ಬೀಚ್‌ ಬದಿ ಇರೋ ಐತಿಹಾಸಿಕ ಮುರುಡೇಶ್ವರ ದೇಗುಲದಲ್ಲಿ ವಸ್ತ್ರ ಸಂಹಿತೆ ಕಡ್ಡಾಯ

Published : Jun 24, 2025, 05:53 PM IST
Murudeshwara

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಪುರುಷರಿಗೆ ಪಂಚೆ/ಧೋತಿ, ಮಹಿಳೆಯರಿಗೆ ಸೀರೆ/ಚೂಡಿದಾರ್ ಕಡ್ಡಾಯ. ದೇವಾಲಯದ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೀಚ್‌ ಸಮೀಪದಲ್ಲಿ ನೆಲೆಗೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಪ್ರಸಿದ್ಧ ಮುರುಡೇಶ್ವರ ಕ್ಷೇತ್ರದಲ್ಲಿ ಇನ್ನು ಮುಂದೆ ದೇವಾಲಯ ಪ್ರವೇಶಕ್ಕೆ ಕಡ್ಡಾಯ ವಸ್ತ್ರ ಸಂಹಿತೆ ಜಾರಿಯಾಗಲಿದೆ. ಈ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಕೊಂಡಿದ್ದು, ದೇವಾಲಯದ ಪ್ರವೇಶದ ಬಳಿ ಸೂಚನಾ ಫಲಕವನ್ನು ಕೂಡಾ ಅಳವಡಿಸಲಾಗಿದೆ. ವಸ್ತ್ರ ಸಂಹಿತೆಯನ್ವಯ, ಪುರುಷರಿಗೆ ಪಂಚೆ ಅಥವಾ ಧೋತಿ ಧರಿಸುವುದು ಹಾಗೂ ಮಹಿಳೆಯರಿಗೆ ಸೀರೆ ಅಥವಾ ಚೂಡಿದಾರ ಧರಿಸುವುದು ಮಾತ್ರ ಅನುಮತಿಸಲಾಗಿದೆ. ಅಶಿಷ್ಟ, ಅಸಭ್ಯ ಅಥವಾ ಅಸಭ್ಯತೆಯ ಬಟ್ಟೆ ಧರಿಸಿ ದೇವಾಲಯ ಪ್ರವೇಶಿಸುವಂತಿಲ್ಲ.

ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಅನುಚಿತ ಮತ್ತು ಬೇಕಾಬಿಟ್ಟಿ ವಸ್ತ್ರ ಧರಿಸಿ ಪ್ರವೇಶಿಸುತ್ತಿದ್ದರು ಎಂಬ ಆಕ್ಷೇಪಗಳು ಕೇಳಿಬಂದಿದ್ದವು. ಹಳೆಯ ವರ್ಷಗಳಿಂದಲೇ ಕೆಲವೊಂದು ಶ್ರದ್ಧಾಳುಗಳು ಬೇಕಾಬಿಟ್ಟಿ ಉಡುಗೆಯೊಂದಿಗೆ ದೇವಾಲಯ ಪ್ರವೇಶಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿತ್ತು. ಇದಕ್ಕೆ ಸಂಬಂಧಿಸಿ ಹಿಂದೂ ಪರ ಸಂಘಟನೆಗಳು ವಸ್ತ್ರ ಸಂಹಿತೆ ಜಾರಿಗೆ ಆಗ್ರಹಿಸುತ್ತಿದ್ದವು. ಇದೀಗ ಈ ಆಶಯಕ್ಕೆ ಸ್ಪಂದನೆ ನೀಡಿ ಆಡಳಿತ ಮಂಡಳಿ ಈ ತೀರ್ಮಾನ ಕೈಗೊಂಡಿದೆ.

ಒಂದು ಕಾಲದಲ್ಲಿ ಸಂಪೂರ್ಣವಾಗಿ ಯಾತ್ರಾ ಸ್ಥಳವೆಂದು ಪರಿಚಿತವಾಗಿದ್ದ ಮುರುಡೇಶ್ವರ, ತನ್ನ ನೈಸರ್ಗಿಕ ಸೌಂದರ್ಯ ಮತ್ತು ಮನೋಹರ ಕಡಲತೀರದಿಂದಾಗಿ ಇಂದು ಜನಪ್ರಿಯ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಿದೆ. ಈ ಪ್ರವಾಸಿ ಹೆಚ್ಚಳದೊಂದಿಗೆ, ದೇವಾಲಯಕ್ಕೆ ಅಸಮಂಜಸ ಉಡುಪು ಧರಿಸಿ ಪ್ರವೇಶಿಸುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಇಂತಹ ಉಡುಪು ಧರಿಸಿದ ವ್ಯಕ್ತಿಗಳನ್ನು ಸರಿಯಾದ, ಶಿಸ್ತಿನ ಉಡುಗೆ ಧರಿಸಲು ವಿನಮ್ರವಾಗಿ ಮನವೊಲಿಸುವ ಪ್ರಯತ್ನಗಳು ಹಲವು ಬಾರಿ ನಡೆದಿದ್ದರೂ, ಹಲವರು ಈ ಮನವಿಗಳನ್ನು ನಿರ್ಲಕ್ಷಿಸಿದರು. ಶಾರ್ಟ್ಸ್, ಹಾಫ್-ಪ್ಯಾಂಟ್, ಅಥವಾ ಅಗೌರವ ಸೂಚಿಸುವ ಬಟ್ಟೆಗಳನ್ನು ಧರಿಸಿ ದೇವಾಲಯ ಪ್ರವೇಶಿಸಿ, ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ.

ಈ ಬೆಳವಣಿಗೆಯ ಪ್ರತಿಸ್ಪಂದನವಾಗಿ, ದೇವಾಲಯದ ಆಡಳಿತ ಮಂಡಳಿಯು ಮುರುಡೇಶ್ವರ ಕ್ಷೇತ್ರದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಘನತೆಯನ್ನು ಕಾಪಾಡುವ ಉದ್ದೇಶದಿಂದ ವಸ್ತ್ರ ಸಂಹಿತೆ ಜಾರಿಗೆ ತಂದಿದೆ. ಈ ತೀರ್ಮಾನವನ್ನು ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಭಕ್ತರು ಹಾರ್ದಿಕವಾಗಿ ಸ್ವಾಗತಿಸಿದ್ದು, ಇದು ದೇವಾಲಯದ ಪವಿತ್ರತೆ ಮತ್ತು ಧಾರ್ಮಿಕ ಶಿಸ್ತನ್ನು ಉಳಿಸುವ ಮಹತ್ತ್ವದ ಹೆಜ್ಜೆಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
1983ರಿಂದಲೂ ಬಸವರಾಜ ಹೊರಟ್ಟಿ, ನಾನು ದೋಸ್ತ್: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?