ಮೇಲುಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕೆ ಇಳಿಸಿ

By Kannadaprabha NewsFirst Published Dec 3, 2022, 7:29 AM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ನೆಲೆ ಇಲ್ಲದಂತಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ವರಿಷ್ಠರಿಗೆ ಸಂದೇಶ ರವಾನಿಸಿದರು

 ಪಾಂಡವಪುರ: (ಡಿ.03):  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಇಲ್ಲದಿದ್ದರೆ ಪಕ್ಷಕ್ಕೆ ನೆಲೆ ಇಲ್ಲದಂತಾಗುತ್ತದೆ ಎಂದು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ವರಿಷ್ಠರಿಗೆ ಸಂದೇಶ ರವಾನಿಸಿದರು.

ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಎಐಸಿಸಿ (AICC) ವೀಕ್ಷಕ ರೋಷಿಜಾನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, (Congress) ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಸಬೇಕು ಎನ್ನುವ ಕೂಗು ಪ್ರತಿಧ್ವನಿಸಿತ್ತು.

ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ನಾಯಕರ ನಡವಳಿಕೆ ವಿರುದ್ಧ ಅಸಮಧಾನದ ಹೊರ ಹಾಕಿದರು.

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹಾಗೂ ಆಕಾಂಕ್ಷಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕ್ಷೇತ್ರದಿಂದ ಕಣಕ್ಕಳಿಸಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರದಲ್ಲಿ ನೆಲೆ ಇಲ್ಲದಂತಾಗುತ್ತದೆ ಎನ್ನುವ ಸಂದೇಶವನ್ನು ವರಿಷ್ಠರಿಗೆ ರವಾನಿಸಿ ಎಚ್ಚರಿಸಿದರು.

ಕೆಪಿಸಿಸಿ ಸದಸ್ಯ ಎಚ್‌.ತ್ಯಾಗರಾಜು ಮಾತನಾಡಿ, ನಮ್ಮ ತಂದೆ ಮಾಜಿ ಶಾಸಕ ಡಿ.ಹಲಗೇಗೌಡರು, ಸೋದರ ಜಿ.ಪಂ ಮಾಜಿ ಸದಸ್ಯ ಎಚ್‌.ಮಂಜುನಾಥ್‌ ಹಲವು ವರ್ಷಗಳ ಕಾಲ ದುಡಿದು ಕಾಂಗ್ರೆಸ್‌ ಪಕ್ಷ ಕಟ್ಟುವ ಕೆಲಸ ಮಾಡಿದ್ದಾರೆ. ನಾನು ಸಹ ಜಿ.ಪಂ ಸದಸ್ಯನಾಗಿ ಆಯ್ಕೆಯಾಗಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇನೆ ಎಂದರು.

ಮುಂದಿನ ಚುನಾವಣೆಗೆ ನಾನು ಸಹ ಕ್ಷೇತ್ರದಿಂದ ಆಕಾಂಕ್ಷಿತ ಅಭ್ಯರ್ಥಿಯಾಗಿದ್ದೇನೆ. ಪಕ್ಷ ನನಗೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಮನೆಮನೆಗೆ ತಿರುಗಿ ಪಕ್ಷ ಸಂಘಟನೆ ಮಾಡಿ ಗೆಲುವಿಗೆ ಶ್ರಮಿಸಿ, ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕಳಿಸಬೇಕು ಎಂದು ವರಿಷ್ಠರ ಮುಂದೆ ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಟಿಕೆಟ್‌ ಆಕಾಂಕ್ಷಿ ಡಾ.ಎಚ್‌.ಎನ್‌.ರವೀಂದ್ರ ಮಾತನಾಡಿ, ನಾವು ಕ್ಷೇತ್ರದಲ್ಲಿ ಗುದ್ದಾಡಬೇಕಾಗಿರುವುದು ಬೇರೆ ಎರಡು ಪಕ್ಷಗಳ ಜತೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ವರಿಷ್ಠರು ಒಳ್ಳೆಯ ತೀರ್ಮಾನ ಕೈಗೊಂಡು ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಉಳಿದಂತೆ ಪಕ್ಷದ ಈ ಬಗ್ಗೆ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಮಾತನಾಡಿ, ಕಾಂಗ್ರೆಸ್‌ ಜಾತ್ಯಾತೀತ ನಿಲುವು ಇಟ್ಟುಕೊಂಡು ಹೋರಾಟ ಮಾಡುತ್ತಿದೆ.

ಕ್ಷೇತ್ರದಲ್ಲಿ 2004ರವರೆಗೆ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದರು. ನಂತರ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿಲ್ಲ ಎಂದರು.

ಈ ಹಿಂದೆ ಡಿ.ಕೆ.ಶಿವಕುಮಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಹೇಳಿದ್ದರು. ನಿಮ್ಮೆಲ್ಲರ ಅಭಿಪ್ರಾಯ, ಒತ್ತಾಯವನ್ನು ಪಕ್ಷದ ಹೈಕಮಾಂಡ್‌ಗೆ ರವಾನಿಸುತ್ತೇನೆ.

ಕಾಂಗ್ರೆಸ್‌ ನಾಯಕರ ಪಕ್ಷವಾಗಿದೆ. ಇದು ಕಾರ್ಯಕರ್ತರ ಪಕ್ಷವಾಗಬೇಕು. ಬೂತ್‌ ಮಟ್ಟದಲ್ಲಿ ವಾರ್ಡ್‌ ಮಟ್ಟದಲ್ಲಿ ಏಜೆಂಟ್‌ ನೇಮಕ ಮಾಡುವ ಮೂಲಕ ತಳಮಟ್ಟದಿಂದ ಪಕ್ಷ ಸಂಘಟಿಸಿ ಎಂದು ಸೂಚಿಸಿದರು.

ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ: ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೊಬೈಲ್‌ ಕಸಿದು ಕಾಂಗ್ರೆಸ್‌ ಮುಖಂಡನೊಬ್ಬ ದೌರ್ಜನ್ಯ ನಡೆಸಿದ ಘಟನೆ ನಡೆಯಿತು.

ಸಭೆ ಆರಂಭದಲ್ಲಿ ಕಾರ್ಯಕರ್ತರು, ವೇದಿಕೆ ಮೇಲಿದ್ದ ಮುಖಂಡರ ನಡುವೆ ಮಾತಿಗೆ ಮಾತು ಬೆಳೆಯಿತು. ವೇದಿಕೆ ಮುಂದೆ ಇದ್ದ ಮಾಧ್ಯಮ ಪ್ರತಿನಿಧಿಗಳು ಮೊಬೈಲ… ಮೂಲಕ ದೃಶ್ಯ ಸೆರೆಹಿಡಿಯಲು ಮುಂದಾದರು. ಈ ವೇಳೆ ಕಾಂಗ್ರೆಸ್‌ ಸಾಮಾಜಿಕ ಅಂತರ್ಜಾಲದ ಜಿಲ್ಲಾ ವಕ್ತಾರ ಅನಿಲ… ಎಂಬಾತ ಮಾಧ್ಯಮ ಪ್ರತಿನಿಧಿಗಳಿಗೆ ವಿಡಿಯೋ ಚಿತ್ರೀಕರಣ ಮಾಡದಂತೆ ಧಮ್ಕಿ ಹಾಕಿದರು. ನಂತರ ಮೊಬೈಲ್‌ಗಳನ್ನು ಕಿತ್ತು ನೆಲಕ್ಕೆ ಬಿಸಾಡಿ ದೌರ್ಜನ್ಯ ನಡೆಸಿದನು.

ಈ ವೇಳೆ ಕಾರ್ಯಕರ್ತರು, ಅನಿಲ್  ಹಾಗೂ ಮಾಧ್ಯಮ ಪ್ರತಿನಿಧಿಗಳು ನಡುವೆ ಮಾತಿನಚಕಮಕಿ ನಡೆಯಿತು. ಇದಾದ ಬಳಿಕ ಘಟನೆ ಖಂಡಿಸಿ ಎಲ್ಲಾ ಮಾಧ್ಯಮ ಪ್ರತಿನಿಧಿಗಳು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಘಟನೆ ಖಂಡಿಸಿ ಅನಿಲ್‌ನಿಂದ ಕ್ಷಮೆಯಾಚಿಸಿ ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ತ್ಯಾಗರಾಜು, ಆನಂದ್‌, ಮಾಜಿ ಅಧ್ಯಕ್ಷ ಎಲ….ಸಿ.ಮಂಜುನಾಥ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್‌, ಅಧ್ಯಕ್ಷೆ ಎಚ್‌.ಸಿ.ಶೋಭಾಕುಮಾರ್‌, ಸಿ.ಕೆ.ನಾಗರಾಜು, ಕಿಸಾನ್‌ ಕಾಂಗ್ರೆಸ್‌ ಅಧ್ಯಕ್ಷ ಸಿ.ಆರ್‌.ರಮೇಶ್‌, ಟಿಎಪಿಸಿಎಂಎಸ್‌ ನಿರ್ದೇಶಕ ಶ್ರೀಕಾಂತ್‌, ಆರ್‌.ಎ.ನಾಗಣ್ಣ ಇದ್ದರು.

click me!