ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಇರುವ ಭದ್ರತೆ ಮೀರಿ, ಒಳಪ್ರವೇಶಿಸಲು ಅನುಮತಿಗೆ ಕಾಯದೆ ನೇರವಾಗಿ ಆಸ್ಪತ್ರೆ ತುರ್ತು ವಿಭಾಗಕ್ಕೆ ಬಸ್ಸು ಕೊಂಡೊಯ್ದರು. ಬಳಿಕ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ.
ಮಂಗಳೂರು(ಆ.01): ಚಲಿಸುತ್ತಿದ್ದ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಹಠಾತ್ ಎದೆನೋವು ಕಾಣಿಸಿಕೊಂಡಾಗ ಮಾನವೀಯತೆ ಮೆರೆದ ಬಸ್ಸಿನ ಚಾಲಕ-ನಿರ್ವಾಹಕರು ಕೂಡಲೇ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಂಗಳವಾರ ಸಂಜೆ 13ಎಫ್ ನಂಬರಿನ ಕೃಷ್ಣ ಪ್ರಸಾದ್ ಎಂಬ ಬಸ್ಸು ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳೂರು ನಗರಕ್ಕೆ ಸಂಚರಿಸುತ್ತಿತ್ತು. ದಾರಿ ಮಧ್ಯೆ ಬಸ್ಸಿನಲ್ಲಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಎದೆನೋವು ಮತ್ತು ತಲೆನೋವು ಕಾಣಿಸಿಕೊಂಡಿದೆ. ತಕ್ಷಣ ಬಸ್ಸಿನ ಚಾಲಕ ಗಜೇಂದ್ರ ಕುಂದರ್ ಹಾಗೂ ನಿರ್ವಾಹಕರಾದ ಸುರೇಶ್ ಮತ್ತು ಮಹೇಶ್ ಪೂಜಾರಿ ಅವರು ಬಸ್ ಅನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದರು. ಆಂಬ್ಯುಲೆನ್ಸ್‌ನಂತೆ ಹಾರನ್ ಬಾರಿಸುತ್ತ ವಾಹನ ದಟ್ಟಣೆ ನಡುವೆಯೂ 6 ಕಿ.ಮೀ. ದೂರವನ್ನು ಕೇವಲ ಆರು ನಿಮಿಷಗಳಲ್ಲಿ ಕ್ರಮಿಸಿ ಆಸ್ಪತ್ರೆಗೆ ದಾಖಲಿಸಿದರು. ವಿದ್ಯಾರ್ಥಿನಿ ಈಗ ಚೇತರಿಸಿಕೊಂಡಿದ್ದಾಳೆ.
ಎದೆನೋವು ಬಂದು ವಾಂತಿ ಬಂದರೆ ಅದು ಹೃದಯಾಘಾತದ ಮುನ್ಸೂಚನೇನಾ?
ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲುಪಿದರು. ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಇರುವ ಭದ್ರತೆ ಮೀರಿ, ಒಳಪ್ರವೇಶಿಸಲು ಅನುಮತಿಗೆ ಕಾಯದೆ ನೇರವಾಗಿ ಆಸ್ಪತ್ರೆ ತುರ್ತು ವಿಭಾಗಕ್ಕೆ ಬಸ್ಸು ಕೊಂಡೊಯ್ದರು. ಬಳಿಕ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಅಪಾಯದಿಂದ ಪಾರಾಗಿದ್ದಾರೆ.
ಬಸ್ ಚಾಲಕ ಮತ್ತು ನಿರ್ವಾಹಕರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಘಟನೆ ವೇಳೆ ಬಸ್ಸಿನಲ್ಲಿದ್ದ ಸಾರ್ವಜನಿಕರು ಕೂಡ ತಮ್ಮೆಲ್ಲ ತುರ್ತು ಕೆಲಸಗಳನ್ನು ಬದಿಗೊತ್ತಿ ಮಾನವೀತೆಯಿಂದ ಸ್ಪಂದಿಸಿದ್ದಾರೆ. ಸಮಯಪ್ರಜ್ಞೆ ಹಾಗೂ ಮಾನವೀಯತೆ ಮೆರೆದ ಬಸ್ಸು ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಲು ಬಸ್ಸು ಮಾಲೀಕರ ಸಂಘ ನಿರ್ಧರಿಸಿದೆ.