನ್ನು ಕರೆಸಿಕೊಂಡು 2 ದಿನ ವಿಚಾರಣೆ ನಡೆಸಿದ್ದು, ಒಟ್ಟಾರೆ ದೆಹಲಿಯಲ್ಲಿ ಸಿಕ್ಕ ಹಣ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಈವರೆಗೆ 10 ಮಂದಿಯನ್ನು ವಿಚಾರಣೆ ನಡೆಸಿದೆ. ಹೀಗಾಗಿ ಮುಂದಿನ ವಿಚಾರಣೆಯ ಸರದಿಯಲ್ಲಿ ಡಿ.ಕೆ.ಸುರೇಶ್‌ ಅವರ ಹೆಸರು ಬಂದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಕಾನೂನು ಪಂಡಿತರು.

ಡಿಕೆಸು ಆಸ್ತಿ 4 ಪಟ್ಟು ವೃದ್ಧಿ: ಡಿ.ಕೆ.ಶಿವಕುಮಾರ್‌ ಮಾತ್ರವಲ್ಲ ಡಿ.ಕೆ.ಸುರೇಶ್‌ ಅವರ ಆದಾಯ ಕೂಡ ಕಡಿಮೆ ಅವಧಿಯಲ್ಲೇ ಭಾರೀ ಏರಿಕೆ ಕಂಡಿರುವುದು ಈಗಾಗಲೇ ಸಾಕಷ್ಟುಚರ್ಚೆಗೆ ಕಾರಣವಾಗಿದೆ. ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 5 ವರ್ಷಗಳಲ್ಲಿ 4 ಪಟ್ಟು ವೃದ್ಧಿಸಿದೆ. ಅವರು ಬರೊಬ್ಬರಿ 338.65 ಕೋಟಿ ರು. ಆಸ್ತಿ ಒಡೆಯ. ಡಿ.ಕೆ.ಸುರೇಶ್‌ ಅವರ ಚರಾಸ್ತಿ ಸದ್ಯದ ಮಾರುಕಟ್ಟೆಮೌಲ್ಯ 33.06 ಕೋಟಿ ರು. ಇದ್ದು, 5 ವರ್ಷಗಳಲ್ಲಿ ಶೇ.50ರಷ್ಟುವೃದ್ಧಿಸಿದೆ. ಇವರ ಸ್ಥಿರಾಸ್ತಿ ಸದ್ಯದ ಮಾರುಕಟ್ಟೆಮೌಲ್ಯ 305.59 ಕೋಟಿ ರು. ಈ ಪೈಕಿ ಸ್ವಯಾರ್ಜಿತ ಆಸ್ತಿ ಮಾರುಕಟ್ಟೆಯ ಮೌಲ್ಯ 198 ಕೋಟಿ ರು.  ಪಿತ್ರಾರ್ಜಿತವಾಗಿ ಬಂದ ಆಸ್ತಿ ಮೌಲ್ಯ 107 ಕೋಟಿ ರು.

ಸಹೋ​ದರ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೆ 1.03 ಕೋಟಿ ರು., ಡಿಕೆಶಿ ಪುತ್ರಿ ಐಶ್ವರ್ಯಾ ಅವರಿಗೆ 6.87 ರು., ತಾಯಿ ಗೌರಮ್ಮ ಅವ​ರಿಗೆ 4.86 ಕೋಟಿ ರು. ಸಾಲ ನೀಡಿ​ದ್ದಾರೆ. ಈ ಪೈಕಿ ಸಹೋದರನ ಪತ್ನಿ ಉಷಾ ಶಿವ​ಕು​ಮಾರ್‌ ಅವ​ರಿಗೆ 11.34 ಕೋಟಿ ರು. ಸೇರಿ ಒಟ್ಟು 35.58ಕೋಟಿ ರು. ಸಾಲ ಮರು ಪಾವತಿ ಮಾಡ​ಬೇ​ಕಾ​ಗಿದೆ ಎಂದು ಡಿ.ಕೆ.ಸುರೇಶ್‌ ಅಫಿ​ಡವಿಟ್‌ನಲ್ಲಿ ಹೇಳಿ​ಕೊಂಡಿ​ದ್ದಾ​ರೆ.

2014ರಲ್ಲಿ ಅವರು 85.87 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದರು. ಕಳೆದ ಐದು ವರ್ಷಗಳಲ್ಲಿ ಅವರ ಆಸ್ತಿ 252 ಕೋಟಿ ರು. ಗಳಷ್ಟುಹೆಚ್ಚಾಗಿದೆ.

click me!