ಜಲಕ್ಷಾಮ: ಅಫಜಲ್ಪುರಕ್ಕೆ ಏಪ್ರಿಲ್‌, ಮೇಗೆ ಕಾದಿದೆ ಗಂಡಾಂತರ..!

By Kannadaprabha News  |  First Published Feb 26, 2024, 4:00 AM IST

ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರ, ಬಳೂರ್ಗಿ, ಚಿಂಚೋಳಿ, ಮಾತೋಳಿ, ಹೊಸೂರ, ಕರ್ಜಗಿ, ಮಾಶಾಳ, ಬಡದಾಳ, ಗೊಬ್ಬೂರ(ಬಿ), ರೇವೂರ(ಕೆ), ಕೋಗನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಈ ಗ್ರಾಮಗಳೆಲ್ಲ ಭೀಮಾ ನದಿಯಿಂದ ದೂರ ಇರುವ ಗ್ರಾಮಗಳಾಗಿವೆ. ಇಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ನೀರಿನ ಸಮಸ್ಯೆ ಉಲ್ಬಣವಾಗುತ್ತಿತ್ತು. ಆದರೆ ಈ ಬಾರಿ ಭೀಮಾ ನದಿಗೆ ಹೊಂದಿಕೊಂಡಿರುವ ಊರುಗಳಲ್ಲೂ ಕೂಡ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. 


ಚವಡಾಪುರ(ಫೆ.26):  ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಅಫಜಲ್ಪುರ ತಾಲೂಕಿನಾದ್ಯಂತ ಕುಡಿವ ನೀರಿಗಾಗಿ ಹಾಹಾಕಾರ ಶುರುವಾಗುವುದು ಸಾಮಾನ್ಯ. ಆದರೆ ಈ ಬಾರಿ ಬೇಸಿಗೆ ಆರಂಭದಲ್ಲೇ ಹಾಹಾಕಾರ ಶುರುವಾಗಿದೆ. ಅದರಲ್ಲೂ ತಾಲೂಕಿನ ಜೀವನದಿ ಎನಿಸಿರುವ ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೊನ್ನ ಭೀಮಾ ಬಾಂದಾರು ಸಂಪೂರ್ಣ ಬರಿದಾಗಿ ಆತಂಕ ಮೂಡಿಸಿದೆ.

ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರ, ಬಳೂರ್ಗಿ, ಚಿಂಚೋಳಿ, ಮಾತೋಳಿ, ಹೊಸೂರ, ಕರ್ಜಗಿ, ಮಾಶಾಳ, ಬಡದಾಳ, ಗೊಬ್ಬೂರ(ಬಿ), ರೇವೂರ(ಕೆ), ಕೋಗನೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಈ ಗ್ರಾಮಗಳೆಲ್ಲ ಭೀಮಾ ನದಿಯಿಂದ ದೂರ ಇರುವ ಗ್ರಾಮಗಳಾಗಿವೆ. ಇಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ನೀರಿನ ಸಮಸ್ಯೆ ಉಲ್ಬಣವಾಗುತ್ತಿತ್ತು. ಆದರೆ ಈ ಬಾರಿ ಭೀಮಾ ನದಿಗೆ ಹೊಂದಿಕೊಂಡಿರುವ ಊರುಗಳಲ್ಲೂ ಕೂಡ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಭೀಮಾ ನದಿ ಸಂಪೂರ್ಣ ಬರಿದಾಗಿದ್ದು ನದಿ ಪಾತ್ರದ ಊರುಗಳ ಜನ ಕೂಡ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

undefined

ಮೂವರು ಕನ್ನಡಿಗರು ಸೇರಿ 60 ಭಾರತೀಯರಿಗೆ ರಷ್ಯಾ ಸೇನೆ ವಂಚನೆ, ಶೀಘ್ರ ಬಿಡುಗಡೆಗೆ ಭಾರತ ಮನವಿ

ಬ್ಯಾರೇಜ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಹಿನ್ನೀರಲ್ಲಿ ತಳ ಕಾಣುತ್ತಿದೆ:

3.16 ಟಿಎಂಸಿ ಸಂಗ್ರಹ ಸಾಮರ್ಥ್ಯದ ಬ್ಯಾರೇಜ್‌ನಲ್ಲಿಗ ಕೇವಲ 0.718 ಟಿಎಂಸಿ ನೀರು ಮಾತ್ರ ಉಳಿದುಕೊಂಡಿದೆ. ಸೊನ್ನ ಗ್ರಾಮದಲ್ಲಿ 1999ರಲ್ಲಿ ಭೀಮಾ ನದಿಗೆ ಅಡ್ಡಲಾಗಿ ಏತ ನೀರಾವರಿ ಬ್ಯಾರೇಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು ಕಾಮಗಾರಿ ಮುಗಿದು ಕಳೆದ 2.5 ದಶಕದ ತನಕ ಬ್ಯಾರೇಜ್‌ನಲ್ಲಿರುವ ನೀರಿನ ಪ್ರಮಾಣ ಫೆಬ್ರವರಿ ತಿಂಗಳ ಅಂತ್ಯಕ್ಕೆ ಒಮ್ಮೆಯೂ ಇಷ್ಟೊಂದು ಕಡಿಮೆಯಾಗಿರಲಿಲ್ಲ. ಬ್ಯಾರೇಜ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾರೇಜ್‌ ಹಿನ್ನೀರಿನಲ್ಲಿ ತಳ ಕಾಣುವಂತಾಗಿದೆ. ಇದು ನಿಜಕ್ಕೂ ಆತಂಕ ಮತ್ತು ಅಪಾಯಕರ ದಿನಗಳ ಮುನ್ಸೂಚನೆಯನ್ನು ನೀಡುತ್ತಿದ್ದು ಜಲಕ್ಷಾಮದಿಂದ ಜನ ಕಂಗಾಲಾಗಿ ಬೀದಿಗೆ ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಜಲಕ್ಷಾಮಕ್ಕೆ ತುತ್ತಾದ ಅಫಜಲ್ಪುರಕ್ಕೆ ಏಪ್ರೀಲ್, ಮೇ ಗಂಡಾಂತರ:

ಭೀಮಾ ಬ್ಯಾರೇಜ್‌ನಲ್ಲಿ ಸಧ್ಯ ಲಭ್ಯವಿರುವ ನೀರಲ್ಲಿ ಕೃಷಿಗಾಗಿ ಒಂದು ಹನಿ ಬಳಕೆ ಮಾಡದೆ ಕೇವಲ ಕುಡಿಯುವುದಕ್ಕಾಗಿ ಬಳಕೆ ಮಾಡಿಕೊಂಡರೂ ಕೂಡ ಏಪ್ರೀಲ್, ಮೇ ತಿಂಗಳ ವರೆಗೂ ನೀರು ಸಾಕಾಗಲಿದೆ. ಅಲ್ಲಿಂದ ಸಂಪೂರ್ಣ ಜಲಾಶಯ ಬರೀದಾಗಲಿದ್ದು ಅಫಜಲ್ಪುರ ತಾಲೂಕಿನಲ್ಲಿ ಭಾಗಶಃ ಜಲಕ್ಷಾಮ ಉಂಟಾಗುವುದಂತು ಪಕ್ಕಾ ಆಗಿದೆ. ಭೀಮೆಯ ದಡದ ಹಳ್ಳಿಗಳು, ಜಲಾಶಯದ ಅಕ್ಕಪಕ್ಕದ ಹಳ್ಳಿಗಳಲ್ಲೇ ಈಗ ನೀರಿಗಾಗಿ ಪರದಾಟ ಶುರುವಾಗುತ್ತಿದೆ. ಇನ್ನೂ ನದಿ ಇಲ್ಲದ ಭಾಗದಲ್ಲಿನ ಜನ ಜಾನುವಾರುಗಳ ಪರಿಪಾಟಲು ದೇವರಿಗೆ ಪ್ರೀತಿ ಎನ್ನುವಂತಾಗಲಿದೆ. ಇನ್ನೊಂದು ತಿಂಗಳಲ್ಲಿ ನೀರಿನ ಪರ್ಯಾಯ ವ್ಯವಸ್ಥೆಗೆ ಸಂಬಂಧ ಪಟ್ಟವರು ಮುಂದಾಗದಿದ್ದರೆ ಜಲಕಂಟಕದಲ್ಲಿ ಸಿಲುಕಿ ಇಡೀ ತಾಲೂಕಿನ ಜನ ಪರಿತಪಿಸಬೇಕಾಗುತ್ತದೆ.

ಕಲಬುರಗಿ: ಕೊಡ ನೀರಿಗಾಗಿ ರಾತ್ರಿಪೂರಾ ನಿದ್ದೆಗೆಡುವ ಜನರು..!

ಭೀಮಾ ನದಿಯಲ್ಲಿನ ನೀರು ತೀರಾ ಕಡಿಮೆಯಾಗಿದ್ದು, ಬೇಸಿಗೆ ಮುಗಿಯುವ ತನಕ ಕೇವಲ ಕುಡಿಯುವುದಕ್ಕಾಗಿ ಬಳಕೆ ಮಾಡಬೇಕಾಗುತ್ತದೆ. ಆಲಮಟ್ಟಿ, ನಾರಾಯಣಪೂರ ಜಲಾಶಯದ ನೀರನ್ನೂ ಇಂಡಿ ಬ್ರಾಂಚ್ ಕೆನಾಲ್ ಮೂಲಕ ಸೊನ್ನ್ ಬ್ಯಾರೇಜ್‌ಗೆ ನೀರು ಹರಿಸುವಂತೆ ಸರ್ಕಾರ ಹಾಗೂ ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದೇನೆ, ಅಲ್ಲದೆ ಈ ಕುರಿತು ವಿಧಾನಸಭೆ ಅಧಿವೇಶನದಲ್ಲೂ ಧ್ವನಿ ಎತ್ತಿದ್ದೇನೆ.ಎಲ್ಲೆಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿ ಉಲ್ಬಣಸಿಉತ್ತದೋ ಅಂತಲ್ಲಿ ಟ್ಯಾಂಕರ್ ನೀರು ಪೂರೈಕೆ, ಖಾಸಗಿಯವರಿಂದ ಖರೀದಿ ಮಾಡಿ ಜನಸಾಮಾನ್ಯರಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಅಫಜಲ್ಪುರ ಶಾಸಕ ಎಂ.ವೈ ಪಾಟೀಲ್ ಹೇಳಿದ್ದಾರೆ.

ಭೀಮಾ ಬ್ಯಾರೇಜ್‌ನಲ್ಲಿ ಇದೇ ಮೊದಲ ಬಾರಿಗೆ ಫೆಬ್ರವರಿ ತಿಂಗಳ ಅಂತ್ಯದಲ್ಲೇ ನೀರು ವ್ಯಾಪಕವಾಗಿ ಕಡಿಮೆಯಾಗಿದೆ. ಮಳೆಗಾಲದಲ್ಲಿ ಬ್ಯಾರೇಜ್ ತುಂಬುವಷ್ಟು ನೀರು ಬರಲೇ ಇಲ್ಲ ಅದೇ ನಮಗೀಗ ಸಮಸ್ಯೆಯಾಗುತ್ತಿದೆ. ಲಭ್ಯವಿರುವ ನೀರನ್ನು ಕೇವಲ ಕುಡಿಯುವುದಕ್ಕಾಗಿ ಮಾತ್ರ ಬಳಕೆ ಮಾಡಿಕೊಂಡರು ಇನ್ನೇರಡು ತಿಂಗಳಷ್ಟೇ ಸಾಕಾಗಲಿದೆ. ಏಪ್ರೀಲ್ ಅಂತ್ಯ ಹಾಗೂ ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಹೀಗಾಗಿ ಬ್ಯಾರೇಜ್‌ನ ನೀರಿನ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಕೆಎನ್‌ಎನ್‌ಎಲ್‌ ಅಧಿಕಾರಿ ತಿಳಿಸಿದ್ದಾರೆ.

click me!