ಪಿರಿಯಾಪಟ್ಟಣ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶೇಖರಣೆಗೊಂಡಿರುವ ಕೊಳಚೆ ಚರಂಡಿ ನೀರಿನಿಂದಾಗಿ ರೋಗಿಗಳು ಮೂಗು ಮುಚ್ಚಿ ಓಡಾಡುವ ಸ್ಥಿತಿ ಉಂಟಾಗಿದೆ.
ಮೈಸೂರು(ಜ.01): ಪಿರಿಯಾಪಟ್ಟಣ ಗ್ರಾಮದಲ್ಲಿ ಪಂಚಾಯಿತಿ ಕಚೇರಿ ಇದ್ದರೂ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಸರ್ಕಾರಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಹೆಚ್ಚುತ್ತಿರುವ ಮಾಲೀನ್ಯದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಆತಂಕ ಪಡುವ ಸ್ಥಿತಿ ತಾಲೂಕಿನ ಭುವನಹಳ್ಳಿಯಲ್ಲಿ ನಿರ್ಮಾಣವಾಗಿದೆ.
ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ತಾಲೂಕಿಗೆ ಮಾದರಿಯಾಗಿತ್ತು. ಕೆಲ ದಿನಗಳ ಹಿಂದೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ ವೈದ್ಯ ಡಾ. ರಾಜೇಶ್ ಅವರ ಉತ್ತಮ ಚಿಕಿತ್ಸೆ ಮತ್ತು ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿಯೇ ಸುತ್ತಮುತ್ತಲ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಮಂದಿ ಚಿಕಿತ್ಸೆಗೆಂದು ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಆದರೆ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಶೇಖರಣೆಗೊಂಡಿರುವ ಕೊಳಚೆ ಚರಂಡಿ ನೀರಿನಿಂದಾಗಿ ಮೂಗು ಮುಚ್ಚಿ ಓಡಾಡುವ ಸ್ಥಿತಿ ಹಾಗೂ ಸೊಳ್ಳೆಗಳ ಕಾಟ ಎದುರಿಸುವಂತಾಗಿದೆ.
ತುಮಕೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ 1.5 ಲಕ್ಷ ಜನರ ನಿರೀಕ್ಷೆ
ಗ್ರಾಪಂ ಅಧ್ಯಕ್ಷ ಈರೇಗೌಡ ಅವರು ಶಾಲೆ ಹಾಗೂ ಆಸ್ಪತ್ರೆ ಮುಂಭಾಗ ಚರಂಡಿ ವ್ಯವಸ್ಥೆಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದರಾದರೂ ಇನ್ನೇನು ಕೆಲ ತಿಂಗಳುಗಳಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರ ಅವಧಿ ಮುಗಿಯುವುದರಿಂದ ಅಷ್ಟರೊಳಗೆ ಅನುಮೋದನೆ ಸಿಕ್ಕಿ ಗ್ರಾಮದಲ್ಲಿನ ಚರಂಡಿ ವ್ಯವಸ್ಥೆ ಬಗೆಹರಿದು ಸಾರ್ವಜನಿಕರಿಗೆ ಒಳಿತಾಗುವುದೇ ಕಾದು ನೋಡಬೇಕು.
ಹೆಚ್ಚುತ್ತಿರುವ ಸೊಳ್ಳೆ ಹಾವಳಿ
ಆಸ್ಪತ್ರೆ ಮುಂಭಾಗ ಬೆಳೆದಿರುವ ಆಳೆತ್ತರದ ತ್ಯಾಜ್ಯದಿಂದಲೂ ಅನೈರ್ಮಲ್ಯ ಹೆಚ್ಚುತ್ತಿದ್ದು, ಒಮ್ಮೊಮ್ಮೆ ಆಸ್ಪತ್ರೆ ವೈದ್ಯರು ಹಾಗು ಸಿಬ್ಬಂದಿಯೇ ಕೆಲಸಗಾರರಿಂದ ಸ್ವಚ್ಛಗೊಳಿಸಿದ ಉದಾಹರಣೆಗಳೂ ಇವೆ. ಆಸ್ಪತ್ರೆ ಪಕ್ಕದಲ್ಲಿಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದ್ದು ಅಲ್ಲಿಯೂ ಮುಂಭಾಗದ ತೆರೆದ ಚರಂಡಿಯಿಂದಾಗಿ ಸೊಳ್ಳೆಗಳು ಹೆಚ್ಚಿದೆ. ಆದ್ದರಿಂದ ದುರ್ವಾಸನೆಯಿಂದಾಗಿ ವಿದ್ಯಾರ್ಥಿಗಳು ಮೂಗು ಮುಚ್ಚಿ ಪಾಠ ಪ್ರವಚನ ಕೇಳುವ ಸ್ಥಿತಿಯೂ ಸಹ ಒಮ್ಮೊಮ್ಮೆ ಕಂಡು ಬಂದಿದೆ.