ಮಂಗಳೂರು: ಅಂಗಡಿಯೊಳಗೆ ಹರಿದು ಬಂತು ತ್ಯಾಜ್ಯ ನೀರು

By Kannadaprabha NewsFirst Published Aug 6, 2019, 9:16 AM IST
Highlights

ಉಳ್ಳಾಲದ ಮೊಗವೀರಪಟ್ನ ಜನವಸತಿ ಪ್ರದೇಶದಲ್ಲಿ ಹರಿಯುತ್ತಿದ್ದ ತ್ಯಾಜ್ಯ ನೀರು, ಸೋಮವಾರದ ಮಳೆಗೆ ಉಳ್ಳಾಲ ಜಂಕ್ಷನ್‌ನಲ್ಲೇ ಹರಿದು ಅಂಗಡಿಗಳ ಒಳಗೆ ನುಗ್ಗಿ ಕೃತಕ ನೆರೆಯುಂಟಾಗಿದೆ. ಪ್ಯಾರೀಸ್‌ ಜಂಕ್ಷನ್‌ ಮತ್ತು ಹಿಂದೂ ರುದ್ರಭೂಮಿ ಸಮೀಪವಿರುವ ಚರಂಡಿಯನ್ನು ಮೊಗವೀರಪಟ್ನ ನಿವಾಸಿಗಳು ಕಲ್ಲು ಕಟ್ಟುವ ಮೂಲಕ ಮುಚ್ಚಿದ್ದಾರೆ. ಇದರ ಪರಿಣಾಮವಾಗಿ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಉಳ್ಳಾಲ ಜಂಕ್ಷನ್ನಿನಲ್ಲಿ ಕೃತಕ ನೆರೆಯಾಯಿತು.

ಮಂಗಳೂರು(ಆ.06): ಉಳ್ಳಾಲದ ಮೊಗವೀರಪಟ್ನ ಜನವಸತಿ ಪ್ರದೇಶದಲ್ಲಿ ಹರಿಯುತ್ತಿದ್ದ ತ್ಯಾಜ್ಯ ನೀರು, ಸೋಮವಾರದ ಮಳೆಗೆ ಉಳ್ಳಾಲ ಜಂಕ್ಷನ್‌ನಲ್ಲೇ ಹರಿದು ಅಂಗಡಿಗಳ ಒಳಗೆ ನುಗ್ಗಿ ಕೃತಕ ನೆರೆಯುಂಟಾಗಿದೆ.

ಅಂಗಡಿ, ವಸತಿ, ವಾಣಿಜ್ಯ ಸಂಕೀರ್ಣಗಳಿರುವ ಉಳ್ಳಾಲ ಜಂಕ್ಷನ್ನಿನ ತ್ಯಾಜ್ಯ ನೀರು ಮೊಗವೀರಪಟ್ನ ಆಗಿ ಹರಿದುಹೋಗುತ್ತಿದೆ. ಇದರಿಂದ ಮೊಗವೀರಪಟ್ನ ನಿವಾಸಿಗಳು ಸ್ಥಳೀಯ ನಗರಸಭೆ ಆಡಳಿತಕ್ಕೆ ದೂರುಗಳನ್ನು ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಶಾಸಕರಿಗೂ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೊಗವೀರಪಟ್ನ ತಗ್ಗುಪ್ರದೇಶ ಆಗಿರುವುದರಿಂದ ನೀರು ನಿಲ್ಲಿಸಲು ಅಸಾಧ್ಯ. ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕವಷ್ಟೇ ಪರಿಹಾರ ಕಂಡುಕೊಳ್ಳುವ ವಿಶ್ವಾಸ ನೀಡಿದ್ದರು.

ಆದರೆ ಕೆಲ ದಿನಗಳಿಂದ ಪ್ಯಾರೀಸ್‌ ಜಂಕ್ಷನ್‌ ಹಾಗೂ ಹಿಂದೂ ರುದ್ರ ಭೂಮಿ ಸಮೀಪವಿರುವ ತೋಡಿನ ಮೂಲಕ ಹರಿದುಬರುತ್ತಿರುವ ತ್ಯಾಜ್ಯ ನೀರು ಮೊಗವೀರಪಟ್ನ ಜನವಸತಿ ಪ್ರದೇಶದಲ್ಲಿ ಇಕ್ಕಟ್ಟಾಗುತ್ತಿದೆ. ದುರ್ನಾತ ಬೀರುವುದರ ಜತೆಗೆ ಸೊಳ್ಳೆ ಕಾಟವೂ ವಿಪರೀತ ಆಗಿದೆ ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿತ್ತು.

ಜನರಿಂದಲೇ ಪರಿಹಾರ, ಅಂಗಡಿಯೊಳಕ್ಕೆ ನೀರು :

ಭಾನುವಾರ ಪ್ಯಾರೀಸ್‌ ಜಂಕ್ಷನ್‌ ಮತ್ತು ಹಿಂದೂ ರುದ್ರಭೂಮಿ ಸಮೀಪವಿರುವ ಚರಂಡಿಯನ್ನು ಮೊಗವೀರಪಟ್ನ ನಿವಾಸಿಗಳು ಕಲ್ಲು ಕಟ್ಟುವ ಮೂಲಕ ಮುಚ್ಚಿದ್ದಾರೆ. ಇದರ ಪರಿಣಾಮವಾಗಿ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಉಳ್ಳಾಲ ಜಂಕ್ಷನ್ನಿನಲ್ಲಿ ಕೃತಕ ನೆರೆಯಾಯಿತು. ಅಂಗಡಿಗಳೊಳಗೂ ತ್ಯಾಜ್ಯ ನೀರು, ಮಳೆ ನೀರು ಹರಿಯಿತು. ಜನವಸತಿ ಪ್ರದೇಶಕ್ಕೆ ನೀರು ಹರಿಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳದ ಸ್ಥಳೀಯಾಡಳಿತ ಜಾಣಕುರುಡುತನ ಪ್ರದರ್ಶಿಸುತ್ತಿದೆ ಅನ್ನುವ ಆರೋಪ ಮೊಗವೀರಪಟ್ನ ನಿವಾಸಿಗಳದ್ದಾಗಿದೆ.

click me!